ADVERTISEMENT

ಮೆಟ್ರೊ: ಮೇಲ್ಸೇತುವೆಗೆ ರೆಕ್ಕೆ ಜೋಡಣೆ

ಆರ್.ವಿ. ರಸ್ತೆ–ಬೊಮ್ಮಸಂದ್ರ ಮಾರ್ಗದಲ್ಲಿ ಡಬಲ್‌ ಡೆಕ್ಕರ್ ಮೇಲ್ಸೇತುವೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2020, 20:35 IST
Last Updated 16 ಫೆಬ್ರುವರಿ 2020, 20:35 IST
ಡಬಲ್‌ ಡೆಕ್ಕರ್‌ ಮೇಲ್ಸೇತುವೆಯ ಮೊದಲ ಮಟ್ಟದಲ್ಲಿ ರೆಕ್ಕೆಗಳನ್ನು ಜೋಡಿಸಿರುವುದು
ಡಬಲ್‌ ಡೆಕ್ಕರ್‌ ಮೇಲ್ಸೇತುವೆಯ ಮೊದಲ ಮಟ್ಟದಲ್ಲಿ ರೆಕ್ಕೆಗಳನ್ನು ಜೋಡಿಸಿರುವುದು   

ಬೆಂಗಳೂರು:‘ನಮ್ಮ ಮೆಟ್ರೊ’ದಲ್ಲಿ ಇದೇ ಮೊದಲ ಬಾರಿಗೆ ನಿರ್ಮಾಣಗೊಳ್ಳುತ್ತಿರುವ ‘ಡಬಲ್‌ ಡೆಕ್ಕರ್’ ಮೇಲ್ಸೇತುವೆಯ ಬದಿ ರೆಕ್ಕೆ ಅಳವಡಿಸುವ ಕಾರ್ಯವನ್ನು ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಯಶಸ್ವಿಯಾಗಿ ಪೂರೈಸಿದೆ.

ಎರಡನೇ ಹಂತದಲ್ಲಿ ಆರ್.ವಿ. ರಸ್ತೆ–ಬೊಮ್ಮಸಂದ್ರ ಮಾರ್ಗದಲ್ಲಿ ಬಸ್‌ ಹಾಗೂ ರೈಲು ಸಂಚರಿಸುವ ರೀತಿಯಲ್ಲಿ ಈ ಮೇಲ್ಸೇತುವೆ ನಿರ್ಮಾಣವಾಗಲಿದೆ. ರಸ್ತೆ ಮಟ್ಟದ ಮೇಲ್ಸೇತುವೆ ಮೊದಲ ಮಟ್ಟದಲ್ಲಿ ರೆಕ್ಕೆಗಳನ್ನು ಜೋಡಿಸಲಾಗಿದೆ. ಇಡೀ ಕಾಮಗಾರಿಯಲ್ಲಿ ಇದು ಸಂಕೀರ್ಣವಾದ ಕಾರ್ಯವಾಗಿತ್ತು.

ಮೊದಲ ಮಟ್ಟದಲ್ಲಿ ಎರಡೂ ಬದಿಗಳಲ್ಲಿ ಎರಡು ರಸ್ತೆ ಮಾರ್ಗ ನಿರ್ಮಿಸಲಾಗಿದ್ದು, ಇಲ್ಲಿ ಬಸ್‌ಗಳು ಸಂಚರಿಸಲಿವೆ. ಎರಡನೇ ಮಟ್ಟದ ಮಾರ್ಗದಲ್ಲಿ ಮೆಟ್ರೊ ರೈಲು ಸಂಚರಿಸಲಿದೆ. ಅಲ್ಲದೆ, ನೆಲಮಟ್ಟದಲ್ಲಿ ತ್ರಿಪಥ ರಸ್ತೆ ಮಾರ್ಗವೂ ಇರಲಿದೆ.

ADVERTISEMENT

ರೆಕ್ಕೆ ಜೋಡಿಸಿ, 20 ಮೀಟರ್ ಅಗಲದ ರಸ್ತೆ ವಿಭಾಗದ ಕಾರ್ಯವನ್ನು ನಿಗಮವು ಪೂರೈಸಿದೆ. ಆರ್.ವಿ. ರಸ್ತೆಯಿಂದ ಮಾರೇನಹಳ್ಳಿ, ರಾಗಿಗುಡ್ಡ ಮತ್ತು ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ನಡುವೆ 3.2 ಕಿ.ಮೀ. ಉದ್ದ ಈ ಡಬಲ್‌ ಡೆಕ್ಕರ್‌ ಮೇಲ್ಸೇತುವೆ ತಲೆ ಎತ್ತಲಿದೆ.

ಮೆಟ್ರೊ ಒಂದನೇ ಹಂತದ ಮಾರ್ಗದ ಮೇಲೆಯೇ, ಎರಡನೇ ಹಂತದ ಮಾರ್ಗವನ್ನು ಇದೇ ಮೊದಲ ಬಾರಿಗೆ ನಿರ್ಮಾಣ ಮಾಡಲಾಗುತ್ತಿದೆ (ಹಸಿರು ಮಾರ್ಗದ ಮೇಲೆ ಹಳದಿ ಮಾರ್ಗ). ನಮ್ಮ ಮೆಟ್ರೊದ ಬೇರೆ ಯಾವುದೇ ಮಾರ್ಗದಲ್ಲಿ ಹೀಗೆ ಒಂದರ ಮೇಲೊಂದು ಮಾರ್ಗ ಹೋಗುವುದಿಲ್ಲ.

ರಾಘವೇಂದ್ರ ಸ್ವಾಮಿ ಮಠದ ಬಳಿಯ ರಾಗಿಗುಡ್ಡ ಮೆಟ್ರೊ ನಿಲ್ದಾಣ ನಿರ್ಮಾಣವಾಗಲಿದ್ದು, ಇಲ್ಲಿ ಎತ್ತರಿಸಿದ ರಸ್ತೆ ಮಾರ್ಗವನ್ನು ಸಂಪರ್ಕಿಸುವ ರ‍್ಯಾಂಪ್‌ ಕೂಡ ತಲೆ ಎತ್ತಲಿದೆ.ಈ ಮೇಲ್ಸೇತುವೆಯ ಕೇಂದ್ರಭಾಗದಲ್ಲಿ, ಅಂದರೆ ಜಯದೇವ ಆಸ್ಪತ್ರೆಯಲ್ಲಿ ಇಂಟರ್‌ಚೇಂಜ್‌ ನಿಲ್ದಾಣ ತಲೆಎತ್ತಿದೆ. ಈ ನಿಲ್ದಾಣದಲ್ಲಿ ಆರ್.ವಿ. ರಸ್ತೆ ಮತ್ತು ಬೊಮ್ಮಸಂದ್ರ ಕಾರಿಡಾರ್ ಹಾಗೂ ಗೊಟ್ಟಿಗೆರೆ ನಾಗವಾರ ಕಾರಿಡಾರ್‌ಗಳು ಸಂಧಿಸುತ್ತವೆ.

ಸಂಚಾರ ದಟ್ಟಣೆ ನಿಯಂತ್ರಣ
ಈ ಡಬಲ್‌ ಡೆಕ್ಕರ್‌ ಮೇಲ್ಸೇತುವೆ ನಿರ್ಮಾಣವಾಗಿ, ಮೆಟ್ರೊ ಸಂಚಾರ ಆರಂಭವಾದರೆ, ನಾಲ್ಕರಿಂದ ಏಳು ನಿಮಿಷಗಳಲ್ಲೇ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ (5 ಕಿ.ಮೀ. ದೂರ) ಸಂಪರ್ಕಿಸಬಹುದು. ರೂಪೇನ ಅಗ್ರಹಾರದಿಂದ ಈ ಮೇಲ್ಸೇತುವೆ ಬಳಸಿ ಸಂಚರಿಸಿದರೆ ಎಲೆಕ್ಟ್ರಾನಿಕ್‌ ಸಿಟಿಯನ್ನು 10 ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿ ತಲುಪಬಹುದು.

ಅಂಕಿ–ಅಂಶ

40% -ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಪ್ರಗತಿ

2.5 ಕಿ.ಮೀ. -ಮೆಟ್ರೊ ರೈಲು ಕಾಮಗಾರಿ ಮುಕ್ತಾಯ

0.8 ಕಿ.ಮೀ. -ರಸ್ತೆಮಟ್ಟದ ಮದ್ಯಭಾಗದ ಕಾಮಗಾರಿ ಪೂರ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.