ವಿಮಾನ ನಿಲ್ದಾಣದ ಬಳಿ ನಿರ್ಮಾಣಗೊಂಡಿರುವ ನಮ್ಮ ಮೆಟ್ರೊ ನೀಲಿ ಮಾರ್ಗ
ನೀಲಿ ಮಾರ್ಗದ ಒಟ್ಟು ಉದ್ದ: 58.19 ಕಿ.ಮೀ. | ಒಟ್ಟು ನಿಲ್ದಾಣಗಳ ಸಂಖ್ಯೆ: 30 | ಒಟ್ಟು ವೆಚ್ಚ: 14,788 ಕೋಟಿ
ಬೆಂಗಳೂರು: ಕೇಂದ್ರ ರೇಷ್ಮೆ ಮಂಡಳಿಯಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ನೀಲಿ ಮಾರ್ಗದ ಮೊದಲ ಹಂತದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ರೇಷ್ಮೆ ಮಂಡಳಿಯಿಂದ ಕೆ.ಆರ್. ಪುರವರೆಗೆ 2026ರ ಸೆಪ್ಟೆಂಬರ್ ಒಳಗೆ ಸಂಚಾರ ಆರಂಭಿಸುವ ಗುರಿಯನ್ನು ಬಿಎಂಆರ್‌ಸಿಎಲ್ ಇಟ್ಟುಕೊಂಡಿದೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಅತಿ ಹೆಚ್ಚು ಪ್ರಯಾಣಿಕರ ಒತ್ತಡ ಇರುವ ದೇಶದ ವಿಮಾನ ನಿಲ್ದಾಣಗಳಲ್ಲಿ ಮೂರನೇ ಸ್ಥಾನದಲ್ಲಿದೆ. 2021–22ರಲ್ಲಿ ಈ ವಿಮಾನ ನಿಲ್ದಾಣದ ಮೂಲಕ 1.63 ಕೋಟಿ ಜನರು ಪ್ರಯಾಣಿಸಿದ್ದರು. ಮೂರೇ ವರ್ಷದಲ್ಲಿ ವಿಮಾನದಲ್ಲಿ ಸಂಚರಿಸುವವರ ಸಂಖ್ಯೆ ಎರಡೂವರೆ ಪಟ್ಟು ಹೆಚ್ಚಾಗಿದೆ. 2024-25ರಲ್ಲಿ 4.2 ಕೋಟಿ ಜನರು ಪ್ರಯಾಣಿಸಿದ್ದಾರೆ. ನಮ್ಮ ಮೆಟ್ರೊ ನೀಲಿ ಮಾರ್ಗ ಪೂರ್ಣಪ್ರಮಾಣದಲ್ಲಿ ಆರಂಭಗೊಂಡರೆ ಶೇ 25ರಷ್ಟು ಜನರು ಮೆಟ್ರೊ ಮೂಲಕವೇ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಸಾಧ್ಯತೆ ಇದೆ.
ಕೇಂದ್ರ ರೇಷ್ಮೆ ಸಂಸ್ಥೆಯಿಂದ (ಸೆಂಟ್ರಲ್ ಸಿಲ್ಕ್ ಬೋರ್ಡ್) ಕೆ.ಆರ್.ಪುರದವರೆಗೆ (ಹಂತ 2ಎ) ಮತ್ತು ಕೆ.ಆರ್. ಪುರದಿಂದ ವಿಮಾನ ನಿಲ್ದಾಣದವರೆಗೆ (ಹಂತ 2ಬಿ) ಎಂದು ನೀಲಿ ಮಾರ್ಗವನ್ನು ಎರಡು ಹಂತವಾಗಿ ವಿಂಗಡಿಸಲಾಗಿತ್ತು. 2021ರ ಆಗಸ್ಟ್‌ನಲ್ಲಿ ಹಂತ 2ಎ ಕಾಮಗಾರಿ ಆರಂಭವಾಗಿತ್ತು. 2022ರ ಫೆಬ್ರುವರಿಯಲ್ಲಿ ಹಂತ 2ಬಿ ಕಾಮಗಾರಿ ಶುರುವಾಗಿತ್ತು.
ಹಂತ 2ಎ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ಆದರೆ, ಹಂತ 2ಬಿಯ ಕಾಮಗಾರಿ ಕೆ.ಆರ್. ಪುರದಿಂದ ಹೆಬ್ಬಾಳವರೆಗೆ ಬಹಳ ನಿಧಾನಗತಿಯಲ್ಲಿ ಸಾಗುತ್ತಿದೆ. ಹೆಬ್ಬಾಳದಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಮತ್ತೆ ವೇಗವಾಗಿ ನಡೆಯುತ್ತಿದೆ.
ಎಲ್ಲೆಲ್ಲಿ ನಿಲ್ದಾಣ?
ಕೇಂದ್ರ ರೇಷ್ಮೆ ಮಂಡಳಿ
ಎಚ್‌ಎಸ್‌ಆರ್ ಬಡಾವಣೆ
ಅಗರ
ಇಬ್ಬಲೂರು
ಬೆಳ್ಳಂದೂರು
ಕಾಡುಬೀಸನಹಳ್ಳಿ
ಕೋಡಿಬೀಸನಹಳ್ಳಿ
ಮಾರತ್‌ಹಳ್ಳಿ
ಇಸ್ರೊ
ದೊಡ್ದನೆಕ್ಕುಂದಿ
ಡಿಆರ್‌ಡಿಒ ಸ್ಪೋರ್ಟ್ಸ್ ಕಾಂಪ್ಲೆಕ್ಸ್
ಸರಸ್ವತಿ ನಗರ
ಕೃಷ್ಣರಾಜಪುರ
ಕಸ್ತೂರಿನಗರ
ಹೊರಮಾವು
ಎಚ್‌ಆರ್‌ಬಿಆರ್ ಬಡಾವಣೆ
ಕಲ್ಯಾಣ ನಗರ
ಎಚ್‌ಬಿಆರ್ ಬಡಾವಣೆ
ನಾಗವಾರ
ವೀರಣ್ಣಪಾಳ್ಯ
ಕೆಂಪಾಪುರ
ಹೆಬ್ಬಾಳ
ಕೊಡಿಗೇಹಳ್ಳಿ
ಜಕ್ಕೂರು ಕ್ರಾಸ್
ಯಲಹಂಕ
ಬಾಗಲೂರು ಕ್ರಾಸ್
ಬೆಟ್ಟಹಲಸೂರು
ದೊಡ್ಡಜಾಲ
ವಿಮಾನ ನಿಲ್ದಾಣ ನಗರ
ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಬೆಂಗಳೂರು ಮೆಟ್ರೊ ನೀಲಿ ಮಾರ್ಗ
ವೇಗದ ಮೆಟ್ರೊ: ಗಂಟೆಗೆ 50 ಕಿ.ಮೀ. ವೇಗದಲ್ಲಿ ಮೆಟ್ರೊ ಸಂಚಾರ
ನೀಲಿ ಮಾರ್ಗದಲ್ಲಿ ಸಂಚರಿಸಲಿರುವ ಮೆಟ್ರೊ ರೈಲುಗಳ ಸರಾಸರಿ ವಾಣಿಜ್ಯ ವೇಗ ಗಂಟೆಗೆ 50 ಕಿ.ಮೀ. ಇರಲಿದೆ.
ಪ್ರಸ್ತುತ ನಮ್ಮ ಮೆಟ್ರೊದ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ರೈಲುಗಳು ಗಂಟೆಗೆ 34 ಕಿ.ಮೀ. ವೇಗದಲ್ಲಿ ಚಲಿಸುತ್ತಿವೆ. ಸೋಮವಾರ ಆರಂಭವಾಗಿರುವ ಹಳದಿ ಮಾರ್ಗ, ನಿರ್ಮಾಣ ಹಂತದಲ್ಲಿ ಇರುವ ಗುಲಾಬಿ ಮಾರ್ಗದ ಸರಾಸರಿ ವೇಗ ಇಷ್ಟೇ ಇರಲಿದೆ.
ವಿಮಾನ ನಿಲ್ದಾಣಕ್ಕೆ ಹೋಗುವವರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಮೆಟ್ರೊಗಳ ‘ಸರಾಸರಿ ವಾಣಿಜ್ಯ ವೇಗ’(ಆವರೇಜ್ ಕರ್ಮಿಷಿಯಲ್ ಸ್ಪೀಡ್) ಹೆಚ್ಚು ಮಾಡಲಾಗಿದೆ. ಹೆಬ್ಬಾಳದಿಂದ ವಿಮಾನ ನಿಲ್ದಾಣದವರೆಗೆ ಮೆಟ್ರೊ ನಿಲ್ದಾಣಗಳ ಸಂಖ್ಯೆ ಕೂಡ ಅದೇ ಕಾರಣಕ್ಕೆ ಕಡಿಮೆ ಇರುವಂತೆ ಯೋಜನೆ ರೂಪಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.