ADVERTISEMENT

ಮೆಟ್ರೊ ಸೋಂಕು ಮುಕ್ತ ಕಾರ್ಯ ಚುರುಕು

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2020, 11:06 IST
Last Updated 10 ಮಾರ್ಚ್ 2020, 11:06 IST
ಸಾಂದರ್ಭೀಕ ಚಿತ್ರ
ಸಾಂದರ್ಭೀಕ ಚಿತ್ರ   

ಬೆಂಗಳೂರು: ವಿದೇಶದಿಂದ ನಗರಕ್ಕೆ ಬಂದ ಟೆಕಿಯೊಬ್ಬರಲ್ಲಿ ಕೋವಿಡ್‌–19 ಸೋಂಕು ಪತ್ತೆಯಾಗಿರುವುದು ದೃಢಪಟ್ಟಿರುವಂತೆಯೇ, ‘ನಮ್ಮ ಮೆಟ್ರೊ’ದ ನಿಲ್ದಾಣಗಳು ಹಾಗೂ ರೈಲಿನ ಬೋಗಿಗಳನ್ನು ಸೋಂಕು ಮುಕ್ತಗೊಳಿಸುವ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ.

ಪ್ರಯಾಣಿಕರು ನಿಯಮಿತವಾಗಿ ಸ್ಪರ್ಶಿಸುವ ರೈಲಿನ ಅಥವಾ ನಿಲ್ದಾಣದ ಭಾಗಗಳನ್ನು ಪ್ರತಿ ತಾಸು, ಅರ್ಧ ತಾಸಿಗೊಮ್ಮೆ ಸ್ವಚ್ಛಗೊಳಿಸಲಾಗುತ್ತಿದೆ.ಎಸ್ಕಲೇಟರ್ ಬದಿಯ ಹ್ಯಾಂಡಲ್, ಲಿಫ್ಟ್‌ಗಳ ಬಟನ್‌, ಗ್ರಿಲ್‌, ಎಎಫ್‌ಸಿ ಗೇಟ್‌, ಟಿಕೆಟ್‌ ಕೌಂಟರ್‌ಗಳನ್ನು ನಿಯಮಿತವಾಗಿ ಶುದ್ಧಗೊಳಿಸಲಾಗುತ್ತಿದೆ.ಈ ಕಾರ್ಯಕ್ಕಾಗಿಯೇ ಪ್ರತ್ಯೇಕ ಸ್ವಚ್ಛತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಮೊದಲಿಗಿಂತ, ಹೆಚ್ಚು ಬಾರಿ ಶೌಚಾಲಯಗಳು ಮತ್ತು ನಲ್ಲಿಗಳ ಮೇಲ್ಭಾಗವನ್ನು ತೊಳೆಯಲಾಗುತ್ತಿದೆ. ಕೈ ತೊಳೆಯಲು ಸಾಬೂನುಗಳನ್ನು ಇಡಲಾಗಿದೆ.ಶೌಚಾಲಯಗಳು ಮತ್ತು ನಲ್ಲಿಗಳ ಮೇಲ್ಭಾಗವನ್ನು ನಿಯಮಿತವಾಗಿ ಸೋಂಕು ಮುಕ್ತಗೊಳಿಸಲಾಗುತ್ತಿದೆ.

ADVERTISEMENT

ಪರಿಶೀಲನೆ: ಸೋಂಕು ಮುಕ್ತ ಕಾರ್ಯ ಸಮರ್ಪಕವಾಗಿ ನಡೆಯುತ್ತಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸುವುದಕ್ಕಾಗಿಯೇ ಪ್ರತಿ ವಿಭಾಗಕ್ಕೆ ಒಬ್ಬೊಬ್ಬ ಅಧಿಕಾರಿಯನ್ನು ನಿಯೋಜಿಸಲಾಗಿದೆ. ದಿನಕ್ಕೆ ಎಷ್ಟು ಬಾರಿ ಬೋಗಿ, ನಿಲ್ದಾಣ ಅಥವಾ ಶೌಚಾಲಯವನ್ನು ಸ್ವಚ್ಛಗೊಳಿಸಲಾಯಿತು ಎಂಬುದಕ್ಕೆ ಪ್ರತ್ಯೇಕ ದಾಖಲೆಯನ್ನು ನಿರ್ವಹಿಸಲಾಗುತ್ತಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ಅಧಿಕಾರಿಯೊಬ್ಬರು ಹೇಳಿದರು.

ಸಿಬ್ಬಂದಿಗೆ ಮುಖಗವಸು:ಪ್ರಯಾಣಿಕರನ್ನು ತಪಾಸಣೆ ಮಾಡುವ ಸಿಬ್ಬಂದಿಗೆ ಮುಖಗವಸು ಹಾಕಿಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ.

ಜಾಗೃತಿ ಘೋಷಣೆ: ಹದಿನೈದು ದಿನಗಳಿಂದಲೇ ಮೆಟ್ರೊ ನಿಲ್ದಾಣಗಳಲ್ಲಿ ಕೋವಿಡ್‌–19 ಸೋಂಕು ಕುರಿತು ಜಾಗೃತಿ ಸಾಲುಗಳನ್ನು, ಬ್ಯಾನರ್‌ಗಳನ್ನು ಪ್ರದರ್ಶಿಸಲಾಗುತ್ತಿದೆ. ಈಗ ರೈಲುಗಳಲ್ಲಿಯೂ ‘ಕೋವಿಡ್‌ ಕುರಿತು ಆತಂಕ ಬೇಡ’ ಎಂಬ ಘೋಷಣೆಗಳನ್ನು ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.