ADVERTISEMENT

ಕಾಲಮಿತಿಯಲ್ಲಿ ಪೂರ್ಣಗೊಳ್ಳದ ಕಾಮಗಾರಿಗಳು: ಉಪನಗರ ರೈಲು, ಮೆಟ್ರೊಗೆ ಬೇಕು ವೇಗ

ಹೆಚ್ಚುತ್ತಲೇ ಇದೆ ವಾಹನದಟ್ಟಣೆ

ಬಾಲಕೃಷ್ಣ ಪಿ.ಎಚ್‌
Published 4 ಜುಲೈ 2025, 1:06 IST
Last Updated 4 ಜುಲೈ 2025, 1:06 IST
<div class="paragraphs"><p>ನಾಗವಾರದಲ್ಲಿ ನಮ್ಮ ಮೆಟ್ರೊ ನೀಲಿ ಮತ್ತು ಗುಲಾಬಿ ಮಾರ್ಗಗಳು ಸೇರುವ ಜಂಕ್ಷನ್‌ನಲ್ಲಿ&nbsp;ಮೆಟ್ರೊ ನಿಲ್ದಾಣ ಕಾಮಗಾರಿ ನಡೆಯುತ್ತಿದೆ </p></div>

ನಾಗವಾರದಲ್ಲಿ ನಮ್ಮ ಮೆಟ್ರೊ ನೀಲಿ ಮತ್ತು ಗುಲಾಬಿ ಮಾರ್ಗಗಳು ಸೇರುವ ಜಂಕ್ಷನ್‌ನಲ್ಲಿ ಮೆಟ್ರೊ ನಿಲ್ದಾಣ ಕಾಮಗಾರಿ ನಡೆಯುತ್ತಿದೆ

   

ಪ್ರಜಾವಾಣಿ ಚಿತ್ರ: ರಂಜು ಪಿ.

ಬೆಂಗಳೂರು: ನಗರದಲ್ಲಿ ಸುರಂಗ ರಸ್ತೆ ನಿರ್ಮಿಸುವ ಬದಲು ಸ್ಥಗಿತಗೊಂಡಿರುವ ಬೆಂಗಳೂರು ಉಪನಗರ ರೈಲು ಯೋಜನೆ, ನಿಧಾನಗತಿಯಲ್ಲಿ ಸಾಗುತ್ತಿರುವ ನಮ್ಮ ಮೆಟ್ರೊ ಹೊಸ ಮಾರ್ಗಗಳ ಕಾಮಗಾರಿಗಳಿಗೆ ವೇಗ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ADVERTISEMENT

ಸಾರ್ವಜನಿಕ ಸಾರಿಗೆ ಬಳಸುವುದರ ಮೂಲಕ ನಗರದಲ್ಲಿ ವಾಹನದಟ್ಟಣೆ ಕಡಿಮೆ ಮಾಡಬಹುದು. 2025ರ ಹೊತ್ತಿಗೆ ಐದು ಮಾರ್ಗಗಳಲ್ಲಿ ಮೆಟ್ರೊ ಸಂಚರಿಸಬೇಕಿತ್ತು. ಆದರೆ, ಇಂದಿಗೂ ಎರಡೇ ಮಾರ್ಗದಲ್ಲಿ ಮೆಟ್ರೊ ಸಂಚಾರವಿದೆ. ನಮ್ಮ ಮೆಟ್ರೊ ಕಾಮಗಾರಿಗಳು ಮಂದಗತಿಯಲ್ಲಿ ಸಾಗಿದ್ದು, ಯಾವ ಮಾರ್ಗದಲ್ಲೂ ಪೂರ್ವನಿಗದಿಯಂತೆ ಸಂಚಾರ ಆರಂಭವಾಗಿಲ್ಲ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದರು.

ನಿಧಾನಗತಿಯಲ್ಲಿರುವ ಯೋಜನೆಗಳನ್ನು ಬೇಗ ಪೂರ್ಣಗೊಳಿಸಿದರೆ, ಆರಂಭವಾಗಬೇಕಾದ ಯೋಜನೆಗಳನ್ನು ಶೀಘ್ರವೇ ಶುರು ಮಾಡಿ ಕಾಲಮಿತಿಯೊಳಗೆ ಮುಕ್ತಾಯಗೊಳಿಸಿ, ರೈಲು ಸಂಚಾರ ಆರಂಭಿಸಿದರೆ ಸುರಂಗ ಮಾರ್ಗದ ಅಗತ್ಯವೇ ಇಲ್ಲ ಎಂದು ವಕೀಲ ಎಚ್. ರಮೇಶ್‌, ಸಾಫ್ಟ್‌ವೇರ್‌ ಎಂಜಿನಿಯರ್ ಸೃಜನ್‌ ಪಿ. ಮತ್ತಿತರರು ಅಭಿಪ್ರಾಯಪಟ್ಟರು.

2011ರಲ್ಲಿಯೇ ನೇರಳೆ ಮಾರ್ಗದಲ್ಲಿ ಬೈಯಪ್ಪನಹಳ್ಳಿಯಿಂದ ಎಂ.ಜಿ.ರಸ್ತೆವರೆಗೆ ಮೆಟ್ರೊ ಸಂಚಾರ ಆರಂಭವಾಗಿತ್ತು. ಆದರೆ ಪೂರ್ಣ ಪ್ರಮಾಣದಲ್ಲಿ ಶುರುವಾಗಿದ್ದು 2023ರಲ್ಲಿ. ಈಗ ಚಲ್ಲಘಟ್ಟ ಟರ್ಮಿನಲ್‌ನಿಂದ ವೈಟ್‌ಫೀಲ್ಡ್‌ ವರೆಗಿನ 43.49 ಕಿ.ಮೀ.ವರೆಗೆ ಸಂಚಾರ ಹೊಂದಿದೆ. ಹಸಿರು ಮಾರ್ಗದಲ್ಲಿ 2014ರಲ್ಲಿ ಸಂಚಾರ ಆರಂಭವಾಗಿದ್ದರೂ 2024ಕ್ಕೆ ಪೂರ್ಣಗೊಂಡಿತು. ಹಂತ ಹಂತವಾಗಿ 33.5 ಕಿ.ಮೀ. ದೂರದ ಕಾಮಗಾರಿ ಮುಕ್ತಾಯವಾಗಿದ್ದು ಈಗ ಮಾದಾವರದಿಂದ ಸಿಲ್ಕ್‌ ಇನ್‌ಸ್ಟಿಟ್ಯೂಟ್‌ವರೆಗೆ ಮೆಟ್ರೊ ಸಂಚರಿಸುತ್ತಿದೆ. ಈ ಎರಡು ಮಾರ್ಗಗಳಲ್ಲಿ ಪ್ರತಿ ದಿನ ಸರಾಸರಿ 7.24 ಲಕ್ಷ ಪ್ರಯಾಣಿಕರು ಸಂಚರಿಸುತ್ತಾರೆ.

ರಾಷ್ಟ್ರೀಯ ವಿದ್ಯಾಲಯ–ಬೊಮ್ಮಸಂದ್ರ (18.8 ಕಿ.ಮೀ.) ಸಂಪರ್ಕಿಸುವ ನಮ್ಮ ಮೆಟ್ರೊ ಹಳದಿ ಮಾರ್ಗದ ಕಾಮಗಾರಿ 2018ರಲ್ಲಿ ಆರಂಭವಾಗಿತ್ತು. 2021ರಲ್ಲಿ ಕೊನೆಗೊಳ್ಳಬೇಕಿತ್ತು. ಕೋವಿಡ್‌ ಇನ್ನಿತರ ಕಾರಣದಿಂದ ತಡವಾಗಿತ್ತು. 2023ಕ್ಕೆ ಆರಂಭಿಸಲು ಗುರಿ ಪುನರ್‌ನಿಗದಿಯಾಗಿತ್ತು. ಆದರೆ, ಕಾಮಗಾರಿ ಮತ್ತೊಂದು ವರ್ಷ ತಡವಾಗಿ 2024ರ ಜೂನ್‌ಗೆ ಪೂರ್ಣವಾಯಿತು. ಈ ಮಾರ್ಗಕ್ಕೆ ಬೇಕಾದ ರೈಲು ಕೋಚ್‌ಗಳು ಸಕಾಲದಲ್ಲಿ ಪೂರೈಕೆಯಾಗದ ಕಾರಣ ಕಾಮಗಾರಿ ಮುಗಿದು ವರ್ಷವಾದರೂ ಸಂಚಾರ ಆರಂಭವಾಗಿಲ್ಲ. 

2019ರಲ್ಲಿ ಆರಂಭವಾಗಿರುವ ಗುಲಾಬಿ ಮಾರ್ಗದ ಕಾಮಗಾರಿ 2023ರಲ್ಲಿ ಮುಕ್ತಾಯವಾಗಬೇಕಿತ್ತು. ಆದರೆ, ಇನ್ನೂ ಪೂರ್ಣಗೊಂಡಿಲ್ಲ. ಕಾಳೇನ ಅಗ್ರಹಾರ–ನಾಗವಾರ ನಡುವೆ ನಿರ್ಮಾಣಗೊಳ್ಳುತ್ತಿರುವ ಈ ಮಾರ್ಗವು 21 ಕಿ.ಮೀ. ಉದ್ದವಿದ್ದು, 2024ಕ್ಕೆ ಪೂರ್ಣಗೊಳಿಸುವ ಗುರಿ ಮರುನಿಗದಿಯಾಗಿತ್ತು. ಆ ನಂತರ 2025ರ ಅಂತ್ಯಕ್ಕೆ ಮುಕ್ತಾಯಗೊಳಿಸಲು ನಿರ್ಧರಿಸಲಾಗಿತ್ತು. ಆದರೆ, ಈಗ 2026ರ ಆಗಸ್ಟ್‌ ವೇಳೆಗೆ ಸಂಚಾರ ಆರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಹೇಳುತ್ತಿದ್ದಾರೆ.

ಕೇಂದ್ರ ರೇಷ್ಮೆ ಮಂಡಳಿಯಿಂದ ದೇವನಹಳ್ಳಿಯ ಕೇಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ನೀಲಿ ಮಾರ್ಗದ (58 ಕಿ.ಮೀ.) ಕಾಮಗಾರಿ ಪೂರ್ವನಿಗದಿಯಂತೆ 2024ಕ್ಕೆ ಮುಕ್ತಾಯಗೊಳ್ಳಬೇಕಿತ್ತು. ಸದ್ಯ 2027ಕ್ಕೆ ಸಂಚಾರ ಆರಂಭಿಸುವ ಗುರಿಯನ್ನು ಬಿಎಂಆರ್‌ಸಿಎಲ್‌ ಹೊಂದಿದೆ.

ಕೆಂಪಾಪುರ–ಜೆ.ಪಿ.ನಗರ ನಾಲ್ಕನೇ ಹಂತ ಹಾಗೂ ಹೊಸಹಳ್ಳಿ–ಕಡಬಗೆರೆ ಸಂಪರ್ಕಿಸುವ ಕಿತ್ತಳೆ ಮಾರ್ಗಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಡಬಲ್‌ ಡೆಕರ್‌ ಯೋಜನೆಯನ್ನು ಸೇರಿಸಲು ಮರುಸರ್ವೆ ನಡೆಯುತ್ತಿದೆ.

ಸರ್ಜಾಪುರ–ಹೆಬ್ಬಾಳ ಸಂಪರ್ಕಿಸುವ ಕೆಂಪು ಮಾರ್ಗಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿ ಆರು ತಿಂಗಳು ಕಳೆದರೂ ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕಿಲ್ಲ. ಈ ಯೋಜನೆಯ ಅಂದಾಜು ವೆಚ್ಚ ಅಧಿಕವಾಗಿರುವುದು ಏಕೆ ಎಂದು ಪ್ರಶ್ನಿಸಿರುವ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು, ಬಿಎಂಆರ್‌ಸಿಎಲ್‌ನಿಂದ ಈ ಬಗ್ಗೆ ವಿವರಣೆ ಕೇಳಿದೆ.

ತಾಂತ್ರಿಕ ತೊಂದರೆ, ಇನ್ನಿತರ ಅಡೆತಡೆಗಳನ್ನು ಸರಿಪಡಿಸಿಕೊಂಡು ಜನ ಸಂಚಾರಕ್ಕೆ ಸಾರ್ವಜನಿಕ ಸಾರಿಗೆ ಒದಗಿಸಬೇಕು ಎಂಬುದು ಜನರ ಒತ್ತಾಯವಾಗಿದೆ.

ಕಲ್ಯಾಣನಗರದಲ್ಲಿ ನಮ್ಮ ಮೆಟ್ರೊ ನೀಲಿ ಮಾರ್ಗಕ್ಕೆ ಸಿದ್ಧವಾಗುತ್ತಿರುವ ಪಿಲ್ಲರ್‌ಗಳು

ಕಲ್ಯಾಣನಗರದಲ್ಲಿ ನಮ್ಮ ಮೆಟ್ರೊ ನೀಲಿ ಮಾರ್ಗಕ್ಕೆ ಸಿದ್ಧವಾಗುತ್ತಿರುವ ಪಿಲ್ಲರ್‌ಗಳು

ಜನ ಏನಂತಾರೆ?

ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಿ ಸುರಂಗ ಮಾರ್ಗ ನಿರ್ಮಿಸಲು ರಾಜ್ಯ ಸರ್ಕಾರ ಹೊರಟಿರುವುದು ಜನರಿಗೆ ಅಥವಾ ನಗರಕ್ಕೆ ಒಳ್ಳೆಯದು ಮಾಡಲು ಅಲ್ಲ. ಸರ್ಕಾರದ ಕೆಲವರು ಕಮಿಷನ್‌ ಹೊಡೆಯಲು ಮಾಡಿದಂತಿದೆ. ಬೆಂಗಳೂರಿನ ದಟ್ಟಣೆ ಕಡಿಮೆ ಮಾಡಲು ಮೆಟ್ರೊ ಬಸ್‌ ವ್ಯವಸ್ಥೆಯನ್ನು ಸದೃಢಗೊಳಿಸಬೇಕು. ಇನ್ನಷ್ಟು ಖಾಸಗಿ ವಾಹನಗಳು ರಸ್ತೆಗೆ ಇಳಿಯುವಂತೆ ಮಾಡಬಾರದು.

-ಅಶ್ವತ್ಥನಾರಾಯಣ ಕೆ. ಆರ್‌.ಟಿ. ನಗರ

ನಮ್ಮ ಮೆಟ್ರೊ ಕಾಮಗಾರಿಗಳನ್ನು ಬೇಗ ಪೂರ್ಣಗೊಳಿಸಿ ರೈಲು ಸಂಚರಿಸುವಂತೆ ಮಾಡಬೇಕು. ಇಂಟರ್‌ಜೇಂಜ್‌ಗಾಗಿ ಈಗ ಮೆಜೆಸ್ಟಿಕ್‌ಗೆ ಹೋಗಬೇಕು. ಅದರ ಬದಲು ನಗರದ ಬೇರೆ ಬೇರೆ ಭಾಗಗಳಲ್ಲಿ ಇಂಟರ್‌ಚೇಂಜ್‌ಗಳನ್ನು ಮಾಡಬೇಕು. ಅನಗತ್ಯವಾಗಿ ಸುರಂಗಮಾರ್ಗ ನಿರ್ಮಿಸುವುದನ್ನು ಕೈಬಿಡಬೇಕು. ಚಂದನ್‌ ನಂಜನಗೂಡು

-ಪ್ರಸನ್ನಕುಮಾರ್‌, ಕಲಾವಿದ ಬೆಂಗಳೂರು

ನೆಲದ ಮೇಲೆ ರಸ್ತೆ ನಿರ್ಮಿಸುವುದು ಸುಲಭ. ಸುರಂಗ ಮಾರ್ಗಗಳನ್ನು ನಿರ್ಮಿಸುವುದು ಹೆಚ್ಚು ವೆಚ್ಚದಾಯಕ. ಅಲ್ಲದೇ ಸುರಂಗ ತೋಡಿದರೆ ಅಂತರ್ಜಲ ಇನ್ನಷ್ಟು ಕುಸಿಯುತ್ತದೆ. ಇದರಿಂದ ಪರಿಸರಕ್ಕೂ ಹಾನಿ. ವಾಹನದಟ್ಟಣೆಯೂ ಕಡಿಮೆಯಾಗುವುದಿಲ್ಲ.

-ಮಧುಸೂದನ್‌ ಡಿಪ್ಲೊಮಾ ಎಂಜಿನಿಯರ್‌

ವೈಜ್ಞಾನಿಕವಾಗಿ ಯೋಚಿಸದೇ ಸುರಂಗ ಮಾರ್ಗ ಯೋಜನೆ ರೂಪಿಸಿರುವಂತೆ ಇದೆ. ಮೆಟ್ರೊ ಸಂಪರ್ಕ ಯೋಜನೆಗಳು ಎಲ್ಲಿ ಅನುಷ್ಠಾನಗೊಳ್ಳುತ್ತಿವೆಯೋ ಅಲ್ಲೇ ಸುರಂಗ ಮಾರ್ಗಗಳೂ ಬರುತ್ತಿವೆ. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆಯಂತಾಗಿದೆ.

-ಕವಿತಾ ಕೆ. ಜಯನಗರ

ಉಪನಗರ ಯೋಜನೆ ಸ್ಥಗಿತ

ಬೆಂಗಳೂರು ಉಪನಗರ ಯೋಜನೆಯ (ಬಿಎಸ್‌ಆರ್‌ಪಿ) ಕಾರಿಡಾರ್‌ಗಳ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿತ್ತು. ಕಳೆದ ನಾಲ್ಕು ತಿಂಗಳಿನಿಂದ ಸಂಪೂರ್ಣ ಸ್ಥಗಿತಗೊಂಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ತಿಕ್ಕಾಟದಿಂದ ಈ ಪರಿಸ್ಥಿತಿ ಉಂಟಾಗಿದೆ. ನಗರದ ವಾಹನದಟ್ಟಣೆಯನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಉಪನಗರ ರೈಲು ಯೋಜನೆಯ ಕಾಮಗಾರಿಯನ್ನು ಮತ್ತೆ ಆರಂಭಿಸಬೇಕು. ಶೀಘ್ರ ರೈಲು ಸಂಚರಿಸುವಂತೆ ಮಾಡಬೇಕು ಎಂದು ರಾಜಾಜಿನಗರದ ರಾಘವೇಂದ್ರ ಶೆಟ್ಟಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.