ADVERTISEMENT

ಮದ್ಯಪ್ರಿಯರಿಗೆ ‘ನಮ್ಮ ಮೆಟ್ರೋ’ದಿಂದ ಶೀಘ್ರದಲ್ಲೇ ಗುಡ್ ನ್ಯೂಸ್!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಫೆಬ್ರುವರಿ 2026, 11:12 IST
Last Updated 19 ಫೆಬ್ರುವರಿ 2026, 11:12 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮವು (ಬಿಎಂಆರ್‌ಸಿಎಲ್‌) ಮದ್ಯಪ್ರಿಯರಿಗೆ ಶೀಘ್ರದಲ್ಲೇ ಸಿಹಿ ಸುದ್ದಿ ನೀಡಲಿದೆ ಎನ್ನಲಾಗುತ್ತಿದೆ.

'ನಮ್ಮ ಮೆಟ್ರೋ' ರೈಲುಗಳಲ್ಲಿ ಪ್ರಯಾಣಿಸುವವರು, ಸಂಪೂರ್ಣ ಪ್ಯಾಕ್‌ ಮಾಡಿಕೊಂಡು ಮದ್ಯದ ಬಾಟಲಿಗಳನ್ನು ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗುತ್ತದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ADVERTISEMENT

ಈ ಕ್ರಮಕ್ಕೆ ಬಿಎಂಆರ್‌ಸಿಎಲ್‌ನಿಂದ ತಾತ್ವಿಕ ಒಪ್ಪಿಗೆ ದೊರೆತಿದೆ. ಇತ್ತೀಚೆಗೆ ನಡೆದ ನಿಗಮದ ಸಭೆ ಸೇರಿದಂತೆ ಹಲವು ಸಂದರ್ಭಗಳಲ್ಲಿ ಈ ಕುರಿತು ಚರ್ಚಿಸಲಾಗಿದೆ. ಅನುಮೋದನೆ ಸಿಗುತ್ತಿದ್ದಂತೆ, ಮೆಟ್ರೋ ನಿಯಮಾವಳಿಯಲ್ಲಿ ಮಾರ್ಪಾಡು ಮಾಡಿಕೊಳ್ಳಲಾಗುವುದು ಎಂದು ನಿಗಮವು ತಿಳಿಸಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

'ನಾವು ದೆಹಲಿ ಮಾದರಿಯನ್ನು ಅನುಸರಿಸುತ್ತೇವೆ. ಸದ್ಯ ದೆಹಲಿ ಮೆಟ್ರೋದ ವಿಮಾನ ನಿಲ್ದಾಣ ಮಾರ್ಗದಲ್ಲಿ ಮದ್ಯ ಸಾಗಿಸಲು ಅವಕಾಶವಿದೆ. ನಮ್ಮ ಮೆಟ್ರೋ ಹಾಗೂ ವಿಮಾನ ನಿಲ್ದಾಣದ ನಡುವಣ ಸಂಪರ್ಕ ಸಾಕಾರಗೊಳ್ಳುತ್ತಿದ್ದಂತೆ, ಮದ್ಯ ಸಾಗಿಸಲು ಅವಕಾಶ ನೀಡಲಾಗುವುದು. ಅದಕ್ಕೆ, ಇನ್ನೆರಡು ವರ್ಷಗಳು ಬೇಕಾಗಬಹುದು' ಎಂದು ಮೂಲಗಳು ತಿಳಿಸಿವೆ.

ಸದ್ಯ ಬಿಎಂಆರ್‌ಸಿಎಲ್‌, 58 ನಿಷೇಧಿತ ವಸ್ತುಗಳನ್ನು ಪಟ್ಟಿಮಾಡಿದೆ. ಅದರಲ್ಲಿ, ಸ್ಫೋಟಕ, ಶಸ್ತ್ರಾಸ್ತ್ರ, ಚೂಪಾದ ವಸ್ತು, ರಸಾಯನಿಕ ಹಾಗೂ ಸುಲಭವಾಗಿ ದಹನಗೊಳ್ಳಬಲ್ಲ ಪದಾರ್ಥಗಳೂ ಸೇರಿವೆ. ಆಲ್ಕೊಹಾಲ್‌, ಸ್ಪಿರಿಟ್‌ ದಹನಗೊಳ್ಳಬಲ್ಲ ವಸ್ತುಗಳ ಪಟ್ಟಿಯಲ್ಲಿವೆ.

'ಮೆಟ್ರೋ ರೈಲುಗಳಲ್ಲಿ ಮದ್ಯ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲು ನಿರ್ದಿಷ್ಟ ಕಾರಣವಿಲ್ಲ. ಜನರು, ಸದ್ಯ ಮದ್ಯ ಸೇವಿಸಿಯೂ ಪ್ರಯಾಣಿಸುತ್ತಿದ್ದಾರೆ. ಆದರೆ, ಅದು ಮಿತಿ ಮೀರಿರಬಾರದು' ಎಂಬುದಾಗಿ ಅಧಿಕಾರಿಯೊಬ್ಬರು ಹೇಳಿರುವುದಾಗಿಯೂ ಉಲ್ಲೇಖವಾಗಿದೆ. ಆದರೆ, ಮಿತಿಯ ಪ್ರಮಾಣವೆಷ್ಟು? ಎಂಬುದನ್ನು ಸ್ಪಷ್ಟವಾಗಿ ಹೇಳಿಲ್ಲ.

'ಸಾರ್ವಜನಿಕ ಸಾರಿಗೆಯಲ್ಲಿ ಮದ್ಯ ತೆಗೆದುಕೊಂಡು ಹೋಗಲು ನಿರ್ಬಂಧ ವಿಧಿಸಿರುವುದೇಕೆ? ಎಂಬ ಪ್ರಶ್ನೆ ಹಲವು ವರ್ಷಗಳಿಂದಲೂ ಎದುರಾಗುತ್ತಿದೆ. ಮೆಟ್ರೋ ರೈಲುಗಳಲ್ಲಿ ತಿನ್ನಲು ಅಥವಾ ಕುಡಿಯಲು ಅವಕಾಶಗಳಿಲ್ಲ. ಆದರೆ, ಮದ್ಯವನ್ನು ಇತರ ಸಾಮಗ್ರಿಗಳಂತೆ ಸೂಕ್ತ ರೀತಿಯಲ್ಲಿ ಪ್ಯಾಕ್‌ ಮಾಡಿಕೊಂಡು ಕೊಂಡೊಯ್ದರೆ ಯಾವುದೇ ತೊಂದರೆಯಾಗದು ಎಂಬುದಾಗಿ ಕೆಲವರು ಗಮನ ಸೆಳೆದಿದ್ದಾರೆ' ಎಂದು ಅಧಿಕಾರಿ ಹೇಳಿದ್ದಾರೆ.

'ಮೆಟ್ರೋ ರೈಲುಗಳಲ್ಲಿ ಮದ್ಯದ ಬಾಟಲಿಗಳನ್ನು ಕೊಂಡೊಯ್ಯಲು ಅನುಮತಿಸುವ ಕುರಿತು ಚರ್ಚೆಯಾಗುತ್ತಿದೆ' ಎಂದು ಬಿಎಂಆರ್‌ಸಿಎಲ್‌ ನಿರ್ದೇಶಕ ಸುಮಿತ್‌ ಭಟ್ನಗರ್‌ ತಿಳಿಸಿದ್ದಾರೆ ಎಂದೂ ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.