ADVERTISEMENT

ಮೆಟ್ರೊ 3ನೇ ಹಂತದ ಯೋಜನೆಗೆ ಭೂ ಸ್ವಾಧೀನ: ದೇವಾಲಯ, ಸರ್ಕಾರಿ ಕಚೇರಿ ಭೂಮಿ ಬಳಕೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 23:51 IST
Last Updated 31 ಜುಲೈ 2025, 23:51 IST
<div class="paragraphs"><p>‘ನಮ್ಮ&nbsp;ಮೆಟ್ರೊ’</p></div>

‘ನಮ್ಮ ಮೆಟ್ರೊ’

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ನಮ್ಮ ಮೆಟ್ರೊ 3ನೇ ಹಂತಕ್ಕೆ ಬನಶಂಕರಿ ದೇವಸ್ಥಾನ, ಭಾರತೀಯ ಭೂ ಸರ್ವೇಕ್ಷಣಾ ಇಲಾಖೆ (ಜಿಐಎಸ್‌), ಎನ್‌ಸಿಇಆರ್‌ಟಿ, ಪಿಇಎಸ್ ವಿಶ್ವವಿದ್ಯಾಲಯ, ಬಿಎಂಟಿಸಿ ಬಸ್ ಡಿಪೊ ಮತ್ತು ರುದ್ರಭೂಮಿಯ ಜಮೀನನ್ನು ಬಳಸಿಕೊಳ್ಳಲಾಗುತ್ತದೆ.

ADVERTISEMENT

‘ಪ್ರಜಾವಾಣಿ’ಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ಮೂರನೇ ಹಂತದ 44.8 ಕಿ.ಮೀ. ಮಾರ್ಗವು ಹೊರ ವರ್ತುಲ ರಸ್ತೆ ಸಂಪರ್ಕಿಸಲಿದ್ದು, ಮಾಗಡಿ ರಸ್ತೆ ಮೂಲಕ ಸಂಪರ್ಕ ವಿಸ್ತರಿಸುತ್ತದೆ. ‘ಕಿತ್ತಲೆ ಮಾರ್ಗ’ ಎಂದು ಕರೆಯುವ ಈ ಯೋಜನೆಯು 2029ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಮೆಟ್ರೊ ಸಂಪರ್ಕ ಜಾಲವು 222.2 ಕಿ.ಮೀ.ಗೆ ವಿಸ್ತರಣೆಯಾಗಲಿದೆ.

ಜಪಾನ್‌ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆಯು (ಜೆಐಸಿಎ) ಈ ಯೋಜನೆಗೆ ₹6,770 ಕೋಟಿ ನೀಡಲು ಒಪ್ಪಿದ್ದು, 2026ರ ಮಾರ್ಚ್ 31ರ ಒಳಗೆ ಒಪ್ಪಂದ ಮಾಡಿಕೊಳ್ಳಲಿದೆ. ಸಿವಿಲ್ ಕಾಮಗಾರಿಗಳಿಗೆ ಜೆಐಸಿಎ ಅನುದಾನ ನೀಡಲಿದೆ.

ಡಬಲ್ ಡೆಕರ್‌ ಮೇಲ್ಸೇತುವೆ ಯೋಜನೆಯಿಂದಾಗಿ ಮೂರನೇ ಹಂತದ ಎರಡು ಕಾರಿಡಾರ್‌ಗಳಿಗೆ ಬೇಕಾಗಿರುವ ಜಮೀನಿನ ವಿಸ್ತೀರ್ಣ 70 ಸಾವಿರ ಚದರ ಮೀಟರ್‌ಗೆ ಏರಿಕೆಯಾಗಿದೆ. ವಿಸ್ತೃತ ಯೋಜನಾ ವರದಿ ಪ್ರಕಾರ ಬೇಕಾಗಿರುವ ಜಮೀನು 5,98,828 ಚದರ ಮೀಟರ್‌. ಆದರೆ, ಈಗ ಬಿಎಂಆರ್‌ಸಿಎಲ್‌ಗೆ 6,72,117 ಚದರ ಮೀಟರ್ ಅಗತ್ಯವಿದೆ.

‘ಮೆಟ್ರೊ ಯೋಜನೆಗಳಿಗೆ ಜಮೀನು ಬೇಕಾಗುತ್ತದೆ. ಇದೇ ಮಾರ್ಗದಲ್ಲಿ ಡಬಲ್‌ ಡೆಕರ್ ಮೇಲ್ಸೇತುವೆ ನಿರ್ಮಾಣ ಮಾಡಬೇಕಾಗಿರುವ ಕಾರಣ ಹೆಚ್ಚುವರಿ ಜಮೀನಿನ ಅಗತ್ಯವಿದೆ. ಸಾಮಾನ್ಯಕ್ಕಿಂತ ಈ ಮಾರ್ಗದ ವಯಾಡಕ್ಟ್‌ ಅಗಲವಾಗಿರುತ್ತದೆ. ವಸತಿ ಕಟ್ಟಡಗಳು, ಕಲ್ಯಾಣಮಂಟಪಗಳು, ಸಣ್ಣ ಆಸ್ಪತ್ರೆಗಳ ಮುಂದಿನ ಭಾಗವನ್ನು ಬಿಎಂಆರ್‌ಸಿಎಲ್ ಸ್ವಾಧೀನ ಪಡಿಸಿಕೊಳ್ಳುತ್ತದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಬನಶಂಕರಿ ದೇವಾಲಯವು ಸುಮಾರು ಮೂರು ಎಕರೆ ಖಾಲಿ ಜಾಗ ನೀಡಲಿದ್ದು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಗಿರಿನಗರ ಪೊಲೀಸ್ ಠಾಣೆಯಿಂದಲೂ ಜಮೀನು ಬೇಕಾಗುತ್ತದೆ. ಜರಗನಹಳ್ಳಿಯಲ್ಲಿರುವ ಭಾರತೀಯ ಭೂ ಸರ್ವೇಕ್ಷಣಾ ಇಲಾಖೆಯು 7,388.28 ಚದರ ಮೀಟರ್ ನೀಡಲಿದ್ದು, ಕಂದಾಯ ಇಲಾಖೆಯು ಹೊಸಕೆರೆಹಳ್ಳಿಯಲ್ಲಿ 4,594 ಚದರ ಮೀಟರ್ ಜಮೀನು ನೀಡಲಿದೆ. ಇದರಲ್ಲಿ ಸ್ಮಶಾನದ ಒಂದು ಭಾಗವೂ ಸೇರಿದೆ’ ಎಂದು ಅಧಿಕಾರಿ ವಿವರಿಸಿದರು. 

‘ಬಿಎಂಆರ್‌ಸಿಎಲ್‌ 3–4 ತಿಂಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ನಿರೀಕ್ಷೆಯಿದೆ. ಅಂತಿಮ ಅಧಿಸೂಚನೆ ಪ್ರಕಟವಾದ ಬಳಿಕ, ಭೂಮಾಲೀಕರಿಗೆ ನೀಡುವ ಹಣವನ್ನು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ)ಯಲ್ಲಿ ಠೇವಣಿ ಇರಿಸಲಾಗುವುದು. ಬಳಿಕ ಅದು ಮಾಲೀಕರಿಗೆ ಪಾವತಿಸಲಿದೆ’ ಎಂದು ಅಧಿಕಾರಿ ತಿಳಿಸಿದರು.

ಭೂ ಸ್ವಾಧೀನ ಪ್ರಕ್ರಿಯೆ ಸುಗಮಗೊಳಿಸಲು ಬಿಎಂಆರ್‌ಸಿಎಲ್ ಕಾರಿಡಾರ್ 1 (ಜೆ.ಪಿ ನಗರ 4 ನೇ ಹಂತದಿಂದ ಕೆಂಪಾಪುರ, 32.65 ಕಿ.ಮೀ) ಅನ್ನು ಮೂರು ಪ್ಯಾಕೇಜ್‌ಗಳಾಗಿ ವಿಂಗಡಿಸಿದೆ.

‘ಪ್ಯಾಕೇಜ್ 1 (ಜೆ.ಪಿ ನಗರ 4 ನೇ ಹಂತದಿಂದ ಮೈಸೂರು ರಸ್ತೆ, 10.88 ಕಿ.ಮೀ) 67,601 ಚದರ ಮೀಟರ್‌ಗಳಷ್ಟು ವಿಸ್ತೀರ್ಣದಲ್ಲಿರುವ 415 ಆಸ್ತಿಗಳ ಅಗತ್ಯವಿದೆ. ಈ ಪೈಕಿ 198 ಆಸ್ತಿಗಳಿಗೆ ಅಂತಿಮ ಅಧಿಸೂಚನೆ ಪ್ರಕಟಿಸಲಾಗಿದೆ. ಪ್ಯಾಕೇಜ್ 2ಕ್ಕೆ (ಮೈಸೂರು ರಸ್ತೆಯಿಂದ ಕಂಠೀರವ ಸ್ಟುಡಿಯೊ, 10.6 ಕಿ.ಮೀ)  ಅಗತ್ಯ ಆಸ್ತಿಗಳನ್ನು ಗುರುತಿಸಲು ಭೂ ಸಮೀಕ್ಷೆ ನಡೆಯುತ್ತಿದೆ. ಪ್ಯಾಕೇಜ್ 3ಕ್ಕೆ (ಕಂಠೀರವ ಸ್ಟುಡಿಯೊ-ಕೆಂಪಾಪುರ, 10.67 ಕಿ.ಮೀ.) 1,11,351 ಚದರ ಮೀಟರ್ ವಿಸ್ತೀರ್ಣದ 282 ಆಸ್ತಿಗಳು ಬೇಕಾಗುತ್ತವೆ. ಇದರಲ್ಲಿ 85 ಆಸ್ತಿಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ’ ಎಂದು ಅಧಿಕಾರಿ ತಿಳಿಸಿದ್ದಾರೆ.

3ನೇ ಹಂತಕ್ಕೆ ಎಲ್ಲಾ ಅನುಮತಿಗಳಿದ್ದರೂ, ಮೆಟ್ರೊ-ಕಮ್‌ ಮೇಲ್ಸೇತುವೆ ನಿರ್ಮಾಣದ ಪರಿಷ್ಕೃತ ಯೋಜನೆಗಳಿಂದಾಗಿ ನಿರ್ಮಾಣ ವಿಳಂಬವಾಗಿದೆ.

‘ಇನ್ನೂ ಟೆಂಡರ್‌ ಕರೆಯದ ಕಾರಣ ಭೂಸ್ವಾಧೀನವು ಸಿವಿಲ್ ಕೆಲಸದ ಮೇಲೆ ಪರಿಣಾಮ ಬೀರುವುದಿಲ್ಲ. ಆಗಸ್ಟ್ ಅಂತ್ಯದ ವೇಳೆಗೆ ಟೆಂಡರ್‌ ಕರೆದು, ಮೂರು ತಿಂಗಳಲ್ಲಿ ಅಂತಿಮಗೊಳಿಸಲಾಗುವುದು. ಅಷ್ಟರಲ್ಲಿ ಅಗತ್ಯವಿರುವ ಜಮೀನು ಲಭ್ಯವಾಗಲಿದೆ’ ಎಂದು ಬಿಎಂಆರ್‌ಸಿಎಲ್‌ನ ಮತ್ತೊಬ್ಬ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.