ADVERTISEMENT

ನಮ್ಮ ಮೆಟ್ರೊ: ಪಿಂಕ್ ರೈಲಿನ ಮಾದರಿ ಅನಾವರಣ; ಚಿತ್ರಗಳು ಇಲ್ಲಿವೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 9:48 IST
Last Updated 12 ಡಿಸೆಂಬರ್ 2025, 9:48 IST
<div class="paragraphs"><p>ಗುಲಾಬಿ ಮಾರ್ಗದಲ್ಲಿ ಸಂಚರಿಸುವ ರೈಲು</p></div>

ಗುಲಾಬಿ ಮಾರ್ಗದಲ್ಲಿ ಸಂಚರಿಸುವ ರೈಲು

   

ಚಿತ್ರಗಳು: BEML

ಬೆಂಗಳೂರು: ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಗುಲಾಬಿ ಮಾರ್ಗದಲ್ಲಿ ಸಂಚರಿಸುವ ರೈಲಿನ ಮೂಲ ಮಾದರಿಯನ್ನು ಗುರುವಾರ ಬಿಡುಗಡೆ ಮಾಡಿದೆ.

ADVERTISEMENT

ಹೊಸ ತಿಪ್ಪಸಂದ್ರದಲ್ಲಿರುವ ಬಿಇಎಂಎಲ್‌ (ಬೆಮೆಲ್) ನಿಲ್ದಾಣದಲ್ಲಿ ರೈಲಿನ ಮಾದರಿಯನ್ನು ಅನಾವರಣಗೊಳಿಸಲಾಗಿದ್ದು, ಪರೀಕ್ಷಾರ್ಥ ಸಂಚಾರವನ್ನೂ ನಡೆಸಲಾಗಿದೆ.

ಈ ವೇಳೆ, ಬಿಇಎಂಎಲ್‌ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶಾಂತನು ರೇ, ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಜಿ. ರವಿಶಂಕರ್‌ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾಳೇನ ಅಗ್ರಹಾರದಿಂದ ನಾಗವಾರಕ್ಕೆ ಸಂಪರ್ಕಿಸುವ ಗುಲಾಬಿ ಮಾರ್ಗದಲ್ಲಿ ಮೊದಲ ಹಂತವಾಗಿ ಎತ್ತರಿಸಿದ ಮಾರ್ಗದಲ್ಲಿ ಮಾತ್ರ 2026ರ ಮೇನಲ್ಲಿ ಸಂಚಾರ ಆರಂಭವಾಗುವ ಸಾಧ್ಯತೆ ಇದೆ.

ಆರು ಬೋಗಿಗಳ ಈ ರೈಲನ್ನು ಬಿಇಎಂಎಲ್‌ ತಯಾರಿಸಿದೆ.

2023ರಲ್ಲಿ ಒಪ್ಪಂದ
ನೀಲಿ ಹಾಗೂ ಗುಲಾಬಿ ಮಾರ್ಗದಲ್ಲಿ ಸಂಚಾರಕ್ಕೆ ಅನುಕೂಲವಾಗುವಂತೆ ಒಟ್ಟು 57 ಚಾಲಕರಹಿತ ರೈಲುಗಳ ನಿರ್ಮಾಣಕ್ಕೆ ಬಿಇಎಂಎಲ್ ಜೊತೆ ಬಿಎಂಆರ್‌ಸಿಎಲ್ ಒಪ್ಪಂದ ಮಾಡಿಕೊಂಡಿದೆ. ₹ 3,177 ಕೋಟಿ ಮೊತ್ತದ ಈ ಒಪ್ಪಂದವು 2023ರ ಆಗಸ್ಟ್‌ನಲ್ಲೇ ಆಗಿದೆ.

57 ರೈಲುಗಳ ಪೈಕಿ 37 ರೈಲುಗಳು ನೀಲಿ ಮಾರ್ಗದಲ್ಲಿ ಸಂಚರಿಸಲಿವೆ. 16 ರೈಲುಗಳು ಕಾಳೇನ ಅಗ್ರಹಾರದಿಂದ ನಾಗವಾರವನ್ನು ಸಂಪರ್ಕಿಸುವ ಗುಲಾಬಿ ಮಾರ್ಗದಲ್ಲಿ ಸಂಚರಿಸಲಿವೆ. ಅದರೊಂದಿಗೆ, ಗುಲಾಬಿ ಮಾರ್ಗಕ್ಕೆಂದೇ ಹೆಚ್ಚುವರಿಯಾಗಿ 7 ರೈಲುಗಳಿಗಾಗಿ 2025ರ ಮಾರ್ಚ್‌ನಲ್ಲಿ ₹ 414 ಕೋಟಿ ಮೊತ್ತದ ಒಪ್ಪಂದ ಏರ್ಪಟ್ಟಿದೆ.

ಎರಡು ಹಂತದಲ್ಲಿ 'ಗುಲಾಬಿ' ಯೋಜನೆ
ಕಾಳೇನ ಅಗ್ರಹಾರದಿಂದ ನಾಗವಾರದವರಗೆ 21.26 ಕಿ.ಮೀ. ಉದ್ದವಿರುವ ಗುಲಾಬಿ ಮಾರ್ಗದ ಯೋಜನೆಯನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತಿದೆ.

ಕಾಳೇನ ಅಗ್ರಹಾರದಿಂದ ತಾವರೆಕೆರೆಗೆ ಸಂಪರ್ಕಿಸುವ 7.5 ಕಿ.ಮೀ ವರೆಗಿನ ಎತ್ತರಿಸಿದ ಮಾರ್ಗ ಮತ್ತು ಡೇರಿ ಸರ್ಕಲ್‌ನಿಂದ ನಾಗವಾರವರೆಗೆ 13.76 ಕಿ.ಮೀ ವರೆಗೆ ಸುರಂಗ ಮಾರ್ಗದಲ್ಲಿ ಪಿಂಕ್‌ ರೈಲು ಸಂಚರಿಸಲಿದೆ.

2025ರ ಜೂನ್‌ನಲ್ಲೇ ಈ ಮಾದರಿ ರೈಲು ಸಿದ್ಧವಾಗಬೇಕಿತ್ತು. ಆದರೆ, ತಾಂತ್ರಿಕ ಕಾರಣಗಳಿಂದಾಗಿ ರೈಲಿನ ಅನಾವರಣ ವಿಳಂಬವಾಗಿದೆ ಎಂದು ಬಿಇಎಂಎಲ್‌ ಅಧಿಕಾರಿಗು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.