ADVERTISEMENT

Bengaluru Metro | ಹೊಸ ವರ್ಷಕ್ಕೆ ಮೂರು ಹೊಸ ಮೆಟ್ರೊ ಮಾರ್ಗ

ಮಾರ್ಚ್‌ನಲ್ಲಿ ವೈಟ್‌ಫೀಲ್ಡ್‌, ಜೂನ್‌ನಲ್ಲಿ ಆರ್‌.ವಿ.ರಸ್ತೆ–ಬೊಮ್ಮಸಂದ್ರ ಮಾರ್ಗ ಪೂರ್ಣ l ಒಟ್ಟು 38.09 ಕಿ.ಮೀ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2022, 4:33 IST
Last Updated 15 ಡಿಸೆಂಬರ್ 2022, 4:33 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆಗೆ ಪರಿಹಾರವಾಗಿರುವ ಮೆಟ್ರೊ ರೈಲು, 2023ರಲ್ಲಿ ಮೂರು ಹೊಸ ಮಾರ್ಗಗಳನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಲು ಸಜ್ಜಾಗಿದೆ.

ಸದ್ಯ 56 ಕಿಲೋ ಮೀಟರ್ ಇರುವ ಮೆಟ್ರೊ ರೈಲು ಮಾರ್ಗಕ್ಕೆ ಮುಂದಿನ ವರ್ಷ ಇನ್ನೂ 38.09 ಕಿ.ಮೀ ಸೇರ್ಪಡೆಯಾಗಲಿದ್ದು, 94.09 ಕಿಲೋ ಮೀಟರ್‌ಗೆ ಏರಿಕೆಯಾಗಲಿದೆ. ವೈಟ್‌ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿ ಸೇರಿ ಎರಡು ಟೆಕ್ ಹಬ್‌ಗಳನ್ನು ಮೆಟ್ರೊ ಮಾರ್ಗ 2023ರಲ್ಲಿ ಸಂಪರ್ಕಿಸುತ್ತಿದೆ.

2023ರ ಆರಂಭದಲ್ಲೇ ವೈಟ್‌ಫೀಲ್ಡ್ ತನಕ ಮೆಟ್ರೊ ರೈಲು ಮಾರ್ಗ ಆರಂಭಿಸಲು ಸಿದ್ಧತೆ ಮಾಡಿಕೊಂಡಿದೆ. ಆದರೆ, ಬೆನ್ನಿಗಾನಹಳ್ಳಿ ಮೆಟ್ರೊ ರೈಲು ನಿಲ್ದಾಣದ ಬಳಿ ಕಾಮಗಾರಿ ಕೊಂಚ ವಿಳಂಬವಾಗುವ ಸಾಧ್ಯತೆ ಇದೆ. ಮಳೆ ಕೂಡ ಇದಕ್ಕೆ ಕಾರಣವಾಗಿದ್ದು, ಈ ಮಾರ್ಗವನ್ನು ಮಾರ್ಚ್ ಎರಡನೇ ವಾರದಲ್ಲಿ ಪ್ರಯಾಣಿಕರ ಸೇವೆಗೆ ನೀಡಲು ಬಿಎಂಆರ್‌ಸಿಎಲ್ ಯೋಚಿಸಿದೆ.

ADVERTISEMENT

ಈ ಮಾರ್ಗವನ್ನು ಎರಡು ಹಂತದಲ್ಲಿ ಕಾರ್ಯಾರಂಭ ಮಾಡಲೂ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಮೊದಲ ಹಂತದಲ್ಲಿ ವೈಟ್‌ಫೀಲ್ಡ್‌ನಿಂದ ಕೆ.ಆರ್‌.ಪುರ ತನಕ ರೈಲು ಸಂಚಾರ ಆರಂಭಿಸಿ, ಎರಡನೇ ಹಂತದಲ್ಲಿ ಕೆ.ಆರ್‌.ಪುರದಿಂದ ಬೈಯಪ್ಪನಹಳ್ಳಿ ಸಂಪರ್ಕಿಸಲು ಸಿದ್ಧತೆ ನಡೆಸಿದ್ದಾರೆ. ಅಲ್ಲಿಯ ತನಕ ಕೆ.ಆರ್.ಪುರದಿಂದ ಬೈಯಪ್ಪನಹಳ್ಳಿಗೆ ಬಿಎಂಟಿಸಿ ಬಸ್‌ಗಳನ್ನು ಫೀಡರ್ ಸೇವೆಗೆ ಬಳಸಿಕೊಳ್ಳಲು ಉದ್ದೇಶಿಸಿದ್ದಾರೆ.

ಬೆನ್ನಿಗಾನಹಳ್ಳಿ ಬಳಿ 65 ಮೀಟರ್‌ ಉದ್ದದ ಮಾರ್ಗದಲ್ಲಿ ಕಾಮಗಾರಿ ನಿರ್ವಹಣೆ ಸವಾಲಿನ ಕೆಲಸವಾಗಿದೆ. ಅಲ್ಲಿ ಸ್ಟೀಲ್ ಗರ್ಡರ್‌ಗಳನ್ನು ಅಳವಡಿಸಬೇಕಿದೆ. ರೈಲ್ವೆ ಹಳಿ ಕೂಡ ಹಾದು ಹೋಗಿದ್ದು, ನೈರುತ್ಯ ರೈಲ್ವೆ ಜತೆಯೂ ಸಮಾಲೋಚನೆ ನಡೆಸಿ ಕಾಮಗಾರಿ ನಿರ್ವಹಿಸುತ್ತಿದೆ. ಅದಕ್ಕೂ ಮುನ್ನ ಅಗತ್ಯ ಇರುವ ಪ್ರಾಥಮಿಕ ಕಾಮಗಾರಿಗಳನ್ನು ನಡೆಸಲಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳುತ್ತಾರೆ.

ಜೂನ್‌ನಲ್ಲಿ ಹಳದಿ ಮಾರ್ಗ ಪೂರ್ಣ

ಇನ್ನೊಂದೆಡೆ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರಕ್ಕೆ ಮೆಟ್ರೊ ರೈಲು ಸಂಪರ್ಕಿಸುವ ಹಳದಿ ಮಾರ್ಗದ ಕಾಮಗಾರಿಯೂ ಅಂತಿಮ ಹಂತದಲ್ಲಿದ್ದು, ಹೊಸ ವರ್ಷದಲ್ಲಿ ಕಾರ್ಯಾರಂಭವಾಗುವ ಎರಡನೇ ಹೊಸ ರೈಲು ಮಾರ್ಗ ಇದಾಗಿದೆ.

ಮೂರು ಪ್ಯಾಕೇಜ್‌ಗಳಲ್ಲಿ ನಡೆಯುತ್ತಿರುವ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಎಲ್ಲವೂ ಅಂದುಕೊಂಡಂತೆಯೇ ಆದರೆ 2023ರ ಜೂನ್‌ನಲ್ಲಿ ಈ ಮಾರ್ಗದಲ್ಲಿ ಮೆಟ್ರೊ ರೈಲುಗಳು ಸಂಚರಿಸಲಿವೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳುತ್ತಾರೆ.

ಈ ಮಾರ್ಗದಲ್ಲಿ ಒಟ್ಟು 16 ನಿಲ್ದಾಣಗಳು ನಿರ್ಮಾಣವಾಗುತ್ತಿದ್ದು, ಎಲ್ಲವೂ ಹಳದಿ ಮೇಲ್ಚಾವಣಿಗಳನ್ನು ಹೊಂದಿವೆ. ಎಲೆಕ್ಟ್ರಾನಿಕ್ ಸಿಟಿ ನಿಲ್ದಾಣ ಮಾತ್ರ ವಿಶೇಷ ವಿನ್ಯಾಸದಿಂದ ಕೂಡಿದೆ. ಈ ನಿಲ್ದಾಣವನ್ನು ಇನ್ಫೊಸಿಸ್‌ಸಂಸ್ಥೆ ಅಭಿವೃದ್ಧಿಪಡಿಸುತ್ತಿದ್ದು, ಕಾರ್ಪೊರೇಟ್ ಕಂಪನಿಗಳ ಮಾದರಿಯಲ್ಲೇ ಅಭಿವೃದ್ಧಿಗೊಳ್ಳುತ್ತಿದೆ.

ಮೆಟ್ರೊ ರೈಲಿನ ಜತೆಗೆ ಬಸ್‌ಗಳ ಸಂಚಾರಕ್ಕೂ ಅನುಕೂಲವಾಗುವ ಡಬಲ್ ಡೆಕ್ಕರ್ ಎಲಿವೇಟೆಡ್ ಕಾರಿಡಾರ್ ನಿರ್ಮಾಣವಾಗುತ್ತಿರುವ ಬೆಂಗಳೂರಿನ ಮೊದಲ ಮೆಟ್ರೊ ರೈಲು ಮಾರ್ಗ ಇದಾಗಿದೆ. ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್‌ ತನಕ ಡಬಲ್ ಡೆಕ್ಕರ್‌ ಎಲಿವೇಟೆಡ್‌ ಕಾರಿಡಾರ್ ನಿರ್ಮಾಣವಾಗುತ್ತಿದೆ. ಜಯದೇವ ವೃತ್ತದಲ್ಲಿ ಮಾರ್ಗ ಬದಲಿಸುವ ನಿಲ್ದಾಣ ನಿರ್ಮಾಣವಾಗುತ್ತಿದೆ. ಐದು ಹಂತದ ಸಾರಿಗೆ ವ್ಯವಸ್ಥೆಯನ್ನು ಇದು ಒಳಗೊಂಡಿದೆ. ಐದನೇ ಹಂತವು ನೆಲದಿಂದ 29 ಮೀಟರ್ ಎತ್ತರಕ್ಕೆ ನಿರ್ಮಾಣವಾಗುತ್ತಿದೆ.

ಈ ಮಾರ್ಗದಲ್ಲಿ ಹಳಿ ಜೋಡಣೆ ಕಾರ್ಯ ಪೂರ್ಣಗೊಂಡಿದ್ದು, ವಿದ್ಯುದ್ದೀಕರಣ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ಪೂರ್ಣಗೊಂಡರೆ ಪರೀಕ್ಷಾರ್ಥ ಸಂಚಾರ ಆರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳುತ್ತಾರೆ.

ನಾಗಸಂದ್ರ–ಬಿಐಇಸಿ ಅಂತಿಮ ಹಂತಕ್ಕೆ

ಬಹುಬೇಡಿಕೆಯ ನಾಗಸಂದ್ರ– ಬಿಐಇಸಿ (ರೀಚ್– 3 ವಿಸ್ತರಣೆ) ತನಕದ 3.14 ಕಿ.ಮೀ. ಮಾರ್ಗದ ಕಾಮಗಾರಿಯೂ ಭರದಿಂದ ಸಾಗಿದ್ದು, ಈ ಮಾರ್ಗದಲ್ಲೂ ಜೂನ್‌ನಲ್ಲಿ ರೈಲುಗಳು ಸಂಚರಿಸುವ ಸಾಧ್ಯತೆ ಇದೆ.

ಜಿಂದಾಲ್‌–ಪ್ರೆಸ್ಟೀಜ್‌ ಲೇಔಟ್‌ ಮೂಲಕ ಅಂಚೆಪಾಳ್ಯ ಹಾಗೂ ಚಿಕ್ಕಬಿದರಕಲ್ಲು ಮೆಟ್ರೊ ನಿಲ್ದಾಣಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲು ಹೆಚ್ಚುವರಿ ಪ್ರದೇಶವನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ಸವಾಲಾಗಿತ್ತು. ಪ್ರೆಸ್ಟೀಜ್‌ ಸಂಸ್ಥೆಯು ತನ್ನ ಪ್ರದೇಶದಲ್ಲಿ 12.5 ಅಡಿ ಅಗಲದ ರಸ್ತೆ ನಿರ್ಮಿಸಿ ಸಾರ್ವಜನಿಕರ ಬಳಕೆಗೆ ನೀಡಲು ಒಪ್ಪಿದ ಬಳಿಕ ಸಮಸ್ಯೆ ಇತ್ಯರ್ಥವಾಗಿದೆ.

ಎಲ್ಲ ಸಮಸ್ಯೆಗಳೂ ಪರಿಹಾರವಾಗಿ ಜೂನ್‌ ವೇಳೆಗೆ ಈ ಮಾರ್ಗದಲ್ಲೂ ರೈಲುಗಳು ಸಂಚರಿಸಲಿವೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.