ಬೆಂಗಳೂರು: ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ಮೆಟ್ರೊ ಸಂಚಾರ ಆರಂಭಗೊಂಡಿದ್ದು, ಮೊದಲ ದಿನ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದೆ. ವಿಪರೀತ ವಾಹನದಟ್ಟಣೆಯ ಕಾರಣದಿಂದ ರಸ್ತೆಯಲ್ಲೇ ತಾಸುಗಟ್ಟಲೆ ಸಮಯ ಕಳೆದು ಹೋಗುವುದು ತಪ್ಪಿರುವುದು ಜನರಲ್ಲಿ ಅದರಲ್ಲಿಯೂ ಐಟಿ ಉದ್ಯೋಗಿಗಳಿಗೆ ಸಂತಸವನ್ನು ಉಂಟು ಮಾಡಿದೆ.
ಆರ್.ವಿ. ರಸ್ತೆಯಿಂದ ಮೊದಲ ಮೆಟ್ರೊ ಆರಂಭಗೊಂಡಾಗ ಪ್ರಯಾಣಿಕರ ಸಂಖ್ಯೆ ಸಾಧಾರಣವಾಗಿತ್ತು. ಅಧಿಕ ಸಂಖ್ಯೆಯಲ್ಲಿ ಜನರು ಕೆಲಸಕ್ಕೆ ತೆರಳುವ ಸಮಯವಾಗಿರುವ ಬೆಳಿಗ್ಗೆ 8ರಿಂದ 10 ಗಂಟೆಯವರೆಗೆ ಭಾರಿ ಜನದಟ್ಟಣೆ ಉಂಟಾಗಿತ್ತು. ಸಂಜೆ ಕೆಲಸ ಮುಗಿಸಿ ವಾಪಸ್ಸಾಗುವ ಸಮಯ ದಲ್ಲಿಯೂ ಇದೇ ರೀತಿ ದಟ್ಟಣೆ ಉಂಟಾಯಿತು.
ಆರ್.ವಿ. ರಸ್ತೆಯಿಂದ ಬೆಳಿಗ್ಗೆ 6.30ಕ್ಕೆ ಮೊದಲು ರೈಲು ಹೊರಟಿತು. ರಾಗಿಗುಡ್ಡಕ್ಕೆ 6.32ಕ್ಕೆ, ಜಯದೇವ ಆಸ್ಪತ್ರೆ ನಿಲ್ದಾಣಕ್ಕೆ 6.35ಕ್ಕೆ, ಬಿಟಿಎಂ ಲೇಔಟ್‌ಗೆ 6.37ಕ್ಕೆ, ಸೆಂಟ್ರಲ್ ಸಿಲ್ಕ್ ಬೋರ್ಡ್‌ಗೆ 6.40ಕ್ಕೆ ಬೊಮ್ಮನಹಳ್ಳಿಗೆ 6.42, ಹೊಂಗಸಂದ್ರಕ್ಕೆ 6.44, ಕೂಡ್ಲು ಗೇಟ್ 6.46, ಸಿಂಗಸಂದ್ರ 6.48, ಹೊಸ ರೋಡ್ 6.50, ಬೆರಟೆನ ಅಗ್ರಹಾರ 6.52, ಎಲೆಕ್ಟ್ರಾನಿಕ್ ಸಿಟಿ 6.54, ಕೋನಪ್ಪನ ಅಗ್ರಹಾರ 6.56, ಹುಸ್ಕೂರು ರಸ್ತೆ 6.58, ಹೆಬ್ಬಗೋಡಿ 6.59, ಬೊಮ್ಮಸಂದ್ರಕ್ಕೆ 7.02ಕ್ಕೆ ತಲುಪಿದೆ ಎಂದು ‘ಬೆಂಗಳೂರು ಮೆಟ್ರೊ ಅಪ್‌ಡೇಟ್’ ಎಂಬ ‘ಎಕ್ಸ್’ ಖಾತೆಯಲ್ಲಿ ಪ್ರಯಾಣಿಕರೊಬ್ಬರು ಹಂಚಿಕೊಂಡಿದ್ದಾರೆ.
ಈ ದಿನಕ್ಕಾಗಿ ನಾನು ತುಂಬಾ ಕಾತುರದಿಂದ ಕಾಯುತ್ತಿದ್ದೆ. ನನ್ನ ಮೊದಲ ಸಂಚಾರವನ್ನು ಮುಗಿಸಿದೆ. ಜಯನಗರ, ಬಿಟಿಎಂ, ಸಿಲ್ಕ್ ಬೋರ್ಡ್ ಮತ್ತು ಬೊಮ್ಮನಹಳ್ಳಿಯ ಸಂಚಾರದ ಅವ್ಯವಸ್ಥೆಯಿಂದ ಪಾರಾಗಿ ಕೇವಲ 32 ನಿಮಿಷಕ್ಕೆ 19.15 ಕಿ.ಮೀ. ಕ್ರಮಿಸಿದೆ. ಬಹಳ ಆನಂದ ಉಂಟಾಯಿತು ಎಂದು ಅವರು ಸಂತಸ ಹಂಚಿಕೊಂಡಿದ್ದಾರೆ.
‘ಹಳದಿ ಮಾರ್ಗದಲ್ಲಿ ಮೊದಲ ದಿನವೇ ಸಂಚರಿಸುತ್ತಿರುವುದು ನನಗೆ ಬಹಳ ಖುಷಿ ನೀಡಿದೆ. ಇಲ್ಲಿವರೆಗೆ ರಾಜಾಜಿನಗರದಿಂದ ಆರ್.ವಿ. ರಸ್ತೆವರೆಗೆ ಹಸಿರು ಮಾರ್ಗದ ಮೆಟ್ರೊದಲ್ಲಿ ಬಂದು ಇಲ್ಲಿಂದ ಬಸ್ ಇಲ್ಲವೇ ಆಟೊದಲ್ಲಿ ಎಲೆಕ್ಟ್ರಾನಿಕ್ ಸಿಟಿಗೆ ಹೋಗುತ್ತಿದ್ದೆ. ಮೆಟ್ರೊದಲ್ಲಿಯೇ ಹೋಗುತ್ತಿದ್ದೇನೆ. ಒಂದೇ ಒಂದು ಸಮಸ್ಯೆ ಎಂದರೆ ಒಂದು ಮೆಟ್ರೊ ತಪ್ಪಿದರೆ ಇಲ್ಲಿ 25 ನಿಮಿಷ ಕಾಯಬೇಕು. ಕಾಯುವ ಅವಧಿ ಕಡಿಮೆ ಯಾಗಬೇಕು’ ಎಂದು ಎಲೆಕ್ಟ್ರಾನಿಕ್ ಸಿಟಿಯ ಖಾಸಗಿ ಕಂಪನಿ ಉದ್ಯೋಗಿ ನಿಖಿತಾ ಅನುಭವ ಹಂಚಿಕೊಂಡರು.
‘ಮೆಜೆಸ್ಟಿಕ್‌ನಿಂದ ಬಿಟಿಎಂ ಲೇಔಟ್‌ಗೆ ಹೋಗಬೇಕಿದ್ದರೆ ಬಸ್‌ನಲ್ಲೇ ಒಂದೂವರೆ ಗಂಟೆ ಕಳೆದು ಹೋಗುತ್ತಿತ್ತು. ಇವತ್ತು ಹಸಿರು ಮಾರ್ಗದ ಮೆಟ್ರೊದಲ್ಲಿ ಆರ್.ವಿ. ರಸ್ತೆಗೆ 15 ನಿಮಿಷದಲ್ಲಿ ಬಂದಿದ್ದೇನೆ. ಇಲ್ಲಿಂದ ಹಳದಿ ಮೆಟ್ರೊದಲ್ಲಿ ಐದಾರು ನಿಮಿಷಕ್ಕೆ ಬಿಟಿಎಂ ಲೇಔಟ್‌ಗೆ ತಲುಪಲಿದ್ದೇನೆ’ ಎಂದು ಪ್ರಯಾಣಿಕರಾದ ಪ್ರೀತಿ ಅವರು ತಿಳಿಸಿದರು.
‘ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ಮತ್ತು ಆರ್.ವಿ. ರಸ್ತೆ ಟರ್ಮಿನಲ್ ಗಳಿಂದ ಪ್ರತಿ ದಿನ ಬೆಳಿಗ್ಗೆ 6.30ಕ್ಕೆ (ಭಾನುವಾರ ಮಾತ್ರ ಬೆಳಿಗ್ಗೆ 7) ಮೊದಲ ಮೆಟ್ರೊ ಹೊರಡಲಿದೆ. ಕೊನೇ ರೈಲು ಮಾತ್ರ ಬೊಮ್ಮಸಂದ್ರದಿಂದ 10.42ಕ್ಕೆ ಹೊರಟರೆ, ಆರ್.ವಿ. ರಸ್ತೆಯಿಂದ 11.55ಕ್ಕೆ ಹೊರಡಲಿದೆ. ಮೆಜೆಸ್ಟಿಕ್‌ನಿಂದ ಹಸಿರು ಮಾರ್ಗದಲ್ಲಿ ಕೊನೇ ಮೆಟ್ರೊದಲ್ಲಿ ಬರುವವರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಆರ್.ವಿ. ರಸ್ತೆಯಿಂದ ಹೊರಡುವ ಕೊನೇ ಮೆಟ್ರೊ ಅವಧಿಯನ್ನು ಹೊಂದಾಣಿಕೆ ಮಾಡಲಾಗಿದೆ’ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದರು.
‘ಆರ್.ವಿ. ರಸ್ತೆ ಮೆಟ್ರೊ ನಿಲ್ದಾಣ ಇಂಟರ್‌ಚೇಂಜ್ ನಿಲ್ದಾಣ ಆಗಿರುವುದ ರಿಂದ ಪ್ರಯಾಣಿಕರು ಮೆಟ್ರೊಗೆ ಕಾಯುತ್ತಾ ನಿಲ್ಲುವ ಪ್ರದೇಶ ಇನ್ನಷ್ಟು ವಿಶಾಲವಾಗಿರಬೇಕಿತ್ತು’ ಎಂದು ಪ್ರಯಾಣಿಕರು ಅಭಿಪ್ರಾಯಪಟ್ಟರು.
‘ನಾನು ಟಿಟಾಗಢ್‌ನ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಮಾತನಾಡಿದ್ದು, ಅಕ್ಟೋಬರ್‌ನಿಂದ ಪ್ರತಿ ತಿಂಗಳು ಎರಡು ಹೊಸ ರೈಲು ಸೆಟ್‌ಗಳನ್ನು ತಲುಪಿಸಲಾಗುವುದು. ಈ ತಿಂಗಳ ಅಂತ್ಯದ ವೇಳೆಗೆ ಒಂದು ಹೆಚ್ಚುವರಿ ರೈಲು ಸಂಚರಿಸಲಿದೆ’ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.
ಅವರು ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ಸೋಮವಾರ ಸಂಚರಿಸಿದ ಬಳಿಕ ಮಾತನಾಡಿದರು.
‘ನಮ್ಮ ಮೆಟ್ರೊ ಹಳದಿ ಮಾರ್ಗ ಮೊದಲ ದಿನ ಮೊದಲ ಸಂಚಾರ ಹೌಸ್‌ಫುಲ್ ಆಗಿದೆ. ಸಾವಿರಾರು ಪ್ರಯಾಣಿಕರೊಂದಿಗೆ ನಾನೂ ಪ್ರಯಾಣಿಸಿದೆ. ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳು, ಬೊಮ್ಮಸಂದ್ರದ ಕಾರ್ಖಾನೆಯ ಕಾರ್ಮಿಕರು, ಗಾರ್ಮೆಂಟ್ಸ್ ಕಾರ್ಮಿಕರು ಮತ್ತು ಇತರ ಸಾವಿರಾರು ಜನರಿದ್ದರು’ ಎಂದು ಹೇಳಿದರು.
‘ಈ ಮಾರ್ಗದಲ್ಲಿ ಹಿಂದೆ ಪ್ರಯಾಣಿಸಲು ಎರಡು ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು, ಈಗ ಕೇವಲ 35 ನಿಮಿಷಗಳಲ್ಲಿ ತಲುಪಬಹುದು ಎಂದು ಹಲವರು ನನ್ನೊಂದಿಗೆ ಸಂತೋಷ ಹಂಚಿಕೊಂಡಿದ್ದಾರೆ’ ಎಂದು ವಿವರಿಸಿದರು.
‘ಆರ್.ವಿ. ರಸ್ತೆ ನಿಲ್ದಾಣದಲ್ಲಿ ಜನಸಂದಣಿಯನ್ನು ಗಮನಿಸಿ, ಪ್ರಯಾಣಿಕರ ಸಂಚಾರಕ್ಕಾಗಿ ತಕ್ಷಣವೇ ಸ್ಟೀಲ್ ಬ್ಯಾರಿಕೇಡ್‌ಗಳನ್ನು ಅಳವಡಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.