ಮೆಟ್ರೊ ರೈಲಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಕೃಪೆ: X / @DKShivakumar
ಬೆಂಗಳೂರು: 'ನಮ್ಮ ಮೆಟ್ರೊ' ಹಳದಿ ಮಾರ್ಗಕ್ಕೆ ಇಂದು (ಭಾನುವಾರ ಆಗಸ್ಟ್ 10) ಹಸಿರು ನಿಶಾನೆ ತೋರಿದ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ರೈಲಿನಲ್ಲಿ ಪ್ರಯಾಣಿಸಿದರು.
ಬೊಮ್ಮಸಂದ್ರದಿಂದ ಆರ್.ವಿ. ರಸ್ತೆಗೆ ಸಂಪರ್ಕ ಕಲ್ಪಿಸುವ ಈ ಯೋಜನೆಗೆ ರಾಗಿಗುಡ್ಡ ನಿಲ್ದಾಣದಲ್ಲಿ ಚಾಲನೆ ನೀಡಿದ ಮೋದಿ, ಬಳಿಕ ಎಲೆಕ್ಟ್ರಾನಿಕ್ ಸಿಟಿ ವರೆಗೆ ರೈಲಿನಲ್ಲಿ ನಿಂತುಕೊಂಡೇ ಪ್ರಯಾಣಿಸಿದರು. ಈ ವೇಳೆ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಅಕ್ಕಪಕ್ಕದಲ್ಲೇ ಕುಳಿತು ಯೋಜನೆ ಕುರಿತು ಮಾತುಕತೆ ನಡೆಸಿದರು.
ಈ ವೇಳೆ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್, ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ಕಾರ್ಮಿಕ ಮತ್ತು ಸಣ್ಣ ಉದ್ಯಮ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಸಂಸದರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರೂ ಇದ್ದರು.
ಕಿತ್ತಳೆ ಮಾರ್ಗಕ್ಕೆ ಶಂಕುಸ್ಥಾಪನೆ
ಹಳದಿ ಮಾರ್ಗವು ಒಟ್ಟು 19.15 ಕಿ.ಮೀ. ಉದ್ದವಿದ್ದು, ಈ ಯೋಜನೆಗಾಗಿ ₹7,160 ಕೋಟಿ ವ್ಯಯಿಸಲಾಗಿದೆ. ಮೋದಿ ಅವರು, 'ನಮ್ಮ ಮೆಟ್ರೊ' 3ನೇ ಹಂತಕ್ಕೂ (ಕಿತ್ತಳೆ ಮಾರ್ಗ) ಇಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅಂದಾಜು ₹15,610 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಮಾರ್ಗವು, ಕೆಂಪಾಪುರ–ಜೆ.ಪಿ.ನಗರ 4ನೇ ಹಂತ ಹಾಗೂ ಹೊಸಹಳ್ಳಿ–ಕಡಬಗೆರೆ ನಡುವೆ ಸಂಪರ್ಕ ಕಲ್ಪಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.