ADVERTISEMENT

Nandi Hills: ನಂದಿ ಬೆಟ್ಟದಲ್ಲಿ ರೋಪ್‌ ವೇಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2025, 15:27 IST
Last Updated 24 ಮಾರ್ಚ್ 2025, 15:27 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ‘ನಂದಿ ಬೆಟ್ಟ ಉಳಿಸಲು ರಾಜ್ಯ ಸರ್ಕಾರ ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಇದರ ಬದಲು ನಂದಿಬೆಟ್ಟಕ್ಕೆ ರೋಪ್ ವೇ ನಿರ್ಮಿಸಲು ಮುಂದಾಗಿರುವುದು ಅತ್ಯಂತ ಅಪಾಯಕಾರಿ’ ಎಂದು ಪರಿಸರ ತಜ್ಞ ಎ.ಎನ್. ಯಲ್ಲಪ್ಪ ರೆಡ್ಡಿ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೋಪ್ ವೇ ನಿರ್ಮಿಸಲು ಸುಮಾರು 150 ಅಡಿ ಪ್ರದೇಶದಲ್ಲಿ ಬಂಡೆ ಕೊರೆಯುವುದರಿಂದ ನಂದಿ ಬೆಟ್ಟ ಬಿರುಕು ಬಿಡುವ ಸಾಧ್ಯತೆಯಿದೆ. ಜನ ಪ್ರತಿನಿಧಿಗಳಿಗೆ ಈ ಬಗ್ಗೆ ಜವಾಬ್ದಾರಿ ಇಲ್ಲ. ಹೆಂಡ ಕುಡಿಯಲು ಹೋಗುವವರಿಗೆ ಸರ್ಕಾರ ಪ್ರವಾಸೋದ್ಯಮ ನೆಪದಲ್ಲಿ ಅನುಕೂಲ ಮಾಡಿಕೊಡಲು ಹೊರಟಿದೆ’ ಎಂದು ಆರೋಪಿಸಿದರು.

ADVERTISEMENT

‘ವಿಧಾನಮಂಡಲ ಅಧಿವೇಶನದಲ್ಲಿ ನಂದಿ ಬೆಟ್ಟದ ಬಗ್ಗೆ ಚರ್ಚೆಯೇ ಆಗಿಲ್ಲ. ಬದಲಿಗೆ ಹನಿ ಟ್ರ್ಯಾಪ್ ಕುರಿತು ರಾಜಕಾರಣಿಗಳು ಉತ್ಸಾಹದಿಂದ ಮಾತನಾಡಿದ್ದಾರೆ. ಸರ್ಕಾರ, ಜನಪ್ರತಿನಿಧಿಗಳಿಂದ ನಂದಿ ಬೆಟ್ಟ ಉಳಿಸಲು ಸಾಧ್ಯವಿಲ್ಲ. ಬದಲಿಗೆ ಜನ ಹೋರಾಟದಲ್ಲಿ ಭಾಗಿಯಾದಾಗ ಮಾತ್ರ ಉತ್ತಮ ಫಲಿತಾಂಶ ಸಿಗಲಿದೆ’ ಎಂದರು.

‘ಬೆಂಗಳೂರಿಗೆ ಎರಡು ವಿಮಾನ ನಿಲ್ದಾಣಗಳು ಅಗತ್ಯವಿಲ್ಲ. ಶೇ 0.01 ರಷ್ಟು ಜನರಿಗಾಗಿ ಉದ್ಯಾನ ನಗರಿ ಬೆಂಗಳೂರಿಗೆ ಕುತ್ತು ತರುವ ಪ್ರಯತ್ನ ಸರಿಯಲ್ಲ. ಸಾವಿರಾರು ಎಕರೆ ಪ್ರದೇಶದಲ್ಲಿ ಗಿಡ ಮರಗಳನ್ನು ಕಡಿದು ವಿಮಾನ ನಿಲ್ದಾಣ ನಿರ್ಮಿಸಿದರೆ ಪ್ರಯೋಜವಿಲ್ಲ. ಈಗಾಗಲೇ ಒಂದು ವಿಮಾನ ನಿಲ್ದಾಣ ಇದ್ದು, ಇದು ನಗರಕ್ಕೆ ಸಾಕಾಗುತ್ತದೆ. ಇದನ್ನು ರಾಜಕಾರಣಿಗಳು ಅರ್ಥಮಾಡಿಕೊಳ್ಳುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಶ್ವ ಮಾನವ ಹಕ್ಕುಗಳ ಪ್ರತಿಷ್ಠಾನದ ಗೌರವಾಧ್ಯಕ್ಷ ಮಂಜುನಾಥ್ ಹೆಗಡೆ ಮಾತನಾಡಿ, ‘ನಂದಿ ಬೆಟ್ಟದ ಪರಿಸರ ಸಂರಕ್ಷಣೆಗಾಗಿ ನಡೆಸಿರುವ ಹೋರಾಟಕ್ಕೆ ಎಲ್ಲ ಕಡೆಯಿಂದಲೂ ಬೆಂಬಲ ವ್ಯಕ್ತವಾಗುತ್ತಿದೆ. ಇದನ್ನು ಪಾರಂಪರಿಕ ತಾಣವನ್ನಾಗಿ ಮಾಡಿದರೆ ಮಾತ್ರ ಉಳಿಸಿಕೊಳ್ಳಲು ಸಾಧ್ಯ. ನಂದಿ ಬೆಟ್ಟದ ಸಮೀಪ ಈಶಾ ಫೌಂಡೇಷನ್ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು’ ಎಂದು ಆಗ್ರಹಿಸಿದರು.

ಸಾಮಾಜಿಕ ಕಾರ್ಯಕರ್ತೆ ಸಂಜನಾ ಜಾನ್ ಮಾತನಾಡಿ, ‘ನಂದಿ ಬೆಟ್ಟಕ್ಕೆ ಹಾನಿಯಾದರೆ ಜಲ ಮೂಲಗಳು ಶಾಶ್ವತವಾಗಿ ನಶಿಸಿಹೋಗಲಿವೆ. ಹೀಗಾಗಿ ನಂದಿ ರಕ್ಷಣೆಗಾಗಿ ಎಲ್ಲರೂ ಕೈ ಜೋಡಿಸಬೇಕು’ ಎಂದು ಕರೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.