
ಬೆಂಗಳೂರು: ‘ನಂದಿನಿ’ ಬ್ರ್ಯಾಂಡ್ ಹೆಸರಿನಲ್ಲಿ ಕಲಬೆರಕೆ ತುಪ್ಪ ಮಾರಾಟ ಮಾಡುತ್ತಿದ್ದ ಬೃಹತ್ ಜಾಲದ ಸಂಚುಕೋರ ದಂಪತಿಯನ್ನು ಸಿಸಿಬಿ ವಿಶೇಷ ವಿಚಾರಣಾ ದಳ ಹಾಗೂ ಕೆಎಂಎಫ್ ಜಾಗೃತ ದಳದ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಮೈಸೂರಿನ ಶಿವಕುಮಾರ್ ಮತ್ತು ಅವರ ಪತ್ನಿ ರಮ್ಯಾ ಬಂಧಿತರು.
ಬಂಧಿತ ದಂಪತಿ ದಂಪತಿ, ನಂದಿನಿ ಉತ್ಪನ್ನಗಳನ್ನು ಕಲಬೆರಕೆ ಮಾಡಿ ಮಾರಾಟ ಮಾಡುತ್ತಿದ್ದ ಪ್ರಕರಣದ ಸೂತ್ರಧಾರರು ಎಂಬುದು ತನಿಖೆ ವೇಳೆ ಕಂಡುಬಂದಿದೆ ಎಂದು ಪೊಲೀಸರು ಹೇಳಿದರು.
ಇದೇ ಪ್ರಕರಣದಲ್ಲಿ ನವೆಂಬರ್ 15ರಂದು ಕೆಎಂಎಫ್‌ನ (ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ) ಉತ್ಪನ್ನಗಳ ವಿತರಕ ಮಹೇಂದ್ರ ಹಾಗೂ ಕೃತ್ಯಕ್ಕೆ ಬೆಂಬಲ ನೀಡಿದ್ದ ದೀಪಕ್, ಮುನಿರಾಜು, ಅಭಿ ಅರಸು ಎಂಬುವವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ತಲೆಮರೆಸಿಕೊಂಡಿದ್ದ ದಂಪತಿಗೆ ಹುಡುಕಾಟ ನಡೆಸಲಾಗುತಿತ್ತು. ಖಚಿತ ಸುಳಿವು ಆಧರಿಸಿ ದಂಪತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಘಟಕ ಸ್ಥಾಪಿಸಿದ್ದ ದಂಪತಿ: ಕೆಎಂಎಫ್ ಉತ್ಪನ್ನಗಳ ವಿತರಕ ಮಹೇಂದ್ರ ಎಂಬಾತ ಶುದ್ಧ ನಂದಿನಿ ತುಪ್ಪವನ್ನು ಖರೀದಿಸಿ ತಮಿಳುನಾಡಿಗೆ ಕಳುಹಿಸುತ್ತಿದ್ದ. ತಮಿಳುನಾಡಿನಲ್ಲಿ ಕಲಬೆರಕೆ ಮಾಡಲಾಗುತ್ತಿತ್ತು. ಒಂದು ಲೀಟರ್ ತುಪ್ಪಕ್ಕೆ ನಾಲ್ಕು ಲೀಟರ್ ನಕಲಿ ತುಪ್ಪ ಬೆರೆಸುತ್ತಿದ್ದರು. ಪಾಮ್ ಹಾಗೂ ತೆಂಗಿನ ಎಣ್ಣೆ ಮತ್ತು ಡಾಲ್ಡಾ ಮಿಶ್ರಣ ಮಾಡಿ ಮತ್ತೆ ರಾಜ್ಯಕ್ಕೆ ತಂದು ಮಾರಾಟ ಮಾಡುತ್ತಿದ್ದರು. ತಮಿಳುನಾಡಿನಲ್ಲಿ ದಂಪತಿ ಉತ್ಪಾದನಾ ಘಟಕ ಸ್ಥಾಪಿಸಿದ್ದರು ಎಂದು ಮೂಲಗಳು ಹೇಳಿವೆ.
‘ಕಲಬೆರಕೆ ತುಪ್ಪವನ್ನು ತಮಿಳುನಾಡಿನ ಸ್ಥಳವೊಂದರಲ್ಲಿ ಸ್ಯಾಚೆಟ್ ಮತ್ತು ಪ್ಲಾಸ್ಟಿಕ್ ಬಾಟಲಿಗಳಿಗೆ ತುಂಬಿ ಬೆಂಗಳೂರಿನ ಅಧಿಕೃತ ಪರವಾನಗಿ ಪಡೆದಂತಹ ಮಳಿಗೆಗಳಿಗೆ ಆರೋಪಿಗಳು ಪೂರೈಕೆ ಮಾಡುತ್ತಿದ್ದರು. ಕಲಬೆರಕೆ ತುಪ್ಪದ ಸ್ಯಾಚೆಟ್ ಹಾಗೂ ಬಾಟಲಿಗಳು ಅಸಲಿ ತುಪ್ಪದ ಮಾದರಿಯಲ್ಲೇ ತಯಾರಿಸಿದ್ದರು. ನಗರದ ವಿವಿಧ ಸಗಟು, ಚಿಲ್ಲರೆ ಹಾಗೂ ನಂದಿನಿ ಪಾರ್ಲರ್‌ಗಳಿಗೆ ಮೂಲ ನಂದಿನಿ ತುಪ್ಪದ ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ’ ಎಂದು ಪೊಲೀಸರು ಹೇಳಿದರು.
‘ದಂಪತಿಯ ಬ್ಯಾಂಕ್ ಖಾತೆಯಲ್ಲಿದ್ದ ₹60 ಲಕ್ಷದ ವಹಿವಾಟು ಸ್ಥಗಿತ (ಫ್ರೀಜ್) ಮಾಡಲಾಗಿದೆ. ಕಲಬೆರಕೆಗೆ ಯಾವೆಲ್ಲಾ ವಸ್ತುಗಳನ್ನು ಮಿಶ್ರಣ ಮಾಡಲಾಗಿದೆ ಎಂಬುದನ್ನು ಪತ್ತೆ ಹಚ್ಚಲು, ವಶಪಡಿಸಿಕೊಂಡ ಮಾದರಿಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ರವಾನೆ ಮಾಡಲಾಗಿದೆ. ಈ ದಂಪತಿ ವಿರುದ್ಧ ಈ ಹಿಂದೆಯೂ ಮೈಸೂರಿನಲ್ಲಿಯೂ ಇದೇ ರೀತಿಯ ನಕಲಿ ಉತ್ಪನ್ನ ತಯಾರಿಕೆಯ ಪ್ರಕರಣ ದಾಖಲಾಗಿತ್ತು‘ ಎಂದು ಸಿಸಿಬಿ ಮೂಲಗಳು ಹೇಳಿವೆ.
ಕಲಬೆರಕೆ ತುಪ್ಪ ತಯಾರಿಸಲು ಖರೀದಿಸಿದ್ದ ಯಂತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಇದುವರೆಗೂ ₹ 1.88 ಕೋಟಿ ಮೌಲ್ಯದ ಸಾಮಗ್ರಿ ಹಾಗೂ ವಾಹನಗಳು ವಶಕ್ಕೆ ಪಡೆದಂತೆ ಆಗಿದೆ ಎಂದು ಸಿಸಿಬಿ ಡಿಸಿಪಿ ಹರಿಬಾಬು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.