ADVERTISEMENT

ನಂದಿನಿ ಮಿಲ್ಕ್‌ ಪಾರ್ಲರ್‌ಗೆ ನುಗ್ಗಿ ಓಂ ಪ್ರಕಾಶ್ ಪುತ್ರಿಯಿಂದ ದಾಂದಲೆ!

ಓಂ ಪ್ರಕಾಶ್ ಅವರ ಪುತ್ರಿ ಕೃತಿಕಾ ವಿರುದ್ಧ ಎನ್‌ಸಿಆರ್ ದಾಖಲು

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 15:25 IST
Last Updated 3 ಜುಲೈ 2025, 15:25 IST
ನಂದಿನಿ ಮಿಲ್ಕ್‌ ಪಾರ್ಲರ್‌
ನಂದಿನಿ ಮಿಲ್ಕ್‌ ಪಾರ್ಲರ್‌   

ಪ್ರಾತಿನಿಧಿಕ ಚಿತ್ರ

ಬೆಂಗಳೂರು: ನಿವೃತ್ತ ಪೊಲೀಸ್‌ ಮಹಾನಿರ್ದೇಶಕ (ಡಿಜಿ ಮತ್ತು ಐಜಿಪಿ) ಓಂ ಪ್ರಕಾಶ್ ಅವರ ಪುತ್ರಿ ಕೃತಿಕಾ ಅವರು ನಂದಿನಿ ಮಿಲ್ಕ್‌ ಪಾರ್ಲರ್‌ವೊಂದಕ್ಕೆ ನುಗ್ಗಿ ದಾಂದಲೆ ನಡೆಸಿದ್ದು, ಆ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಘಟನೆಯು ಎಚ್‌ಎಸ್‌ಆರ್ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಂದಿನಿ ಮಿಲ್ಕ್‌ ಪಾರ್ಲರ್ ಮಾಲೀಕರು ನೀಡಿದ ದೂರಿನ ಮೇರೆಗೆ ಕೃತಿಕಾ ವಿರುದ್ಧ ಎಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರು ಗಂಭೀರ ಸ್ವರೂಪವಲ್ಲದ ಪ್ರಕರಣ(ಎನ್‌ಸಿಆರ್) ದಾಖಲಿಸಿಕೊಂಡಿದ್ದಾರೆ.

ADVERTISEMENT

ಕಳೆದ ಸೋಮವಾರ ರಾತ್ರಿ ಮನೆ ಪಕ್ಕದಲ್ಲಿರುವ ನಂದಿನಿ ಮಿಲ್ಕ್ ಪಾರ್ಲರ್‌ಗೆ ತೆರಳಿದ್ದ ಕೃತಿಕಾ, ಏಕಾಏಕಿ ಅಂಗಡಿಯಲ್ಲಿದ್ದ ಬಿಸ್ಕತ್‌ ಹಾಗೂ ಚಾಕೊಲೇಟ್‌ ತುಂಬಿದ್ದ ಬಾಟಲಿಗಳನ್ನು ಒಡೆದು ಹಾಕಿದ್ದಾರೆ. ಅದನ್ನು ತಡೆಯಲು ಬಂದ ಮಾಲೀಕನ ಮೇಲೂ ಹಲ್ಲೆ ನಡೆಸಿದ್ದಾರೆ. ಈ ದೃಶ್ಯವನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಹೊಯ್ಸಳ ಸಿಬ್ಬಂದಿ, ಕೃತಿಕಾ ಅವರನ್ನು ಸಮಾಧಾನ ಪಡಿಸಿ ಮನೆಗೆ ಕಳುಹಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಏಪ್ರಿಲ್‌ 20ರಂದು ಓಂ ಪ್ರಕಾಶ್ ಅವರ ಕೊಲೆ ನಡೆದಿತ್ತು. ಕೊಲೆ ಪ್ರಕರಣ ಆರೋಪದ ಅಡಿ ಓಂ ಪ್ರಕಾಶ್ ಅವರ ಪತ್ನಿ ಪಲ್ಲವಿ ಅವರನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಓಂ ಪ್ರಕಾಶ್‌ ಅವರ ಪುತ್ರ ಬೇರೆ ಮನೆಗೆ ತೆರಳಿದ್ದು, ಇದೀಗ ಫ್ಲ್ಯಾಟ್‌ನಲ್ಲಿ ಕೃತಿಕಾ ಒಬ್ಬರೇ ಇದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.