ADVERTISEMENT

ಕೆಪಿಎಂಇ ಉಲ್ಲಂಘನೆ: ರಾಜಗೋಪಾಲನಗರದ ನಾರಾಯಣ ಹೆಲ್ತ್ ಕೇರ್ ಸೆಂಟರ್‌ಗೆ ಬೀಗ

ಕೆಪಿಎಂಇ ಕಾಯ್ದೆ ಅಡಿಯಲ್ಲಿ ನೋಂದಣಿಯಾಗದ ಕೇಂದ್ರ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 19:36 IST
Last Updated 26 ಅಕ್ಟೋಬರ್ 2021, 19:36 IST
   

ಬೆಂಗಳೂರು:ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆಯಡಿ (ಕೆಪಿಎಂಇ) ನೋಂದಣಿಯಾಗಿಲ್ಲ ಎಂಬ ಕಾರಣಕ್ಕೆರಾಜಗೋಪಾಲನಗರದ ನಾರಾಯಣ ಹೆಲ್ತ್ ಕೇರ್ ಸೆಂಟರ್‌ಗೆ ಬೀಗ ಹಾಕಲಾಗಿದೆ.

ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ. ಶ್ರೀನಿವಾಸ್ ನೇತೃತ್ವದಲ್ಲಿಬೆಂಗಳೂರು ನಗರ ಜಿಲ್ಲಾ ಸಲಹಾ ಸಮಿತಿ ಹಾಗೂ ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿ ಸದಸ್ಯರು ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಆಸ್ಪತ್ರೆಯುಗರ್ಭಧಾರಣ ಪೂರ್ವ ಮತ್ತು ಪ್ರಸವಪೂರ್ವ ಪತ್ತೆ ತಂತ್ರ ವಿಧಾನಗಳ (ಲಿಂಗ ಆಯ್ಕೆಯ ನಿಷೇಧ) ಕಾಯ್ದೆ (ಪಿಸಿಪಿಎನ್ ಡಿಟಿ) 1994ರ ಅನ್ವಯ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದೆ.

‘ಈ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಆಯುಷ್ ವೈದ್ಯರು ತಲೆಮರೆಸಿಕೊಂಡಿದ್ದಾರೆ. ಕೇಂದ್ರ ನಡೆಸಲು ಆಸ್ಪತ್ರೆಯು ಕೆಪಿಎಂಇ ಕಾಯ್ದೆ ಅಡಿ ನೋಂದಣಿ ಆಗಿರಲಿಲ್ಲ. ಹಠಾತ್ ಭೇಟಿ ಮೂಲಕ ಸ್ಥಳ ಪರಿಶೀಲನೆ ನಡೆಸಿದಾಗ ಈ ಕೇಂದ್ರದಲ್ಲಿ ವೈದ್ಯಕೀಯ ಗರ್ಭಪಾತ ಸಲಕರಣೆಗಳು, ಪೀಠೋಪಕರಣಗಳು ಪತ್ತೆಯಾಗಿವೆ’ ಎಂದು ಎಂದು ಡಾ.ಜಿ. ಶ್ರೀನಿವಾಸ್ ತಿಳಿಸಿದರು.

ADVERTISEMENT

‘ಪಿಸಿಪಿಎನ್ ಡಿಟಿ ಕಾಯ್ದೆಯ ವಿರುದ್ಧ ಕೆಲವು ಸ್ಕ್ಯಾನಿಂಗ್ ಕೇಂದ್ರಗಳು ಭ್ರೂಣಲಿಂಗ ಪತ್ತೆಯಲ್ಲಿ ತೊಡಗಿ, ಗರ್ಭಪಾತಕ್ಕೆ ಕಳುಹಿಸಿಕೊಡುವ ಬಗ್ಗೆ ಇಲಾಖೆಗೆ ದೂರುಗಳು ಬಂದಿವೆ. ಹೆಣ್ಣು ಭ್ರೂಣಹತ್ಯೆ ತಡೆಯುವ ಉದ್ದೇಶದಿಂದ ಜಿಲ್ಲಾಧಿಕಾರಿ ಜೆ. ಮಂಜುನಾಥ್ ನಿರ್ದೇಶನದಂತೆ ಜಿಲ್ಲಾ ಸಮಿತಿಗಳು ಕಾಲಕಾಲಕ್ಕೆ ಈ ರೀತಿಯ ತಪಾಸಣಾ ಭೇಟಿಗಳನ್ನು ಕೈಗೊಳ್ಳುತ್ತಿದ್ದೇವೆ. ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದಲ್ಲಿ ಸೂಕ್ತ ಕ್ರಮ ಜರುಗಿಸಲಾಗುತ್ತದೆ’ ಎಂದು ವಿವರಿಸಿದರು.

ಇದಕ್ಕೂ ಮೊದಲು ದಾಸರಹಳ್ಳಿಯ ವಿವೇಕ ಸ್ಕ್ಯಾನ್ಸ್‌ ಕೇಂದ್ರಕ್ಕೆ ತಂಡ ಭೇಟಿ ನೀಡಿತು.ಸ್ಕ್ಯಾನಿಂಗ್ ಕೊಠಡಿಯ ಟಿ.ವಿ ಪರದೆಯಲ್ಲಿ ಭ್ರೂಣದ ಚಿತ್ರವನ್ನು ಬಿತ್ತರಿಸದಂತೆ ಸೂಚಿಸಿದ ಆರೋಗ್ಯಾಧಿಕಾರಿ, ಟಿ.ವಿ ಪರದೆಯನ್ನು ತೆರವುಗೊಳಿಸುವಂತೆ ಸೂಚಿಸಿದರು. ಕಿರಿದಾದ ಸ್ಥಳದಲ್ಲಿ ಕೇಂದ್ರವನ್ನು ನಡೆಸುತ್ತಿರುವುದರ ಬಗ್ಗೆ ಕೇಂದ್ರಕ್ಕೆ ನೋಟಿಸ್ ನೀಡಿದರು.

ತಪಾಸಣಾ ಭೇಟಿಯ ಸಮಿತಿಯಲ್ಲಿ ಕೆ.ಆರ್. ಪುರ ಸಾರ್ವಜನಿಕ ಆಸ್ಪತ್ರೆಯ ಡಾ. ಲೀಲಾ, ಡಾ. ವಿಜಯ್ ಸಾರಥಿ, ಡಾ. ಶಿಲ್ಪಾ, ಬೆಂಗಳೂರು ಉತ್ತರ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಮೇಶ್ ಮತ್ತಿತರರು ಇದ್ದರು.ನಾರಾಯಣ ಹೆಲ್ತ್ ಕೇರ್ ಸೆಂಟರರ್‌ನ ವೈದ್ಯಾಧಿಕಾರಿಗಳು ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.