ಬೆಂಗಳೂರು: ರಾಷ್ಟ್ರೀಯ ನಾಟಕ ಶಾಲೆಯ (ಎನ್‌ಎಸ್‌ಡಿ) ಸಹಯೋಗದಲ್ಲಿ ಫೆಬ್ರುವರಿ 1ರಿಂದ 8ರವರೆಗೆ ಭಾರತ ರಂಗ ಮಹೋತ್ಸವ–2025 ಕಾರ್ಯಕ್ರಮ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಮಾಹಿತಿ ನೀಡಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಾರತ ರಂಗ ಮಹೋತ್ಸವದಲ್ಲಿ ರಷ್ಯಾ, ಶ್ರೀಲಂಕಾ ದೇಶಗಳ ಎರಡು ನಾಟಕಗಳು, ಹಿಂದಿ ಭಾಷೆಯ ಮೂರು, ತೆಲುಗು ಭಾಷೆಯ ಒಂದು ಹಾಗೂ ಕನ್ನಡದ ಎರಡು ನಾಟಕಗಳು ಸೇರಿದಂತೆ ಒಟ್ಟು ಎಂಟು ನಾಟಕಗಳು ಪ್ರದರ್ಶನಗೊಳ್ಳಲಿವೆ. ಫೆ. 1ರಂದು ಸಂಜೆ 5ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ’ ಎಂದು ತಿಳಿಸಿದರು.
‘18 ವರ್ಷಗಳ ನಂತರ ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ನಾಟಕ ಮಹೋತ್ಸವ ಆಯೋಜಿಸಲಾಗುತ್ತಿದೆ. ಇದಕ್ಕಾಗಿ ಅಕಾಡೆಮಿ ₹25 ಲಕ್ಷ ವೆಚ್ಚ ಮಾಡುತ್ತಿದೆ. ಬೆಂಗಳೂರಿಗೆ ಆಗಮಿಸುವ ವಿದೇಶಿ ಹಾಗೂ ದೇಶಿ ಕಲಾವಿದರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಮೇಕಪ್, ಬೊಂಬೆಯಾಟಕ್ಕಾಗಿಯೇ 15 ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿವಿಧ ಅಕಾಡೆಮಿಗಳ ಪುಸ್ತಕ ಪ್ರದರ್ಶನವು ಇರಲಿದೆ. ಜಾನಪದ ಕಲೆ, ನೃತ್ಯ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದೆ ಎಂದರು.
‘ರಂಗ ಭೂಮಿಯಲ್ಲಿ 50 ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ನಟರಂಗ, ರಂಗ ಸಂಪದ, ಬೆನಕ, ಸ್ಪಂದನ, ಕಲಾಗಂಗೋತ್ರಿ, ನಾಟ್ಯ ದರ್ಪಣ, ಸಮುದಾಯ ಹಾಗೂ ಕಲಾಮಂದಿರ ತಂಡಗಳನ್ನು ಗೌರವಿಸಲಾಗುವುದು’ ಎಂದು ಹೇಳಿದರು.
ಎನ್‌ಎಸ್‌ಡಿಯ ಪ್ರಾದೇಶಿಕ ಕೇಂದ್ರದ ನಿರ್ದೇಶಕಿ ವೀಣಾ ಮಾತನಾಡಿ, ‘ದೇಶದಲ್ಲಿ ಏಕಕಾಲದಲ್ಲಿಯೇ 11 ವಿವಿಧ ಪ್ರದೇಶಗಳಲ್ಲಿ ಈ ಮಹೋತ್ಸವ ನಡೆಯುತ್ತಿದ್ದು, ಶ್ರೀಲಂಕಾದ ಕೊಲಂಬೊ ಹಾಗೂ ನೇಪಾಳದ ಕಠ್ಮಂಡುವಿನಲ್ಲೂ ನಡೆಯಲಿದೆ. ದೇಶದಾದ್ಯಂತ ಈ ಮಹೋತ್ಸವದಲ್ಲಿ 69 ನಾಟಕಗಳು ಪ್ರದರ್ಶನಗೊಳ್ಳಲಿದ್ದು, 1,200ಕ್ಕೂ ಹೆಚ್ಚಿನ ಕಲಾವಿದರು ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.
ಪ್ರತಿದಿನ ಸಂಜೆ 5ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದೆ. ಸಾಹಿತಿಗಳಾದ ಎಚ್.ಎಸ್. ಶಿವಪ್ರಕಾಶ್, ಕೆ. ಮರುಳಸಿದ್ಧಪ್ಪ, ಎಸ್.ಜಿ. ಸಿದ್ಧರಾಮಯ್ಯ, ಚಂದ್ರಶೇಖರ ಕಂಬಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, ರಂಗಕರ್ಮಿ ಬಿ. ಜಯಶ್ರೀ, ನಿರ್ದೇಶಕ ಟಿ.ಎನ್. ಸೀತಾರಾಂ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
‘ಫೆ. 2ರಂದು ರಂಗ ಪರಿಷೆ’
ಬೆಂಗಳೂರಿನ ಎಲ್ಲ ರಂಗ ತಂಡಗಳ ಮತ್ತು ರಂಗ ಶಿಕ್ಷಣ ನೀಡುವ ಕೇಂದ್ರಗಳ ಸಹಕಾರದೊಂದಿಗೆ ಫೆ. 2ರಂದು ರಂಗ ಪರಿಷೆ ಎಂಬ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೇತೃತ್ವದಲ್ಲಿ ಆಯೋಜಿಸಲಾಗುತ್ತಿದೆ. ಬೆಳಿಗ್ಗೆ 10.30ರಿಂದ ಸಂಜೆ 5ರ ವರೆಗೆ ವಿವಿಧ ರಂಗ ತಂಡಗಳು ವಿಶೇಷ ಕಾರ್ಯಕ್ರಮಗಳನ್ನು ನಡೆಸಿಕೊಡಲಿವೆ. ರಂಗ ಗೀತೆಗಳು ರಂಗ ದೃಶ್ಯಾವಳಿಗಳು ಬೀದಿ ನಾಟಕ ರಂಗ ಸಂವಾದ ರಂಗಸಜ್ಜಿಕೆಗಳ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಡಲಿವೆ. ಇದಕ್ಕಾಗಿ ಕಲಾನಿರ್ದೇಶಕ ಶಶಿಧರ್ ಅಡಪ ಅವರು ಕಲಾಗ್ರಾಮದ ಆವರಣವನ್ನು ವಿಶಿಷ್ಟ ಪರಿಕಲ್ಪನೆಯಲ್ಲಿ ಸಿಂಗರಿಸಿದ್ದಾರೆ. ರಂಗ ನಿರ್ದೇಶಕ ಶಿವರುದ್ರಯ್ಯ ಅವರು ತೆಗೆದಿರುವ ನಾಟಕಗಳ ಛಾಯಾಚಿತ್ರಗಳ ಪ್ರದರ್ಶನವೂ ಇರಲಿದೆ ಎಂದು ನಿರ್ದೇಶಕ ಬಿ. ಸುರೇಶ್ ರಂಗಕರ್ಮಿ ಶಶಿಧರ್ ಬಾರಿಘಾಟ್ ತಿಳಿಸಿದರು.
ದಿನಾಂಕ;ನಾಟಕ;ಭಾಷೆ;ನಿರ್ದೇಶನ
ಫೆ. 1;ಎ ಫ್ರೆಂಡ್ ಬಿಯಾಂಡ್ ದಿ ಫೆನ್ಸ್;ಕನ್ನಡ;ಶ್ರವಣ ಹೆಗ್ಗೋಡು
ಫೆ. 2;ದಿ ಮ್ಯಾರೇಜ್ ಆಫ್ ಬಲ್ಙಿಮ್ನೋವ್;ರಷ್ಯನ್;ನಿನಾ ಚುಸ್ವಾ
ಫೆ. 3;ಮಾಯರಿ ಮೈ ಕಾಸೇ ಕಹು;ಹಿಂದಿ;ಅಜಯ್ ಕುಮಾರ್
ಫೆ. 4;ತಾಜ್ ಮಹಲ್ ಕಾ ಟೆಂಡರ್;ಹಿಂದಿ; ಚಿತ್ರರಂಜನ್ ತ್ರಿಪಾಠಿ ಫೆ.
5;ರೋಮಿಯೋ ಜೂಲಿಯೆಟ್;ಸಿಂಹಳ್;ಜಯಂತ್ ಬಂದಾರ ಫೆ.
6;ಪಾಕುಡುರಾಲು;ತೆಲುಗು;ನಸ್ರೀನ್ ಇಸಾಕ್ ಫೆ.
7;ಯಯಾತಿ;ಹಿಂದಿ;ಅಸ್ಲಾನಿ ಯೂನುಸ್ ಶೇಖ್ ಫೆ.
8;ಜಸ್ಮಾ ಓಡನ್;ಕನ್ನಡ;ಬಿ. ಜಯಶ್ರೀ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.