
ಬೆಂಗಳೂರು: ರಾಷ್ಟ್ರೀಯ ವಿಜ್ಞಾನ ದಿನ ಹಾಗೂ ‘ರಾಮನ್ ಪರಿಣಾಮ’ದ ಆವಿಷ್ಕಾರದ ಸ್ಮರಣೆ ದಿನವು ವಿದ್ಯಾರ್ಥಿಗಳಿಗೆ ಸಂಭ್ರಮವನ್ನುಂಟು ಮಾಡಿತ್ತು. ರಾಮನ್ ಸಂಶೋಧನಾ ಸಂಸ್ಥೆಯ (ಆರ್‌ಆರ್‌ಐ) ತುಂಬೆಲ್ಲ ಓಡಾಡಿ ಖುಷಿ ಪಟ್ಟರು.
ಆರ್‌ಆರ್‌ಐ ಸಂಸ್ಥಾಪಕ ಸಿ.ವಿ. ರಾಮನ್ ಅವರು ನೊಬೆಲ್ ಪಡೆದ ಮೊದಲ ಹಾಗೂ ಏಕೈಕ ವಿಜ್ಞಾನಿ. ಅವರು ‘ರಾಮನ್ ಪರಿಣಾಮ’ದ ಆವಿಷ್ಕಾರವನ್ನು 1928ರ ಫೆ.28ರಂದು ಘೋಷಿಸಿದ್ದರು. ಈ ಆವಿಷ್ಕಾರಕ್ಕೆ ಈಗ 98 ವರ್ಷ ತುಂಬಿರುವ ಪ್ರಯುಕ್ತ ಆರ್‌ಆರ್‌ಐಯಲ್ಲಿ ಮುಕ್ತ ದಿನ: ವಿಜ್ಞಾನ ಪ್ರದರ್ಶನ ಹಾಗೂ ಕ್ಯಾಂಪಸ್ ದರ್ಶನ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳು, ವಿಜ್ಞಾನಾಸಕ್ತರು ಮುಕ್ತವಾಗಿ ಪಾಲ್ಗೊಳ್ಳಲು ಅವಕಾಶವಿತ್ತು.
ವಿಜ್ಞಾನ-ವಿಷಯದ ಸಂಭ್ರಮ ದಿನ ಇದಾಗಿದ್ದು, ‘ವಿಜ್ಞಾನಿಗಳ ಭೇಟಿ’, ‘ವಿದ್ಯಾರ್ಥಿಗಳ ಭೇಟಿ’, ‘ನಿಧಿ ಹುಡುಕಾಟ’, ‘ಸಾಕ್ಷ್ಯಚಿತ್ರ’ ಪ್ರದರ್ಶನ ಸಹಿತ ವಿವಿಧ ಕಾರ್ಯಕ್ರಮಗಳು ಏಕಕಾಲದಲ್ಲಿ ನಡೆದವು. ವಿದ್ಯಾರ್ಥಿಗಳು, ಪೋಷಕರು ಮತ್ತು ಇತರ ಸಂದರ್ಶಕರು ಆರ್ಕೈವಲ್ ಗ್ಯಾಲರಿಗೆ ಭೇಟಿ ನೀಡಿದರು. ಸಂಸ್ಥೆಯಲ್ಲಿ ಹಿಂದೆ ಮಾಡಿದ್ದ ಸಂಶೋಧನೆಗಳು, ಈಗ ನಡೆಯುತ್ತಿರುವ ಸಂಶೋಧನೆಗಳನ್ನು ವೀಕ್ಷಿಸಿ ವಿವರ ಪಡೆದರು.
ರಾಮನ್ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿ ಸಿ.ವಿ. ರಾಮನ್ ಅವರ ಇತಿಹಾಸ ಸಾರುವ ಚಿತ್ರ, ಕಲಾಕೃತಿಗಳನ್ನು ವೀಕ್ಷಿಸಿದರು. ಆಸಕ್ತಿದಾಯಕ ವಿಜ್ಞಾನ ಪ್ರದರ್ಶನಗಳು, ಮಾದರಿಗಳು ಮತ್ತು ಪ್ರಯೋಗಗಳನ್ನು ಪ್ರದರ್ಶಿಸುವ ಮಳಿಗೆಗಳು ಮತ್ತು ಕಿಯೋಸ್ಕ್‌ಗಳು ಗಮನ ಸೆಳೆದವು. ಖಗೋಳ ವಿಜ್ಞಾನ, ಕ್ವಾಂಟಮ್ ಡೊಮೇನ್‌ಗಳಲ್ಲಿ ಆರ್‌ಆರ್‌ಐನ ಪ್ರಯತ್ನಗಳು ಸೇರಿದಂತೆ ಸಂಸ್ಥೆಯಲ್ಲಿನ ಪ್ರಸ್ತುತ ಸಂಶೋಧನೆಗೆ ಸಂಬಂಧಿಸಿದ ಪ್ರದರ್ಶನಗಳು ವಿದ್ಯಾರ್ಥಿಗಳನ್ನು ಆಕರ್ಷಿಸಿದವು.
ಯಂಗ್ ಇನೋವೇಟರ್ಸ್ ಎಜುಕೇಷನಲ್ ಸರ್ವೀಸಸ್ ಪ್ರೈವೆಟ್ ಲಿಮಿಟೆಡ್, ಸೈನ್ಸ್ ಗ್ಯಾಲರಿ ಬೆಂಗಳೂರು, ಇನೋವೇಶನ್ ಮತ್ತು ಸೈನ್ಸ್ ಪ್ರಮೋಷನ್ ಫೌಂಡೇಶನ್, ರಾಮ್ಸ್ ಅಬ್ಸರ್ವೇಟರಿ, ಪ್ರೊವೇಸ್ಟ್ ಕಾನ್ಸೆಪ್ಟ್ಸ್, ಗಿಫ್ಟ್ಡ್ ಮೈಂಡ್ಸ್, ಕ್ರಿಯೇಟಿವ್ ಮತ್ತು ಐಸಿಟಿಎಸ್ ಸೇರಿವೆ. ಇಂಡಿಯಾ ಪೋಸ್ಟ್ ಸಹಿತ ಹಲವು ಸಂಸ್ಥೆಗಳು 20ಕ್ಕೂ ಅಧಿಕ ವೈಜ್ಞಾನಿಕ ಪ್ರದರ್ಶನಗಳ ಮಳಿಗೆಗಳನ್ನು ಹಾಕಿ, ಆಸಕ್ತರಿಗೆ ವಿವರ ನೀಡಿದವು.
ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ, ಛಾಯಾಗ್ರಹಣ ಸ್ಪರ್ಧೆ ಮತ್ತು ವೇಷಭೂಷಣ ಸ್ಪರ್ಧೆಗಳನ್ನು ಸಹ ಆಯೋಜಿಸಲಾಗಿತ್ತು, ಅದರಲ್ಲಿ ವಿಜೇತರನ್ನು ಆರ್‌ಆರ್‌ಐ ಸಂಸ್ಥೆಯ ನಿರ್ದೇಶಕ ತರುಣ್ ಸೌರದೀಪ್ ಸನ್ಮಾನಿಸಿದರು. ಬೆಂಗಳೂರು ಸುತ್ತಮುತ್ತಲಿನ 20 ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಮತ್ತು ಕಾಲೇಜುಗಳ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.