ADVERTISEMENT

ನೈಸರ್ಗಿಕ ಕೃಷಿ ಸುರಕ್ಷಿತ ಮಾರ್ಗ: ಕುಲಪತಿ ಎಸ್.ವಿ. ಸುರೇಶ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 15:33 IST
Last Updated 10 ಡಿಸೆಂಬರ್ 2025, 15:33 IST
ನೈಸರ್ಗಿಕ ಕೃಷಿ ಸಮ್ಮೇಳನದಲ್ಲಿ ಪ್ರದರ್ಶನಕ್ಕೆ ಇಟ್ಟಿರುವ ವಿವಿಧ ಉತ್ಪನ್ನಗಳನ್ನು ಎಸ್.ವಿ. ಸುರೇಶ, ಅಬ್ದುಲ ಖಾದರ ನಡಕಟ್ಟಿನ ವೀಕ್ಷಿಸಿದರು
ನೈಸರ್ಗಿಕ ಕೃಷಿ ಸಮ್ಮೇಳನದಲ್ಲಿ ಪ್ರದರ್ಶನಕ್ಕೆ ಇಟ್ಟಿರುವ ವಿವಿಧ ಉತ್ಪನ್ನಗಳನ್ನು ಎಸ್.ವಿ. ಸುರೇಶ, ಅಬ್ದುಲ ಖಾದರ ನಡಕಟ್ಟಿನ ವೀಕ್ಷಿಸಿದರು   

ಪ್ರಜಾವಾಣಿ ವಾರ್ತೆ ‌‌

ಬೆಂಗಳೂರು: ‘ಜನರ ಆರೋಗ್ಯ ಮತ್ತು ರೈತರ ಆದಾಯ ಹೆಚ್ಚಿಸಲು ನೈಸರ್ಗಿಕ ಕೃಷಿ ಸುರಕ್ಷಿತ ಮಾರ್ಗವಾಗಿದೆ’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ ತಿಳಿಸಿದರು. 

ಜಿಕೆವಿಕೆ ಆವರಣದಲ್ಲಿ ಆಯೋಜಿಸಿರುವ ನೈಸರ್ಗಿಕ ಕೃಷಿ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. 

ADVERTISEMENT

‘ಸ್ಥಳೀಯ ಬೀಜ, ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ, ಸಾವಯವ ಕೀಟ ಹಾಗೂ ರೋಗ ನಿರ್ವಹಣೆ ಮಾಡುವುದಕ್ಕೆ ಸಾಂಪ್ರದಾಯಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳವುದರಿಂದ ಬೆಳೆ ಉತ್ಪಾದನಾ ವೆಚ್ಚ ಕಡಿಮೆ ಮಾಡಬಹುದು. ಭೂಮಿತಾಯಿ, ನೀರು, ಮಣ್ಣು ಮತ್ತು ಜೀವ ವೈವಿಧ್ಯತೆಗಳನ್ನು ಉಳಿಸುವುದು ಇಂದಿನ ಅಗತ್ಯವಾಗಿದೆ. ರೈತರ ಸುಸ್ಥಿರ ಬದುಕು, ಜನರ ಆರೋಗ್ಯ ಹಾಗೂ ರಾಷ್ಟ್ರದ ಆಹಾರ ಭದ್ರತೆಗೆ ನೈಸರ್ಗಿಕ ಕೃಷಿ ಸಹಕಾರಿ ಆಗಿದೆ ಎಂದು ಹೇಳಿದರು. 

ಧಾರವಾಡ ಜಿಲ್ಲೆಯ ಅಣ್ಣಿಗೇರಿಯ ಪ್ರಗತಿಪರ ಕೃಷಿಕ ಅಬ್ದುಲ ಖಾದರ ನಡಕಟ್ಟಿನ ಅವರು ಮಾತನಾಡಿ, ‘ಇತ್ತೀಚಿಗೆ ಕೃಷಿ ಬೆಳೆಗಳನ್ನು ಹೆಚ್ಚು ಉತ್ಪಾದಿಸುವ ಉದ್ದೇಶದಿಂದ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆ ಹೆಚ್ಚಾಗಿದೆ. ಇದು ಮಣ್ಣು, ಜಲ, ಪರಿಸರ ಮತ್ತು ಮಾನವನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ನೈಸರ್ಗಿಕ ಕೃಷಿ ಪರ್ಯಾಯ ಮಾರ್ಗವಾಗಿದೆ’ ಎಂದು ತಿಳಿಸಿದರು.

ರೈತ ಮುನ್ನಡೆಯ ಮಾದರಿಗಳು, ಕಡಿಮೆ ವೆಚ್ಚದ ನೈಸರ್ಗಿಕ ಉತ್ಪನ್ನಗಳು, ಹೊಸ ತಂತ್ರಜ್ಞಾನಗಳು, ನೈಸರ್ಗಿಕ ಕೃಷಿಗೆ ಪೂರಕವಾದ ಸಾವಯವ ಪರಿಕರಗಳು ಹಾಗೂ ಸಾವಯವ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.   

ಸಮ್ಮೇಳನದಲ್ಲಿ ದೇಶದ ವಿವಿಧ ಭಾಗಗಳಿಂದ ವಿಜ್ಞಾನಿಗಳು, ಉದ್ಯಮಿಗಳು, ನವೋದ್ಯಮಗಳು, ಪ್ರಗತಿಪರ ರೈತರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.