ADVERTISEMENT

ನಾಡಹಬ್ಬ: ಸರಳ ಆಚರಣೆಗೆ ಬೆಂಗಳೂರು ನಗರ ಸಜ್ಜು

ವರ್ಚುವಲ್‌ ರೂಪದಲ್ಲಿ ಕಾರ್ಯಕ್ರಮ ಪ್ರಸಾರಕ್ಕೆ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2020, 21:38 IST
Last Updated 24 ಅಕ್ಟೋಬರ್ 2020, 21:38 IST
ಬೆಂಗಳೂರು ದುರ್ಗಾಪೂಜೆ ಕಮಿಟಿಯು ಮಾಂಫೊ ಕನ್ವೆನ್ಷನ್‌ ಸೆಂಟರ್‌ನಲ್ಲಿ ಪ್ರತಿಷ್ಠಾಪಿಸಿರುವ ದುರ್ಗಾ ಮೂರ್ತಿಗೆ ಸಾರ್ವಜನಿಕರು ಶನಿವಾರ ಪೂಜೆ ಸಲ್ಲಿಸಿದರು ಪ್ರಜಾವಾಣಿ ಚಿತ್ರ
ಬೆಂಗಳೂರು ದುರ್ಗಾಪೂಜೆ ಕಮಿಟಿಯು ಮಾಂಫೊ ಕನ್ವೆನ್ಷನ್‌ ಸೆಂಟರ್‌ನಲ್ಲಿ ಪ್ರತಿಷ್ಠಾಪಿಸಿರುವ ದುರ್ಗಾ ಮೂರ್ತಿಗೆ ಸಾರ್ವಜನಿಕರು ಶನಿವಾರ ಪೂಜೆ ಸಲ್ಲಿಸಿದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ಈ ಬಾರಿ ನಾಡಹಬ್ಬ ದಸರಾ ಹಾಗೂ ಆಯುಧಪೂಜೆಯನ್ನು ಸರಳವಾಗಿ ಆಚರಿಸಲು ನಗರ ಸಜ್ಜಾಗಿದೆ. ಹತ್ತಾರು ವರ್ಷಗಳಿಂದ ವೈಭವದಿಂದ ನವರಾತ್ರಿ ಉತ್ಸವ ಆಚರಿಸುತ್ತಿರುವ ನಗರದ ಮಳಿಗೆಗಳು, ಹಲವು ಸಂಘ ಸಂಸ್ಥೆಗಳೂ ಈ ಬಾರಿ ಕೋವಿಡ್‌ ಕಾರಣಕ್ಕಾಗಿ ಅದ್ಧೂರಿತನವನ್ನು ಕೈಬಿಟ್ಟಿವೆ.

ಆಯುಧ ಪೂಜೆ ಭಾನುವಾರ ಇರುವುದರಿಂದ ಶನಿವಾರದಿಂದಲೇ ಸಿದ್ಧತೆ ಆರಂಭವಾಗಿತ್ತು. ವಾಹನ, ಮಳಿಗೆ, ಯಂತ್ರಗಳ ಪೂಜೆಗಾಗಿ ತಯಾರಿ ನಡೆದಿತ್ತು. ಸೋಮವಾರದ ವಿಜಯದಶಮಿ ಆಚರಣೆಗೂ ಸಿದ್ಧತೆಗಳೂ ಮುಂದುವರಿದಿದ್ದವು. ಹಲವೆಡೆ ವರ್ಚುವಲ್‌ ರೂಪದಲ್ಲಿ ದುರ್ಗಾ ಪೂಜೆ ಹಾಗೂ ಸಂಗೀತೋತ್ಸವಗಳು ಕೂಡ ಆಯೋಜನೆಗೊಂಡಿವೆ.

ನಗರದ ನಂದಿನಿ ಲೇಔಟ್‌ನಲ್ಲಿ ‘ನವರಾತ್ರಿ ಹಾಗೂ ನಂದಿನಿ ಉತ್ಸವ’ ಕಳೆದ 18 ವರ್ಷಗಳಿಂದ ಅದ್ಧೂರಿಯಾಗಿ ನಡೆಯುತ್ತಿತ್ತು. ಈ ಬಾರಿ ದುರ್ಗಾದೇವಿಯನ್ನು ಪ್ರತಿಷ್ಠಾಪಿಸಿ, ಹೋಮ, ಪೂಜೆ ಹಮ್ಮಿಕೊಂಡಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಆನ್‌ಲೈನ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ. ಸೋಮವಾರ ಚಂಡಿಕಾ ಹೋಮ ನಡೆಸಿ ದುರ್ಗಾದೇವಿ ಮೂರ್ತಿಯನ್ನು ವಿಸರ್ಜಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ADVERTISEMENT

ಜೆ.ಸಿ. ನಗರದ ದಸರಾ ಉತ್ಸವ ಸಮಿತಿಯು ಮುನಿರೆಡ್ಡಿಪಾಳ್ಯ, ಹೆಬ್ಬಾಳ ಸೇರಿದಂತೆ ಹತ್ತಾರು ಗ್ರಾಮಗಳನ್ನು ಒಟ್ಟಾಗಿ ಸೇರಿಸಿ ಮೈಸೂರು ದಸರಾದಂತೆ ಅದ್ಧೂರಿಯಾಗಿ ದಸರಾ ಆಚರಿಸುತ್ತಿತ್ತು. ಹೂವಿನ ಪಲ್ಲಕ್ಕಿಗಳ ಮೆರವಣಿಗೆ ನಡೆಯುತ್ತಿತ್ತು. ಈ ಬಾರಿ, ಬನ್ನಿಯನ್ನು ಮನೆ ಮನೆಗೆ ಹಂಚುವ ಮೂಲಕ ಸಾಂಪ್ರದಾಯಿಕವಾಗಿ ಆಚರಿಸಲಿದೆ. ಜತೆಗೆ ಆಯಾ ಬಡಾವಣೆಗಳಲ್ಲೇ ದಸರಾ ಆಚರಣೆಗೆ ನಿರ್ಧರಿಸಲಾಗಿದೆ.

‘ಮೈಸೂರು ಅರಸರ ಕಾಲದಲ್ಲಿ ಪ್ರತಿಷ್ಠಾಪನೆಯಾಗಿರುವ ಮಹೇಶ್ವರಮ್ಮ ಜೆ.ಸಿ. ನಗರದ ಆದಿ ದೇವತೆ. ಈ ದೇವಿಗೆ ಮೊದಲ ಪೂಜೆ ಸಲ್ಲಿಸುವ ಮೂಲಕ ನವರಾತ್ರಿ ಉತ್ಸವ ಆರಂಭವಾಗಿದ್ದು, ನಂತರ ಗುಂಡುಮುನೇಶ್ವರ ಹಾಗೂ ಆಂಜನೇಯ ಸ್ವಾಮಿಗಳಿಗೆ ವಿಶೇಷ ಪೂಜೆ ನೆರವೇರುತ್ತದೆ. ಈ ಬಾರಿ ವೇದಿಕೆ ನಿರ್ಮಿಸಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮಗಳೂ ಇರುವುದಿಲ್ಲ’ ಎಂದು ಉತ್ಸವ ಸಮಿತಿ ಸಂಘಟನಾ ಕಾರ್ಯದರ್ಶಿ ಆರ್. ಪ್ರಕಾಶ್ ರಾವ್ ಹೇಳಿದ್ದಾರೆ.

ವಿಶೇಷ ಪೂಜೆ: ಬನಶಂಕರಿ, ದುರ್ಗಾ ಪರಮೇಶ್ವರಿ ಸೇರಿದಂತೆ ನಗರದ ನಾನಾ ದೇವಾಲಯಗಳಲ್ಲಿ ಭಾನುವಾರ ಮತ್ತು ಸೋಮವಾರ ದೇವರಿಗೆ ವಿಶೇಷ ಅಲಂಕಾರ ಮತ್ತು ಪೂಜೆ ನೆರವೇರಲಿದೆ.

ದುರ್ಗಾ ಪೂಜೆ: ಬೆಂಗಳೂರು ದುರ್ಗಾ ಪೂಜಾ ಕಮಿಟಿಯು ಮಾನ್ಯತಾ ಟೆಕ್ ಪಾರ್ಕ್ ಸಮೀಪದ ಮ್ಯಾನ್ಫೊ ಕನ್ವೆನ್ಷನ್ ಸೆಂಟರ್ ನಲ್ಲಿ ದುರ್ಗಾ ಪೂಜೆಯನ್ನು ಆಯೋಜಿಸಿದ್ದು, ಶನಿವಾರ ಸಂಜೆ ವಿಶೇಷ ಪೂಜೆ ನೆರವೇರಿಸಲಾಯಿತು. ಮರ, ಕಾಗದ, ಬೇಬಿ ಆಯಿಲ್‌ ಬಳಸಿ ದುರ್ಗಾ ಮೂರ್ತಿಯನ್ನು ನಿರ್ಮಿಸಲಾಗಿತ್ತು.

‘ಈ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸದೆ ಚಿತ್ರಕಲಾ ಪರಿಷತ್‌ನಲ್ಲಿ ಪ್ರದರ್ಶನಕ್ಕಿಡುತ್ತೇವೆ’ ಎಂದು ಕಮಿಟಿಯ ಮುಖ್ಯಸ್ಥೆ ರುನೊ ರಾಯ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.