ADVERTISEMENT

ನಕ್ಸಲರ ಮೇಲಿನ ಪ್ರಕರಣ ಹಿಂಪಡೆಯಲು ಶಾಂತಿಗಾಗಿ ನಾಗರಿಕರ ವೇದಿಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 16:12 IST
Last Updated 8 ಜನವರಿ 2026, 16:12 IST
2025ರ ಜ.8ರಂದು ಕಾಡನಿಂದ ಹೊರ ಬಂದ ನಕ್ಸಲರ ತಂಡ
2025ರ ಜ.8ರಂದು ಕಾಡನಿಂದ ಹೊರ ಬಂದ ನಕ್ಸಲರ ತಂಡ   

ಬೆಂಗಳೂರು: ‘ನಕ್ಸಲ್‌ ಕಾರ್ಯಕರ್ತರ ಮೇಲೆ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ಹಿಂಪಡೆಯಬೇಕು. ಮುಖ್ಯವಾಹಿನಿಗೆ ಬಂದಿರುವ ನಕ್ಸಲರಿಗೆ ಪುನರ್ವಸತಿ ಒದಗಿಸಲು ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು’ ಎಂದು ಶಾಂತಿಗಾಗಿ ನಾಗರಿಕರ ವೇದಿಕೆ ಆಗ್ರಹಿಸಿದೆ.

ವೇದಿಕೆ ಸದಸ್ಯರಾದ ನಗರಗೆರೆ ರಮೇಶ್, ವಿ.ಎಸ್. ಶ್ರೀಧರ್, ತಾರಾ ರಾವ್, ಬಿ.ಟಿ. ಲಲಿತಾ ನಾಯಕ್, ನೂರ್ ಶ್ರೀಧರ್, ವೀರಸಂಗಯ್ಯ ಅವರು ಗುರುವಾರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಒಂದು ವರ್ಷದ ಹಿಂದೆ ಮುಖ್ಯವಾಹಿನಿಗೆ ಬಂದ ಲತಾ, ಸುಂದರಿ, ವನಜಾಕ್ಷಿ, ರಮೇಶ್, ವಸಂತ್, ರವೀಂದ್ರ ಅವರು ಜೈಲಿನಲ್ಲಿಯೇ ಇದ್ದಾರೆ. ಇವರ ಮೇಲೆ ಇರುವ ಪ್ರಕರಣಗಳಿಗೆ ಸಂಬಂಧಿಸಿ ಯಾವುದೇ ರೀತಿಯ ಕಾನೂನು ಪ್ರಕ್ರಿಯೆಗಳು ನಡೆದಿಲ್ಲ. ಇದಕ್ಕೂ ಮುನ್ನ ಮುಖ್ಯವಾಹಿನಿಗೆ ಬಂದಿದ್ದ ಕನ್ಯಾಕುಮಾರಿ ಕಳೆದ ಒಂಬತ್ತು ವರ್ಷಗಳಿಂದ ಜೈಲಿನಲ್ಲಿಯೇ ಇದ್ದಾರೆ. ಇವರ ವಿಚಾರಣೆಗೆ ತ್ವರಿತ ನ್ಯಾಯಾಲಯ ಸ್ಥಾಪಿಸುವ ಸರ್ಕಾರದ ನಿರ್ಧಾರ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ’ ಎಂದು ದೂರಿದರು. 

ADVERTISEMENT

‘ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಇವರೆಲ್ಲರ ಮೇಲೆ ಹಲವಾರು ಪ್ರಕರಣಗಳು ದಾಖಲಾಗಿವೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ಪತ್ರ ಬರೆದಿದ್ದರು. ಅದು ಅಲ್ಲಿಗೆ ಮುಗಿದು ಹೋಗಿದೆ. ನಮ್ಮನ್ನು ನಂಬಿ ಬಂದ ಈ ಆದಿವಾಸಿ, ದಲಿತ ಕಾರ್ಯಕರ್ತರಿಗೆ ಇದುವರೆಗೂ ರಾಜ್ಯ ಸರ್ಕಾರದಿಂದ ಯಾವುದೇ ರೀತಿಯ ನೆರವು ಸಿಗಲಿಲ್ಲ’ ಎಂದರು.

‘ಈ ಹಿಂದೆ ಮುಖ್ಯವಾಹಿನಿಗೆ ಬಂದಿದ್ದ ಪದ್ಮನಾಭ, ರೇಣುಕಾ, ರಿಜ್ವಾನಾ, ಚೆನ್ನಮ್ಮ, ಜ್ಞಾನದೇವ, ಪರಶುರಾಮ ಅವರಿಗೆ ಜೀವನ ನಿರ್ವಹಣೆ ಸವಾಲಾಗಿದೆ. ಸರ್ಕಾರ ನೀಡಿದ್ದ ಪರಿಹಾರವು ಸಾಲ ಮತ್ತು ಕೋರ್ಟ್‌ನ ಖರ್ಚುಗಳಿಗೆ ಸಾಕಾಗಲಿಲ್ಲ. ಪುನರ್ವಸತಿಗೆ ಸಂಬಂಧಿಸಿದ ಸ್ವಯಂ ಉದ್ಯೋಗಕ್ಕೆ ನೆರವು ಮತ್ತು ವಸತಿ ಸೌಲಭ್ಯ ಭರವಸೆಯಾಗಿಯೇ ಉಳಿದಿದ್ದು ಅನುಷ್ಠಾನಕ್ಕೆ ಬಂದಿಲ್ಲ’ ಎಂದು ದೂರಿದರು. 

‘ಜೈಲಿನಲ್ಲಿರುವ ನಕ್ಸಲರ ಮೇಲೆ ಇರುವ ಪ್ರಕರಣಗಳನ್ನು ಛತ್ತೀಸಗಢ ಸರ್ಕಾರದ ಮಾದರಿಯಲ್ಲಿ ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳಬೇಕು. ಕನ್ಯಾಕುಮಾರಿಯವರ ಬಿಡುಗಡೆಗೆ ಆದ್ಯತೆ ನೀಡಬೇಕು. ನಕ್ಸಲ್‌ ಪ್ರದೇಶದ ಅಭಿವೃದ್ಧಿಗಾಗಿ ಮಂಜೂರಾಗಿರುವ ಅನುದಾನವನ್ನು ಮೂಲ ಉದ್ದೇಶ ಗಮನದಲ್ಲಿಟ್ಟುಕೊಂಡು ಬಳಸಲು ವಿಶೇಷ ಅಧಿಕಾರಿಯನ್ನು ನಿಯೋಜಿಸಲು ಆದೇಶ ಹೊರಡಿಸಬೇಕು’ ಎಂದು ಒತ್ತಾಯಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.