ಬೆಂಗಳೂರು: ‘ಮಣ್ಣಿನ ಆರೋಗ್ಯದ ಕುರಿತು ಕೈಗೊಳ್ಳುವ ಸಂಶೋಧನೆಗಳಿಗೆ ಹೆಚ್ಚಿನ ಅನುದಾನವನ್ನು ಒದಗಿಸಬೇಕು. ಇದರಿಂದ ಸಂಶೋಧನೆಯನ್ನು ಇನ್ನಷ್ಟು ವಿಸ್ತರಿಸಲು ಸಾಧ್ಯವಾಗುತ್ತದೆ’ ಎಂದು ರಾಷ್ಟ್ರೀಯ ಮಣ್ಣು ಸರ್ವೇಕ್ಷಣೆ ಮತ್ತು ಭೂ ಬಳಕೆ ನಿಯೋಜನೆ ಸಂಸ್ಥೆ (ಎನ್‌ಬಿಎಸ್‌ಎಸ್ ಆ್ಯಂಡ್ ಎಲ್‌ಯುಪಿ) ನಿರ್ದೇಶಕ ಎನ್.ಜಿ.ಪಾಟೀಲ್ ಅಭಿಪ್ರಾಯಪಟ್ಟರು.
ನಗರದಲ್ಲಿ ಮಣ್ಣು ಸರ್ವೇಕ್ಷಣೆ ಸಂಸ್ಥೆಯ ಸಹಯೋಗದೊಂದಿಗೆ ಮಂಗಳವಾರದಿಂದ ಆರಂಭವಾದ 3ನೇ ಅಂತರರಾಷ್ಟ್ರೀಯ ಮಣ್ಣು ವಿಜ್ಞಾನ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಇತ್ತೀಚೆಗೆ ಮಣ್ಣಿನ ಆರೋಗ್ಯದ ಸಂಶೋಧನೆಗೆ ಸರ್ಕಾರದಿಂದ ಅನುದಾನ ಬರುವುದು ಕಡಿಮೆಯಾಗಿದೆ. ಖಾಸಗಿ ಕ್ಷೇತ್ರದವರು ಇದರಲ್ಲಿ ಹಣವನ್ನು ತೊಡಗಿಸುವುದಿಲ್ಲ. ಅನುದಾನ ಕಡಿಮೆ ಇರುವಾಗ ಹೊಸ ತಂತ್ರಜ್ಞಾನಗಳ ಮೂಲಕ ಮಣ್ಣಿನ ಸಂಶೋಧನೆಯನ್ನು ಮುಂದುವರಿಸಿಕೊಂಡು ಹೋಗುವುದು ಅತ್ಯವಶ್ಯ’ ಎಂದು ಪ್ರತಿಪಾದಿಸಿದರು.
ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ (ಐಸಿಎಆರ್–ನೈಸರ್ಗಿಕ ಸಂಪನ್ಮೂಲ ನಿರ್ವಹಣೆ) ಉಪ ಮಹಾ ನಿರ್ದೇಶಕ ಸುರೇಶ್ ಚೌಧರಿ ‘ದೇಶದಲ್ಲಿ ಹೆಚ್ಚು ಸಣ್ಣ ಹಿಡುವಳಿದಾರರಿದ್ದು, ಮಣ್ಣಿನ ಆರೋಗ್ಯ ರಕ್ಷಣೆ ಒಂದು ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಣ್ಣಿನ ಆರೋಗ್ಯ ರಕ್ಷಣೆ ಕುರಿತು ಹೆಚ್ಚು ಒತ್ತು ನೀಡುತ್ತಿದೆ’ ಎಂದು ಹೇಳಿದರು.
ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತ ಮಹೇಶ ಶಿರೂರ ಮಾತನಾಡಿ, ‘ರಿವಾರ್ಡ್ ಮತ್ತು ಸುಜಲಾ ಯೋಜನೆಗಳಡಿ ರಾಜ್ಯದ 45 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಣ್ಣಿನ ಆರೋಗ್ಯದ ಮಾಹಿತಿಯನ್ನು ತಯಾರಿಸುತ್ತಿದ್ದೇವೆ. ಈ ವಿಷಯದಲ್ಲಿ ನಮ್ಮ ರಾಜ್ಯ ಮಾದರಿಯಾಗಿದೆ’ ಎಂದು ತಿಳಿಸಿದರು.
ಅಂತರರಾಷ್ಟ್ರೀಯ ಮಣ್ಣು ವಿಜ್ಞಾನಗಳ ಒಕ್ಕೂಟದ(ಐಯುಎಸ್‌ಎಸ್) ಅಧ್ಯಕ್ಷೆ ಪ್ರೊ.ಲೌರಾ ಪೊಗಿಯೊ, ‘ಬಹುತೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮಣ್ಣಿನ ಆರೋಗ್ಯದ ಬಗ್ಗೆ ಸಂಶೋಧನೆಗಳು ಕಡಿಮೆಯಾಗುತ್ತಿವೆ. ಭಾರತದಲ್ಲಿ ಇನ್ನೂ ಮುಂದುವರಿದಿದೆ’ ಎಂದು ಶ್ಲಾಘಿಸಿದರು.
ಕಾರ್ಯಾಗಾರದಲ್ಲಿ ಮಣ್ಣಿನ ತಜ್ಞರು, ‘ಡಿಜಿಟಲ್ ಮಣ್ಣು ಸರ್ವೇಕ್ಷಣೆ ಮತ್ತು ಭೂ ಬಳಕೆ’ ಕುರಿತು ಈವರೆಗಿನ ವೈಜ್ಞಾನಿಕ ಬೆಳವಣಿಗೆಗಳನ್ನು ವಿವರಿಸಿದರು. ಕೃತಕ ಬುದ್ದಿಮತ್ತೆ, ಮಷಿನ್‌ಲರ್ನಿಂಗ್ ಲಾಂಗ್ವೇಜ್‌ನಂತಹ ತಂತ್ರಜ್ಞಾನಗಳಿಂದ ವಿಸ್ತಾರ ಪ್ರದೇಶದ ಮಣ್ಣಿನ ಆರೋಗ್ಯದ ಮಾಹಿತಿಯನ್ನು ಸಂಗ್ರಹಿಸಿ, ಇಲಾಖೆಗಳು ಮತ್ತು ರೈತರ ಜೊತೆ ಹೇಗೆ ಹಂಚಿಕೊಳ್ಳಬಹುದು ಎಂಬುದರ ಕುರಿತು ಪ್ರಬಂಧಗಳನ್ನು ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.