ನೆಲಮಂಗಲ: ಬಸವಣ್ಣ ದೇವರ ಮಠದ ಸದಾಶಿವ ಸ್ವಾಮೀಜಿಗಳ ನಿರಂಜನ ಪಟ್ಟಾಧಿಕಾರ ಸುವರ್ಣ ಮಹೋತ್ಸವದ ಅಂಗವಾಗಿ, 57 ಮಠಾಧೀಶರಿಗೆ ಪಾದಪೂಜೆ, ಸಾಧಕ 30 ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
‘ತೋಂಟದ ಸಿದ್ದಲಿಂಗ ಶ್ರೀಗಳ 701 ವಿರಕ್ತರಲ್ಲಿ ಬಸವಣ್ಣದೇವರು ಒಬ್ಬರು. ಪಾಳುಬಿದ್ದಿದ್ದ ಪವಾಡ ಬಸವಣ್ಣದೇವರ ಮಠಕ್ಕೆ ಸಿದ್ದಗಂಗಾ ಶಿವಕುಮಾರ ಶ್ರೀಗಳ ದೂರದೃಷ್ಟಿಯ ಸೂಚನೆಯಂತೆ ಸದಾಶಿವ ಸ್ವಾಮೀಜಿ ಪಟ್ಟಾಧಿಕಾರ ವಹಿಸಿಕೊಂಡು, ವ್ಯವಸಾಯ ಮಾಡಿ ಮಠ ಕಟ್ಟಿ, ಶಾಲೆ ಪ್ರಾರಂಭಿಸಿ ಭದ್ರಬುನಾದಿ ಹಾಕಿದ್ದಾರೆ. ಇದೇ ಪರಂಪರೆಯನ್ನು ಈಗಿನ ಸಿದ್ದಲಿಂಗ ಶ್ರೀಗಳು ಮುಂದುವರಿಸಿ ಮಠವನ್ನು ಬೃಹತ್ತಾಗಿ ಬೆಳೆಸಿದ್ದಾರೆ’ ಎಂದು ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಹೇಳಿದರು.
ಸಂಸದ ಡಾ.ಕೆ.ಸುಧಾಕರ್ ಮಾತನಾಡಿ, ‘57 ಪೂಜ್ಯರನ್ನು ಒಂದೇ ವೇದಿಕೆಯಲ್ಲಿ ನೋಡುತ್ತಿರುವುದು ನಮ್ಮ ಪೂರ್ವಜನ್ಮದ ಸುಕೃತ. ಶ್ರೀಗಳ ತಪಸ್ಸಿನಿಂದ ನೆಲಮಂಗಲ ಮಣ್ಣಿಗೆ ಶಕ್ತಿ ಬಂದಿದೆ’ ಎಂದರು.
ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ಧರ್ಮ ಸಾಹಿತ್ಯ ಸಂಸ್ಕೃತಿ ಜ್ಞಾನವನ್ನು ಸಮತೂಕದಲ್ಲಿ ಸಮಸ್ತವನ್ನು ಸಮಾಜಕ್ಕೆ ಒದಗಿಸಿದ ಕೀರ್ತಿ ಮಠಗಳಿಗೆ ಸಲ್ಲುತ್ತದೆ. ಏನೂ ಇಲ್ಲದ ಮಠವನ್ನು ಎಲ್ಲವೂ ಇರುವಂತೆ ಶ್ರೀಗಳು ಮಾಡಿದ್ದಾರೆ’ ಎಂದರು.
ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ‘ವೀರಶೈವ ಮಠಗಳು ಮಾಡಿದ ಶಿಕ್ಷಣ ಕ್ರಾಂತಿಯಿಂದ ವಿದ್ಯಾವಂತರ ಸಂಖ್ಯೆ ಹೆಚ್ಚಾಗಿದೆ. ಅದೇ ಪರಂಪರೆಯ ಬಸವಣ್ಣದೇವರ ಮಠವನ್ನು ಸದಾಶಿವ ಸ್ವಾಮಿಗಳೆಂಬ ಘಟ ವಿಶ್ರಾಂತಿ ಪಡೆಯದೆ ಮನೆಗಳಿಗೆ ಹೋಗಿ ಜಾಗೃತಿ ಮೂಡಿಸಿ, ಸೌಕರ್ಯಗಳಿಲ್ಲದ ಕಾಲದಲ್ಲಿ ಈ ಭಾಗದ ಹಳ್ಳಿಗಳ ಜನರು ಶ್ರೀಮಠಕ್ಕೆ ಸೇವೆ ಸಲ್ಲಿಸುವಂತೆ ಮಾಡಿದ್ದಾ’ ಎಂದರು.
ಸಾಧಕ 30 ಶಿಕ್ಷಕರಿಗೆ ‘ಸದಾಶಿವ ಗುರುಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.