ADVERTISEMENT

ಹೆಬ್ಬಾಳ | ಸಂಚಾರ ದಟ್ಟಣೆ ನಿವಾರಣೆ: ಮತ್ತೊಂದು ಮೇಲ್ಸೇತುವೆ

ಡಿಪಿಆರ್ ತಯಾರಿಸಲು ಅನುಮೋದನೆ

ಕೆ.ಎಸ್.ಸುನಿಲ್
Published 27 ಜುಲೈ 2025, 0:34 IST
Last Updated 27 ಜುಲೈ 2025, 0:34 IST
ನಗರದ ಹೆಬ್ಬಾಳ ಮೇಲ್ಸೇತುವೆ ಬಳಿ ಲೂಪ್‌ (ಪಥ) ನಿರ್ಮಾಣ ಕಾಮಗಾರಿ‌ ನಡೆಯುತ್ತಿದೆ -  ಪ್ರಜಾವಾಣಿ ಚಿತ್ರ
ನಗರದ ಹೆಬ್ಬಾಳ ಮೇಲ್ಸೇತುವೆ ಬಳಿ ಲೂಪ್‌ (ಪಥ) ನಿರ್ಮಾಣ ಕಾಮಗಾರಿ‌ ನಡೆಯುತ್ತಿದೆ -  ಪ್ರಜಾವಾಣಿ ಚಿತ್ರ   

ಬೆಂಗಳೂರು: ಹೆಬ್ಬಾಳ ಮೇಲ್ಸೇತುವೆ ಬಳಿ ವಾಹನ ದಟ್ಟಣೆ ಕಡಿಮೆ ಮಾಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವತಿಯಿಂದ ನಡೆಯುತ್ತಿರುವ ಲೂಪ್‌ (ಪಥ) ನಿರ್ಮಾಣ ಕಾಮಗಾರಿ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ. ಈ ನಡುವೆ ಹೊಸ ಮೇಲ್ಸೇತುವೆಯ ನಿರ್ಮಾಣಕ್ಕೆ ಪ್ರಾಧಿಕಾರ ಮುಂದಾಗಿದೆ.

ನಾಗವಾರ ಕಡೆಯಿಂದ ಮೇಲ್ಸೇತುವೆ ನಿರ್ಮಿಸಲು ಉದ್ದೇಶಿಸಿದ್ದು, ಇದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಹೋಗುವ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸಲಿದೆ. ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರಿಸಲು ಪ್ರಾಧಿಕಾರದ ಆಡಳಿತ ಮಂಡಳಿ ಅನುಮೋದನೆ ನೀಡಿದೆ ಎಂದು ಬಿಡಿಎ ಮೂಲಗಳು ತಿಳಿಸಿವೆ.

ಹೆಬ್ಬಾಳ ಜಂಕ್ಷನ್‍ನಲ್ಲಿ ಸಂಚಾರ ದಟ್ಟಣೆ ನಿವಾರಣೆಗಾಗಿ ಪ್ರಾಧಿಕಾರವು 2019ರಲ್ಲಿ ಮೇಲ್ಸೇತುವೆ ಯೋಜನೆ ರೂಪಿಸಿತ್ತು. ₹25 ಕೋಟಿ ವೆಚ್ಚದಲ್ಲಿ 11 ಬೃಹತ್ ಕಂಬಗಳನ್ನು ನಿರ್ಮಿಸಿತ್ತು. ಆದರೆ, ಯೋಜಿತ ರ್‍ಯಾಂಪ್ ಜೋಡಣೆಯು ಭವಿಷ್ಯದ ಮೆಟ್ರೊ ಮಾರ್ಗಗಳಿಗೆ ಅಡ್ಡಿಪಡಿಸುತ್ತದೆ ಎಂಬ ಕಾರಣಕ್ಕೆ ಬೆಂಗಳೂರು ಮೆಟ್ರೊ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಆಕ್ಷೇಪ ವ್ಯಕ್ತಪಡಿಸಿತ್ತು. ಹಾಗಾಗಿ ಆ ಯೋಜನೆಯನ್ನು ಕೈಬಿಡಲಾಗಿತ್ತು.

ADVERTISEMENT

ಜಂಕ್ಷನ್ ಬಳಿಯ ಟ್ರೀ ಪಾರ್ಕ್‌ನಲ್ಲಿ ನಿರ್ಮಿಸಿದ್ದ ಸಿಮೆಂಟ್ ಕಂಬಗಳು ಹಾಗೆ ಉಳಿದುಕೊಂಡಿವೆ. ಈಗ ಬಿಎಂಆರ್‌ಸಿಎಲ್‌ ಆಕ್ಷೇಪಣೆ ಇಲ್ಲದ್ದರಿಂದ ಹೊಸ ಮೇಲ್ಸೇತುವೆ ಯೋಜನೆಗೆ ಅನುಮತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹೊಸ ಮೇಲ್ಸೇತುವೆ ಒಂದು ಕಿ. ಮೀ.ಗಿಂತ ಹೆಚ್ಚು ಉದ್ದವಿರುವ ಸಾಧ್ಯತೆಯಿಲ್ಲ. ನಾಗವಾರದಿಂದ ತುಮಕೂರು ರಸ್ತೆ, ಮೇಖ್ರಿ ವೃತ್ತ, ಬಿಇಎಲ್ ವೃತ್ತ ಮತ್ತು ಕೆಐಎ ಕಡೆಗೆ ಸಂಚಾರ ದಟ್ಟಣೆ ತಪ್ಪಿಸಲು ಇದರಿಂದ ಅನುಕೂಲವಾಗಲಿದೆ. ಈ ಯೋಜನೆಯ ವೆಚ್ಚ ಕಡಿಮೆ ಮಾಡಲು ಮತ್ತು ನಿರ್ಮಾಣದಿಂದ ಉಂಟಾಗುವ ಅಡಚಣೆಗಳನ್ನು ಕಡಿತಗೊಳಿಸಲು ಕಂಬಗಳನ್ನು ಮರುಬಳಕೆ ಮಾಡುವ ಕುರಿತು ಚಿಂತನೆ ನಡೆಸಿದ್ದು, ಈ ಕಂಬಗಳನ್ನು ಹೊಸ ಮೇಲ್ಸೇತುವೆ ವಿನ್ಯಾಸದಲ್ಲಿ ಸುರಕ್ಷಿತವಾಗಿ ಸಂಯೋಜಿಸಬಹುದೇ ಎಂಬುದರ ಬಗ್ಗೆಯೂ ಚರ್ಚೆ ನಡೆಸಲಾಗಿದೆ.

‘ನಾಗವಾರ ಕಡೆಯಿಂದ ಬರುವ ವಾಹನಗಳ ಸಂಚಾರಕ್ಕೆ ಪ್ರತ್ಯೇಕ ರ್‍ಯಾಂಪ್ ಇಲ್ಲದಿರುವುದರಿಂದ ವಾಹನ ಸವಾರರಿಗೆ ತೀವ್ರ ಸಮಸ್ಯೆಯಾಗಿದೆ. ಹೆಬ್ಬಾಳ ಮೇಲ್ಸೇತುವೆಗೆ ನೇರ ಪ್ರವೇಶವಿಲ್ಲದ ಕಾರಣ ಪ್ರಯಾಣಿಕರು ಕೆಂಪಾಪುರ ವೃತ್ತದ ಮೂಲಕ ಎಸ್ಟೀಮ್ ಮಾಲ್ ಬಳಿಯ ಸರ್ವಿಸ್ ರಸ್ತೆಯನ್ನು ಬಳಸಿ ಮುಖ್ಯ ಮೇಲ್ಸೇತುವೆಗೆ ತಲುಪಬೇಕಾಗುತ್ತದೆ. ಇದು ಸಂಚಾರ ದಟ್ಟಣೆಗೆ ಪ್ರಮುಖ ಕಾರಣವಾಗಿದೆ. ಹೆಬ್ಬಾಳ ಕೆರೆಯ ಪಕ್ಕದ ಲ್ಲಿರುವ ರಸ್ತೆಗಳ ವಿಸ್ತರಣೆ ಕಾರ್ಯವನ್ನು ಎನ್‌ಎಚ್‌ಎಐ ಕೈಗೆತ್ತಿಕೊಂಡಿದೆ. ಮೇಲ್ಸೇತುವೆ ನಿರ್ಮಾಣದ ಸಮಯ ಮತ್ತಿತರ ವಿಷಯಗಳು ಅಂತಿಮಗೊಳ್ಳಬೇಕಿದೆ’ ಪ್ರಾಧಿಕಾರಿಯೊಬ್ಬರು ತಿಳಿಸಿದರು.

‘ಈ ಯೋಜನೆಯ ಸಾಧಕ–ಬಾಧಕ ಕುರಿತು ಬಿಡಿಎ, ಬಿಬಿಎಂಪಿ ಆಯುಕ್ತರು, ಮುಖ್ಯ ಎಂಜಿನಿಯರ್‌ಗಳು ಮತ್ತು ತಜ್ಞರು ಸುದೀರ್ಘ ಚರ್ಚೆ ನಡೆಸಿದ್ದಾರೆ. ತಜ್ಞರು ಕೆಲವು ಸಲಹೆಗಳನ್ನು ನೀಡಿದ್ದಾರೆ. ಹೊಸ ಮೇಲ್ಸೇತುವೆ ನಿರ್ಮಾಣಗೊಂಡರೆ ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ತಗ್ಗಿಸಲು ಅನುಕೂಲವಾಗಬಹುದು ಎಂದು ಅಂದಾಜಿಸಲಾಗಿದೆ. ಇದು ಯೋಜನೆಯ ಆರಂಭಿಕ ಹಂತವಾಗಿದೆ’ ಎಂದು ಹೇಳಿದರು.

ನಾಗವಾರ ಕಡೆಯಿಂದ ಮೇಲ್ಸೇತುವೆ ನಿರ್ಮಾಣ ಯೋಜನೆಯ ಸಾಧಕ–ಬಾಧಕ ಕುರಿತು ಚರ್ಚೆ ತಜ್ಞರ ಸಲಹೆ ಪಡೆದು ಅನುಷ್ಠಾನಕ್ಕೆ ನಿರ್ಧಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.