ADVERTISEMENT

ಬೆಂಗಳೂರು | ಹೊಸ ವರ್ಷ ಸ್ವಾಗತಕ್ಕೆ ವಿದ್ಯುದ್ದೀಪಾಲಂಕಾರ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2022, 20:10 IST
Last Updated 30 ಡಿಸೆಂಬರ್ 2022, 20:10 IST
ಹೊಸ ವರ್ಷಾಚರಣೆ ಪ್ರಯುಕ್ತ ನಗರದ ಬ್ರಿಗೇಡ್ ರಸ್ತೆಯಲ್ಲಿ ವಿಶೇಷ ವಿದ್ಯುತ್ ಅಲಂಕಾರ ಮಾಡಲಾಗಿದೆ – ಪ್ರಜಾವಾಣಿ ಚಿತ್ರ
ಹೊಸ ವರ್ಷಾಚರಣೆ ಪ್ರಯುಕ್ತ ನಗರದ ಬ್ರಿಗೇಡ್ ರಸ್ತೆಯಲ್ಲಿ ವಿಶೇಷ ವಿದ್ಯುತ್ ಅಲಂಕಾರ ಮಾಡಲಾಗಿದೆ – ಪ್ರಜಾವಾಣಿ ಚಿತ್ರ   

ಬೆಂಗಳೂರು: 2022ನೇ ವರ್ಷಕ್ಕೆ ವಿದಾಯ ಹೇಳಿ, 2023 ಹೊಸ ವರ್ಷವನ್ನು ಬರಮಾಡಿಕೊಳ್ಳಲು ನಗರ ಸಜ್ಜಾಗಿದೆ. ಪ್ರಮುಖ ರಸ್ತೆಗಳು, ಸಾರ್ವಜನಿಕ ಸ್ಥಳಗಳು, ಕ್ಲಬ್, ಹೋಟೆಲ್, ಪಬ್‌ಗಳು ವಿದ್ಯುತ್ ಅಲಂಕೃತಗೊಂಡು ಕಂಗೊಳಿಸುತ್ತಿವೆ.

ಕೋವಿಡ್ ಕಾರಣದಿಂದ ಎರಡು ವರ್ಷ ಹೊಸ ವರ್ಷಾಚರಣೆಗೆ ನಿರ್ಬಂಧ ವಿಧಿಸಲಾಗಿತ್ತು. ಈ ವರ್ಷ ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆಗೆ ಅವಕಾಶ ನೀಡಲಾಗಿದ್ದು, ತಮ್ಮಿಷ್ಟದ ರೀತಿಯಲ್ಲಿ ಹೊಸ ವರ್ಷವನ್ನು ಸ್ವಾಗತಿಸಲು ಜನರು ಸಿದ್ಧರಾಗಿದ್ದಾರೆ.

ಹೆಚ್ಚು ಜನರು ಸೇರುವ ಬ್ರಿಗೇಡ್ ರಸ್ತೆ, ಎಂ.ಜಿ.ರಸ್ತೆ, ಚರ್ಚ್‌ ಸ್ಟ್ರೀಟ್, ಕೋರಮಂಗಲ, ಇಂದಿರಾನಗರ, ವೈಟ್‌ಫೀಲ್ಡ್ ಪ್ರದೇಶಗಳಲ್ಲಿ ಸಿದ್ಧತೆ ಜೋರಾಗಿದೆ. ವ್ಯಾಪಾರ ಮಳಿಗೆಗಳು, ಹೋಟೆಲ್‌, ಪಬ್‌ಗಳಿಗೆ ವಿಶೇಷ ವಿದ್ಯುತ್ ಅಲಂಕಾರ ಮಾಡಲಾಗಿದೆ.

ADVERTISEMENT

ಗ್ರಾಹಕರನ್ನು ಸೆಳೆಯಲು ವಿಶೇಷ ರಿಯಾಯಿತಿ ಜೊತೆಯಲ್ಲಿ ಸಂಗೀತ, ನೃತ್ಯ ಹಾಗೂ ಇತರೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಮುಂಗಡ ಟಿಕೆಟ್ ಮಾರಾಟ ನಡೆಯುತ್ತಿದೆ.

ಹೊಸ ವರ್ಷಾಚರಣೆ ಮುನ್ನಾದಿನವಾದ ಶುಕ್ರವಾರ ರಾತ್ರಿಯೂ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆಗಳಲ್ಲಿ ಹೆಚ್ಚು ಜನಸಂದಣಿ ಕಂಡುಬಂತು.

ಭದ್ರತೆ ಪರಿಶೀಲನೆ: ಸಾರ್ವಜನಿಕರು ಹೆಚ್ಚು ಸೇರುವ ಸ್ಥಳಗಳಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದು, ಅಲ್ಲೆಲ್ಲ ನಿರಂತರವಾಗಿ ಗಸ್ತು ತಿರುಗುತ್ತಿದ್ದಾರೆ.

ಶುಕ್ರವಾರ ಬೆಳಿಗ್ಗೆಯಿಂದ ರಾತ್ರಿಯವರೆಗೂ ಶ್ವಾನದಳ ಹಾಗೂ ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿ ಪರಿಶೀಲನೆ ನಡೆಸಿದರು. ನಗರದೆಲ್ಲೆಡೆ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಅವುಗಳ ನಿರ್ವಹಣೆ ಪರೀಕ್ಷಿಸಿದರು.

ಮೇಲ್ಸೇತುವೆಗಳಿಗೆ ಸಿಬ್ಬಂದಿ ಕಾವಲು: ‘ಹೊಸ ವರ್ಷಾಚರಣೆ ವೇಳೆ ಅಪಘಾತಗಳನ್ನು ತಡೆಯುವ ಉದ್ದೇಶದಿಂದ ನಗರದ ಎಲ್ಲ ಮೇಲ್ಸೇತುವೆಗಳಲ್ಲಿ ಡಿ. 31ರಂದು ರಾತ್ರಿ 9 ಗಂಟೆಯಿಂದ ಜ. 1ರ ಬೆಳಿಗ್ಗೆ 6 ಗಂಟೆಯವರೆಗೆ ಎಲ್ಲ ಬಗೆಯ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಪ್ರತಿಯೊಂದು ಸೇತುವೆ ಬಳಿಯೂ ಬ್ಯಾರಿಕೇಡ್‌ಗಳನ್ನು ನಿಲ್ಲಿಸಿ ಸಿಬ್ಬಂದಿ ಕಾವಲು ಕಾಯಲಿದ್ದಾರೆ’ ಎಂದು ವಿಶೇಷ ಕಮಿಷನರ್ (ಸಂಚಾರ) ಎಂ.ಎ. ಸಲೀಂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.