ADVERTISEMENT

ಹೊಸ ವರ್ಷಾಚರಣೆ: ಪಬ್‌ನಲ್ಲಿ ಗಲಾಟೆ, ದುರ್ವತನೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 20:31 IST
Last Updated 1 ಜನವರಿ 2026, 20:31 IST
   

ಬೆಂಗಳೂರು: ನಗರದಲ್ಲಿ ಬುಧವಾರ ರಾತ್ರಿ ಹೊಸ ವರ್ಷಾಚರಣೆ ಸಂಭ್ರಮದ ವೇಳೆ ಸಣ್ಣಪುಟ್ಟ ಗಲಾಟೆ, ಪೊಲೀಸರ ಜತೆಗೆ ವಾಗ್ವಾದ, ಅಲ್ಲಲ್ಲಿ ತಳ್ಳಾಟದಂತಹ ಘಟನೆಗಳು ನಡೆದಿವೆ. 

ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ, ಯುವಕರ ಗುಂಪು ಚದುರಿಸಿದರು. ಸಣ್ಣಪುಟ್ಟ ಅವಾಂತರ ಹೊರತುಪಡಿಸಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಪೊಲೀಸರು ಹೇಳಿದರು.

ಚರ್ಚ್‌ಸ್ಟ್ರೀಟ್‌ನ ಪಬ್‌ವೊಂದರಲ್ಲಿ ಮಹಿಳಾ ಸಿಬ್ಬಂದಿ ಜೊತೆಗೆ ಯುವಕರು ಗಲಾಟೆ ಮಾಡಿದ್ದರು. ಮದ್ಯ ಸೇವಿಸಿ ಬಂದಿದ್ದ ಯುವಕರು, ಅನುಚಿತ ವರ್ತನೆ ತೋರಿದ್ದರು. ಪಬ್‌ನ ಇತರೆ ಸಿಬ್ಬಂದಿ, ಯುವಕರನ್ನು ಹೊರಕ್ಕೆ ಕಳುಹಿಸಿದರು.

ADVERTISEMENT

ಮಹಾತ್ಮ ಗಾಂಧಿ ರಸ್ತೆ, ಬ್ರಿಗೇಡ್‌ ರಸ್ತೆ, ಚರ್ಚ್‌ಸ್ಟ್ರೀಟ್ ಹಾಗೂ ಕೋರಮಂಗಲದಲ್ಲಿ ಸಣ್ಣಪುಟ್ಟ ಗಲಾಟೆಗಳು ನಡೆದಿವೆ. ಹಲಸೂರು ಗೇಟ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಕ್ಯಾಬ್‌ ಚಾಲಕನ ಶರ್ಟ್ ಬಿಚ್ಚಿಸಿ ಹಲ್ಲೆ ನಡೆಸಲಾಗಿತ್ತು. 

ಸಂಭ್ರಮದ ವೇಳೆ ಮದ್ಯದ ಅಮಲಿನಲ್ಲಿ ತೂರಾಡುತ್ತಿದ್ದ ಯುವಕರು, ಯುವತಿಯರನ್ನು ಪೊಲೀಸರೇ ಕ್ಯಾಬ್‌ ಮತ್ತು ಆಟೊಗಳ ಬಳಿ ಕರೆದೊಯ್ದು ಮನೆಗೆ ಕಳುಹಿಸಿದ್ದು ಕಂಡುಬಂತು. 

ಎಲ್ಲೆಲ್ಲಿ ಏನಾಯಿತು...?

* ಎಂ.ಜಿ. ರಸ್ತೆಯಲ್ಲಿ ಯುವತಿಯ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಯುವಕನ ಮೇಲೆ ಹಲ್ಲೆ ನಡೆಸಲಾಗಿತ್ತು. ಸಂಭ್ರಮ ಮುಗಿಸಿ ಮನೆಗೆ ತೆರಳುವಾಗ ಯುವತಿಯನ್ನು ಕೆಲವು ಯುವಕರು ರೇಗಿಸಿದ್ದರು. ಅದನ್ನು ಪ್ರಶ್ನಿಸಿದ ಯುವತಿಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ್ದರು. ಮಾಹಿತಿ ಬಂದ ಕೂಡಲೇ ಗಾಯಾಳು ಯುವಕನಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಪೊಲೀಸರು, ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.

* ಒಪೇರಾ ಜಂಕ್ಷನ್‌ ಬಳಿ ಬಂದಿದ್ದ ವ್ಯಕ್ತಿಯೊಬ್ಬ ಮದ್ಯದ ಅಮಲಿನಲ್ಲಿ ಪೊಲೀಸರಿಗೆ ನಿಂದನೆ ಮಾಡಿದ್ದ. ಮದ್ಯಪಾನ ಮಾಡಿ ಕಿರಿಕಿರಿ ಉಂಟು ಮಾಡುತ್ತಿದ್ದ ವ್ಯಕ್ತಿಗೆ ಪೊಲೀಸರು ಕಪಾಳಮೋಕ್ಷ ಮಾಡಿ ಬುದ್ಧಿ ಹೇಳಿ ಕಳುಹಿಸಿದ್ದರು.

* ಮಲ್ಲತ್ತಹಳ್ಳಿಯ ರೆಸ್ಟೊರೆಂಟ್‌ವೊಂದರಲ್ಲಿ ಮದ್ಯದ ಮತ್ತಿನಲ್ಲಿ ಕೆಲವು ಯುವಕರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಮಧ್ಯ ಪ್ರವೇಶಿಸಿದ ಬೌನ್ಸರ್‌ಗಳು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದರು.

* ನಾಗರಬಾವಿಯ ಪಬ್‌ವೊಂದರ ಮುಂದೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು.

* ಒಪೇರಾ ರಸ್ತೆಯಲ್ಲಿ ಕುಡಿದ ಮತ್ತಿನಲ್ಲಿ ಗೆಳೆಯನ ಮೇಲೆ ಯುವತಿ ಹಲ್ಲೆ ಮಾಡಿದ್ದಳು. ಮದ್ಯದ ನಶೆಯಲ್ಲಿದ್ದ ಜೋಡಿಯನ್ನು ಸಮಾಧಾನಪಡಿಸಲು ಪೊಲೀಸರು ಹರಸಹಾಸಪಟ್ಟರು.

* ಬ್ರಿಗೇಡ್ ರಸ್ತೆಯಲ್ಲಿ ಪಟಾಕಿ ಸಿಡಿಸಿದ ಯುವಕರತ್ತ ಪೊಲೀಸರು ಲಾಠಿ ಬೀಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.