ಸಾಂದರ್ಭಿಕ ಚಿತ್ರ
ಬೆಂಗಳೂರು: ಹೊಸ ವರ್ಷಾಚರಣೆ ಸಂದರ್ಭದಲ್ಲಿ ನಗರದ ಎಂ.ಜಿ. ರಸ್ತೆ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ 15 ಟನ್ ತ್ಯಾಜ್ಯವನ್ನು ಬಿಬಿಎಂಪಿ ಸಿಬ್ಬಂದಿ ಸಂಗ್ರಹಿಸಿ, ವಿಲೇವಾರಿ ಮಾಡಿದ್ದಾರೆ.
ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ (ಬಿಎಸ್‌ಡಬ್ಲ್ಯುಎಂಎಲ್) ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ, ನಗರದ ಸಿಬಿಡಿ ರಸ್ತೆಗಳಲ್ಲಿ ಬಿದ್ದಿದ್ದ ತ್ಯಾಜ್ಯವನ್ನು ತೆರವುಗೊಳಿಸಿದ್ದಾರೆ.
ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ರೆಸಿಡೆನ್ಸಿ ರಸ್ತೆ, ರಿಚ್ಮಂಡ್ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಕಸ್ತೂರ ಬಾ ರಸ್ತೆಗಳಲ್ಲಿ ಬುಧವಾರ ಮುಂಜಾನೆ 3ರಿಂದ ಬೆಳಿಗ್ಗೆ 7ರವರೆಗೆ ಸ್ವಚ್ಛತಾ ಕಾರ್ಯ ನಡೆಸಲಾಯಿತು. 15 ಟನ್ ತ್ಯಾಜ್ಯವನ್ನು ಬೀದಿಗಳಿಂದ ತೆರವುಗೊಳಿಸಲಾಗಿದೆ ಎಂದು ಬಿಎಸ್‌ಡಬ್ಲ್ಯುಎಂಎಲ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಬಸವರಾಜ್ ಕಬಾಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಾಂತಿನಗರ ಘನತ್ಯಾಜ್ಯ ವಿಭಾಗದಿಂದ ಸ್ವಚ್ಛತಾ ಕಾರ್ಯ ಮಾಡಲಾಗಿದ್ದು, 25 ಆಟೋ ಟಿಪ್ಪರ್‌ಗಳು, ಮೂರು ಕಾಂಪ್ಯಾಕ್ಟರ್‌ಗಳೊಂದಿಗೆ 70ಕ್ಕೂ ಹೆಚ್ಚು ಪೌರಕಾರ್ಮಿಕರು, ಕಿರಿಯ ಆರೋಗ್ಯ ಅಧಿಕಾರಿಗಳು, ಮಾರ್ಷಲ್‌ಗಳು ಕಾರ್ಯನಿರ್ವಹಿಸಿದರು.
ಸಿಬಿಡಿ ರಸ್ತೆಗಳು ಹಾಗೂ ಪಾದಚಾರಿ ಮಾರ್ಗಗಳಲ್ಲಿದ್ದ ಪ್ಲಾಸ್ಟಿಕ್ ಚೀಲಗಳು, ಪ್ಲಾಸ್ಟಿಕ್ ತ್ಯಾಜ್ಯ, ಚಪ್ಪಲಿಗಳು, ಮದ್ಯದ ಬಾಟಲಿಗಳು ಸೇರಿದಂತೆ ಅನುಪಯುಕ್ತ ವಸ್ತುಗಳನ್ನು ಬೇರ್ಪಡಿಸಿ ಸಂಗ್ರಹಿಸಲಾಗಿದೆ. ಪುನರ್ ಬಳಕೆಯ ಸುಮಾರು ಮೂರು ಟನ್ ತ್ಯಾಜ್ಯವನ್ನು ಒಣ ತ್ಯಾಜ್ಯ ಸಂಗ್ರಹಣಾ ಘಟಕಕ್ಕೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಎಂ.ಜಿ. ರಸ್ತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಸ್ವಚ್ಛತೆಯನ್ನು ಸ್ಥಳೀಯರಾದ ಸುಮಾರು 25 ವಾಯುವಿಹಾರಿಗಳು ಖಾತರಿಪಡಿಸಿದ್ದಾರೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.