ADVERTISEMENT

ಹೊಸ ವರ್ಷಾಚರಣೆಗೆ ರಾತ್ರಿ 1ರವರೆಗೆ ಅವಕಾಶ: ಮೇಲ್ಸೇತುವೆಗಳಲ್ಲಿ ಸಂಚಾರ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2024, 15:23 IST
Last Updated 28 ಡಿಸೆಂಬರ್ 2024, 15:23 IST
<div class="paragraphs"><p>ಪೊಲೀಸ್ ಕಮಿಷನರ್ ಬಿ.ದಯಾನಂದ </p></div>

ಪೊಲೀಸ್ ಕಮಿಷನರ್ ಬಿ.ದಯಾನಂದ

   

ಬೆಂಗಳೂರು: ಹೊಸ ವರ್ಷಾಚರಣೆ ವೇಳೆ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಡಿಸೆಂಬರ್ 31ರ ರಾತ್ರಿ 1ರ ವರೆಗೆ ಸಾರ್ವತ್ರಿಕವಾಗಿ ಹೊಸ ವರ್ಷಾಚರಿಸಲು ಅನುಮತಿಯಿದೆ ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ತಿಳಿಸಿದರು.

ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ, ಇಂದಿರಾನಗರದ 100 ಅಡಿ ರಸ್ತೆ ಮತ್ತಿತರ ಕಡೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಲಿರುವ ಕಾರಣ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ನಗರದ ಹಲವೆಡೆ ಸಂಚಾರ ವ್ಯವಸ್ಥೆಯಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ADVERTISEMENT

ಬಿಬಿಎಂಪಿ, ನಮ್ಮ ಮೆಟ್ರೊ ಮತ್ತು ಇತರ ಸಂಸ್ಥೆಗಳೊಂದಿಗೆ ಸಭೆ ನಡೆಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಓಲಾ ಮತ್ತು ಉಬರ್‌ನ ಪ್ರತಿನಿಧಿಗಳೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಿ, ಪಿಕಪ್ ಸ್ಥಳಗಳನ್ನು ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರಿಂದ ಹೆಚ್ಚು ಹಣ ಕೇಳಿದರೆ ಸಂಬಂಧಪಟ್ಟ ಪೊಲೀಸರಿಗೆ ದೂರು ನೀಡಬಹುದು. ಯಾವುದೇ ರೀತಿಯ ಮುಖವಾಡ ಧರಿಸಬಾರದು ಎಂದು ಮನವಿ ಸಾರ್ವಜನಿಕರಿಗೆ ಮನವಿ ಮಾಡಿದರು.

ಅಪಘಾತಗಳು ಸೇರಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಡಿಸೆಂಬರ್ 31 ರಂದು ರಾತ್ರಿ 11 ರಿಂದ ಜನವರಿ 1ರ ಬೆಳಿಗ್ಗೆ 6 ರವರೆಗೆ ನಗರದ ಎಲ್ಲಾ ಮೇಲ್ಸೇತುವೆಗಳಲ್ಲಿ (ಕೆಐಎ ವಿಮಾನ ನಿಲ್ದಾಣಕ್ಕೆ ಹೋಗುವ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇ ಹೊರತುಪಡಿಸಿ) ಎಲ್ಲಾ ರೀತಿಯ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ವಿಮಾನ ನಿಲ್ದಾಣದ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇಯಲ್ಲಿ, ದ್ವಿಚಕ್ರ ವಾಹನಗಳ ಸಂಚಾರವನ್ನು ಡಿಸೆಂಬರ್ 31ರ ರಾತ್ರಿ 10 ರಿಂದ ಜನವರಿ 1ರ ಬೆಳಿಗ್ಗೆ 6 ಗಂಟೆಯವರೆಗೂ ನಿರ್ಬಂಧಿಸಲಾಗಿದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಎಂ.ಎನ್.ಅನುಚೇತ್ ತಿಳಿಸಿದರು.

ಮದ್ಯ, ಮಾದಕ ದ್ರವ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡುವವರ ಪತ್ತೆಗೆ ಹಲವೆಡೆ ತಪಾಸಣೆ ಘಟಕ ತೆರೆಯಲಾಗಿದೆ. ಅತಿವೇಗ ಮತ್ತು ಆಜಾಗರೂಕತೆಯಿಂದ ವಾಹನ ಚಾಲನೆ ಮಾಡುವ ಹಾಗೂ ವ್ಹೀಲಿ ಮಾಡುವ ದ್ವಿಚಕ್ರ ವಾಹನ ಸವಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಂಚಾರ ವಿಭಾಗದ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ನೋ-ಪಾರ್ಕಿಂಗ್ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸಿದ್ದಲ್ಲಿ ಅಂತಹವುಗಳನ್ನು ಟೋಯಿಂಗ್ ಮಾಡಲಾಗುವುದು. ಸಾರ್ವಜನಿಕರು ತಮ್ಮ ಸ್ವಂತ ವಾಹನಗಳನ್ನು ಬಳಸದೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಾದ ನಮ್ಮ ಮೆಟ್ರೊ, ಬಿಎಂಟಿಸಿ, ಕೆಎಸ್ಆರ್​ಟಿಸಿ, ಆಟೊ ಅಥವಾ ಕ್ಯಾಬ್‌ಗಳನ್ನು ಬಳಸುವಂತೆ ಕೋರಲಾಗಿದೆ.

ವಾಹನ ಸಂಚಾರ ಮತ್ತು ಪಾರ್ಕಿಂಗ್‌ ನಿಷೇಧ

* ಡಿ.31 ರಾತ್ರಿ 8 ರಿಂದ ಜ.1ರ ಬೆಳಗಿನ ಜಾವ 2ರವರೆಗೆ ಈ ಕೆಳಕಂಡ ರಸ್ತೆಗಳಲ್ಲಿ ಪೊಲೀಸ್ ವಾಹನಗಳು ಹಾಗೂ ಕರ್ತವ್ಯ ನಿರತ ತುರ್ತು ಸೇವಾ ವಾಹನ ಹೊರತುಪಡಿಸಿ ಉಳಿದ ವಾಹನಗಳ ಪ್ರವೇಶ ನಿಷೇಧಿಸಲಾಗಿದೆ. ಇದೇ ದಿನದಂದು ಸಂಜೆ 4ರಿಂದ ಜ.1ರ ಬೆಳಿಗ್ಗೆ 3ರವರೆಗೆ ಇದೇ ಪ್ರದೇಶದಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

* ಎಂ.ಜಿ.ರಸ್ತೆ:  ಅನಿಲ್ ಕುಂಬ್ಳೆ ವೃತ್ತದಿಂದ ಮೆಯೊ ಹಾಲ್ ಬಳಿಯ ರೆಸಿಡೆನ್ಸಿ ರಸ್ತೆ ಜಂಕ್ಷನ್‌ವರೆಗೆ

* ಬ್ರಿಗೇಡ್ ರಸ್ತೆ: ಕಾವೇರಿ ಎಂಪೋರಿಯಂ ಜಂಕ್ಷನ್‌ನಿಂದ ಅಪೇರಾ ಜಂಕ್ಷನ್‌ವರೆಗೆ

* ಚರ್ಚ್ ಸ್ಟ್ರೀಟ್‌: ಬ್ರಿಗೇಡ್ ರಸ್ತೆ ಜಂಕ್ಷನ್‌ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್‌ವರೆಗೆ

* ಮ್ಯೂಸಿಯಂ ರಸ್ತೆ: ಎಂ.ಜಿ.ರಸ್ತೆ ಜಂಕ್ಷನ್‌ನಿಂದ ಹಳೇ ಮದ್ರಾಸ್ ಬ್ಯಾಂಕ್ ರಸ್ತೆ (ಎಸ್.ಬಿ.ಐ) ವೃತ್ತದ ವರೆಗೆ.

* ರೆಸ್ಟ್ ಹೌಸ್ ರಸ್ತೆ: ಮ್ಯೂಸಿಯಂ ರಸ್ತೆ ಜಂಕ್ಷನ್‌ನಿಂದ ಬ್ರಿಗೇಡ್ ರಸ್ತೆ ಜಂಕ್ಷನ್‌ವರೆಗೆ

* ರೆಸಿಡೆನ್ಸಿ ಕ್ರಾಸ್ ರಸ್ತೆ: ರೆಸಿಡೆನ್ಸಿ ರಸ್ತೆ ಜಂಕ್ಷನ್‌ನಿಂದ ಎಂ.ಜಿ ರಸ್ತೆ ಜಂಕ್ಷನ್‌ವರೆಗೆ (ಶಂಕರ್ ನಾಗ್ ಚಿತ್ರಮಂದಿರ) ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ

* ಡಿ.31 ರಂದು ರಾತ್ರಿ 8 ಗಂಟೆಯ ಬಳಿಕ ಎಂ.ಜಿ ರಸ್ತೆಯಲ್ಲಿ ಕ್ವೀನ್ಸ್ ವೃತ್ತದ ಕಡೆಯಿಂದ ಹಲಸೂರು ಹಾಗೂ ಮುಂದಕ್ಕೆ ಹೋಗುವ ಚಾಲಕರು ಅನಿಲ್ ಕುಂಬ್ಳೆ ವೃತ್ತದಲ್ಲಿ ಎಡ ತಿರುವು ಪಡೆದು ಸೆಂಟ್ರಲ್ ಸ್ಟ್ರೀಟ್‌ನಲ್ಲಿ ಸಾಗಿ ಬಿ.ಆರ್.ವಿ ಜಂಕ್ಷನ್‌ನಲ್ಲಿ ಬಲ ತಿರುವು ತೆಗೆದುಕೊಂಡು ಕಬ್ಬನ್ ರಸ್ತೆ ಮೂಲಕ ಸಂಚರಿಸಿ ವೆಬ್ ಜಂಕ್ಷನ್ ಬಳಿ ಎಂ.ಜಿ ರಸ್ತೆ ಸೇರಿ ಮುಂದೆ ಸಾಗಬಹುದು.

* ಹಲಸೂರು ಕಡೆಯಿಂದ ಕಂಟೊನ್ಮೆಂಟ್ ಕಡೆಗೆ ಸಾಗುವ ವಾಹನಗಳು ಟ್ರಿನಿಟಿ ವೃತ್ತದಲ್ಲಿ ಬಲ ತಿರುವು ಪಡೆದುಕೊಂಡು ಹಲಸೂರು ರಸ್ತೆ ಡಿಕನ್ಸನ್‌ ರಸ್ತೆ ಮಾರ್ಗವಾಗಿ ಸಂಚರಿಸಿ ಕಬ್ಬನ್ ರಸ್ತೆ ಸೇರಿ ಮುಂದೆ ಸಾಗುವುದು. ಕಾಮರಾಜ್ ರಸ್ತೆಯಲ್ಲಿ ಕಬ್ಬನ್ ರಸ್ತೆ ಜಂಕ್ಷನ್‌ನಿಂದ ಕಮರ್ಷಿಯಲ್ ಸ್ಟ್ರೀಟ್ ಜಂಕ್ಷನ್‌ವರೆಗೆ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

* ಈಜಿಪುರ ಕಡೆಯಿಂದ ಬರುವ ವಾಹನಗಳು ಇಂಡಿಯಾ ಗ್ಯಾರೇಜ್ ಬಳಿ ಬಲತಿರುವು ಪಡೆದು ಎ.ಎಸ್.ಸಿ. ಸೆಂಟರ್‌ನಲ್ಲಿ ಎಡತಿರುವು ಪಡೆದು ಟ್ರಿನಿಟಿ ಮೂಲಕ ಮುಂದೆ ಸಾಗುವುದು. ಎಚ್.ಎ.ಎಲ್. ಕಡೆಯಿಂದ ಬರುವ ವಾಹನಗಳು ಎ.ಎಸ್.ಸಿ ಸೆಂಟರ್‌ನಲ್ಲಿ ಬಲತಿರುವು ಪಡೆದು ಟ್ರಿನಿಟಿ ಮೂಲಕ ತೆರಳಬಹುದು.

* ಎಂ.ಜಿ ರಸ್ತೆ ಬ್ರಿಗೇಡ್ ರಸ್ತೆ ರೆಸ್ಟ್ ಹೌಸ್ ರಸ್ತೆ ಚರ್ಚ್ ಸ್ಟ್ರೀಟ್ ರೆಸಿಡೆನ್ಸಿ ರಸ್ತೆ ಸೆಂಟ್ ಮಾರ್ಕ್ಸ್ ರಸ್ತೆಗಳಲ್ಲಿ ನಿಲ್ಲಿಸಿದಂತಹ ವಾಹನಗಳ ಚಾಲಕರು ಮಾಲೀಕರು ತಮ್ಮ ವಾಹನಗಳನ್ನು ಡಿ.31 ರಂದು ಸಂಜೆ 4 ಗಂಟೆಯೊಳಗೆ ತೆರುವುಗೊಳಿಸದಿದ್ದರೆ ದಂಡ ವಿಧಿಸಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಪಾರ್ಕಿಂಗ್ ವ್ಯವಸ್ಥೆ: ಶಿವಾಜಿನಗರ ಬಿ.ಎಂ.ಟಿ.ಸಿ ಶಾಪಿಂಗ್ ಕಾಂಪ್ಲೆಕ್ಸ್‌ನ 1ನೇ ಮಹಡಿ ಯು.ಬಿ. ಸಿಟಿ ಗರುಡಾ ಮಾಲ್ ಕಬ್ಬನ್‌ಪಾರ್ಕ್‌(ಬಾಲಭವನ) ಪಾರ್ಕಿಂಗ್ ನಿರ್ಬಂಧ

* ಇಂದಿರಾ ನಗರ: ಇಂದಿರಾನಗರ 100 ಅಡಿ ರಸ್ತೆಯ ಹಳೆ ಮದ್ರಾಸ್ ರಸ್ತೆ ಜಂಕ್ಷನ್‌ನಿಂದ ದೊಮ್ಮಲೂರು ಮೇಲ್ಸೇತುವೆ ಜಂಕ್ಷನ್‌ವರೆಗೆ ಹಾಗೂ ಇಂದಿರಾನಗರ 12ನೇ ಮುಖ್ಯ ರಸ್ತೆಯ 80 ಅಡಿ ರಸ್ತೆಯಿಂದ ಇಂದಿರಾನಗರ ಡಬಲ್ ರೋಡ್ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಬದಿಯಲ್ಲಿ ವಾಹನ ನಿಲುಗಡೆ ನಿರ್ಬಂಧಿಸಲಾಗಿದೆ.

* ಮಹದೇವಪುರ: ಐ.ಟಿ.ಪಿ.ಎಲ್ ಮುಖ್ಯರಸ್ತೆ ಬಿ.ನಾರಾಯಣಪುರ ಶೆಲ್ ಪೆಟ್ರೊಲ್ ಬಂಕ್‌ನಿಂದ ಗರುಡಚಾ‌ರ್ ಪಾಳ್ಯ ಡೆಕತ್ಲಾನ್‌ವರೆಗೆ ಹೂಡಿ ಮೆಟ್ರೊ ಸ್ಟೇಷನ್‌ನಿಂದ ಗ್ರಾಫೈಟ್ ಇಂಡಿಯಾ ಜಂಕ್ಷನ್‌ವರೆಗೆ ಹಾಗೂ ಐ.ಟಿ.ಪಿ.ಎಲ್ ರಸ್ತೆ ಮೆಡಿಕವರ್ ಆಸ್ಪತ್ರೆಯಿಂದ ಬಿಗ್‌ಬಜಾರ್ ಜಂಕ್ಷನ್‌ರೆಗೂ ಎರಡೂ ಬದಿಯಲ್ಲಿ ವಾಹನ ನಿಲುಗಡೆ ಮಾಡುವಂತಿಲ್ಲ.

* ಕೋರಮಂಗಲ: ನ್ಯಾಷನಲ್ ಗೇಮ್ಸ್ ವಿಲೇಜ್‌ನಿಂದ ಯುಕೋ ಬ್ಯಾಂಕ್ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಬದಿಯಲ್ಲಿ ರಾತ್ರಿ 11 ರಿಂದ ಬೆಳಗಿನ ಜಾವ 2ರವರೆಗೆ ಎಲ್ಲಾ ಮಾದರಿಯ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಕೋರಮಂಗಲ ವೈ.ಡಿ ಮಠ ರಸ್ತೆಯಲ್ಲಿ ಸುಖಸಾಗರ ಜಂಕ್ಷನ್‌ನಿಂದ ಮೈಕ್ರೋಲ್ಯಾಂಡ್ ಜಂಕ್ಷನ್‌ವರೆಗೆ ಜೆ.ಎನ್.ಸಿ ರಸ್ತೆ 4ನೇ ಬಿ ಕ್ರಾಸ್ ರಸ್ತೆ ಟಾನಿಕ್ ಹಿಂಭಾಗದ ರಸ್ತೆ 17ನೇ ಎಚ್‌ ಮುಖ್ಯ ರಸ್ತೆಗಳಲ್ಲಿ ನಿರ್ಬಂಧ ಇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.