ADVERTISEMENT

ಹೊಸ ವರ್ಷ: ರಾತ್ರಿ 1.30ರವರೆಗೆ ಮೆಟ್ರೊ ಸೇವೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2018, 19:41 IST
Last Updated 27 ಡಿಸೆಂಬರ್ 2018, 19:41 IST
   

ಬೆಂಗಳೂರು: ಹೊಸ ವರ್ಷಾಚರಣೆಯ ಸಂಭ್ರಮದಲ್ಲಿ ಭಾಗಿಯಾಗುವವರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಇದೇ 31ರಂದು (ಸೋಮವಾರ) ರಾತ್ರಿ 1.30ರವರೆಗೂ ಮೆಟ್ರೊ ಸೇವೆ ಒದಗಿಸಲು ನಿಗಮವು ನಿರ್ಧರಿಸಿದೆ.

‘ಸೋಮವಾರ ರಾತ್ರಿ 11 ಗಂಟೆಯ ಬಳಿಕ 1.30ರವರೆಗೆ ಪ್ರತಿ 15 ನಿಮಿಷಗಳಿಗೊಂದು ಮೆಟ್ರೊ ಲಭ್ಯ ಇರುತ್ತದೆ. ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ಅಂದು ರಾತ್ರಿ 2 ಗಂಟೆಗೆ ಕೊನೆಯ ರೈಲುಗಳು ಹೊರಡಲಿವೆ’ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ ತಿಳಿಸಿದರು.

‘ವಿಸ್ತರಿಸಿದ ಅವಧಿಯಲ್ಲಿ ಅಂದು ಕಬ್ಬನ್‌ ಉದ್ಯಾನ ಮತ್ತು ಎಂ.ಜಿ.ರಸ್ತೆ ನಿಲ್ದಾಣಗಳಲ್ಲಿ ಟೋಕನ್‌ಗಳ ಬದಲು ₹ 50ರ ಟಿಕೆಟ್‌ (ಕಾಗದದ್ದು) ಮಾತ್ರ ನೀಡಲಾಗುತ್ತದೆ. ಈ ಕಾಗದದ ಟಿಕೆಟ್‌ ಖರೀದಿಸಿದವರು ಯಾವುದೇ ನಿಲ್ದಾಣಕ್ಕೂ ಪ್ರಯಾಣಿಸಬಹುದು. ಎಂ.ಜಿ.ರಸ್ತೆ ಹಾಗೂ ಕಬ್ಬನ್‌ ರಸ್ತೆಯಿಂದ ಪ್ರಯಾಣಿಸಲು ಯಾವುದೇ ನಿಲ್ದಾಣದಿಂದಲೂ ರಾತ್ರಿ 8ರ ಬಳಿಕ ಕಾಗದದ ಟಿಕೆಟ್‌ ಖರೀದಿಸಬಹುದು. ನಿಲ್ದಾಣಗಳಲ್ಲಿ ನೂಕುನುಗ್ಗಲು ತಪ್ಪಿಸಲು ಈ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದರು.

ADVERTISEMENT

‘ಸ್ಮಾರ್ಟ್‌ ಕಾರ್ಡ್‌ ಹೊಂದಿರುವ ಪ್ರಯಾಣಿಕರು ವಿಸ್ತರಿಸಿದ ಅವಧಿಯಲ್ಲೂ ಎಂದಿನಂತೆಯೇ ಪ್ರಯಾಣಿಸಬಹುದು. ಅವರಿಗೆ ಸಾಮಾನ್ಯ ದರವೇ ಅನ್ವಯವಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.