ಆಸ್ಪತ್ರೆ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹೆರಿಗೆಯಾದ ಶಿಶುಗಳ ಜನ್ಮಜಾತ ಸಮಸ್ಯೆಗಳ ಪತ್ತೆಗೆ ಸಂಬಂಧಿಸಿದಂತೆ ‘ಸಾರ್ವತ್ರಿಕ ನವಜಾತ ಶಿಶು ತಪಾಸಣೆ ಯೋಜನೆ’ ಅನುಷ್ಠಾನಕ್ಕೆ ಆರೋಗ್ಯ ಇಲಾಖೆ ಅನುಮೋದನೆ ನೀಡಿದೆ.
ಈ ಬಗ್ಗೆ ಇಲಾಖೆ ಆದೇಶ ಹೊರಡಿಸಿದ್ದು, ಪ್ರಾಯೋಗಿಕವಾಗಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತಪಾಸಣೆ ಆರಂಭಿಸಲು ಸೂಚಿಸಲಾಗಿದೆ.
ಸಾರ್ವಜನಿಕ ಆರೋಗ್ಯ ಸೌಲಭ್ಯಗಳಲ್ಲಿ ಹೆರಿಗೆಯಾಗುವ ಎಲ್ಲ ನವಜಾತ ಶಿಶುಗಳ ಜನ್ಮಜಾತ ‘ಹೈಪೋಥೈರಾಯ್ಡಿಸಮ್’, ‘ಅಡ್ರಿನಲ್ ಹೈಪರ್ಪ್ಲಾಸಿಯಾ’ (ಸಿಎಎಚ್), ‘ಗ್ಯಾಲಕ್ಟೋಸೆಮಿಯಾ’, ‘ಫಿನೈಲ್ಕೆಟೋನೂರಿಯಾ’ ಮತ್ತು ‘ಗ್ಲೂಕೋಸ್-6 ಫಾಸ್ಪೇಟ್ ಡಿಹೈಡ್ರೋಜಿನೇಸ್’ (ಜಿ6ಪಿಡಿ) ಕೊರತೆ ಮತ್ತು ಚಯಾಪಚಯ ಅಸ್ವಸ್ಥತೆಗಳ ಸಾರ್ವತ್ರಿಕ ತಪಾಸಣೆಗೆ ಈ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಾಯೋಗಕವಾಗಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ, 57,350 ನವಜಾತ ಶಿಶುಗಳ ತಪಾಸಣೆಗೆ ₹ 2.58 ಕೋಟಿಯನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಬಿಡುಗಡೆ ಮಾಡಲು ಸೂಚಿಸಲಾಗಿದೆ.
ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ (ಕೆಎಂಇಆರ್‌ಸಿ) ವ್ಯಾಪ್ತಿಗೆ ಒಳಪಡುವ ತುಮಕೂರು, ಬಳ್ಳಾರಿ, ಚಿತ್ರದುರ್ಗ ಮತ್ತು ವಿಜಯಪುರ ಜಿಲ್ಲೆಗಳ ತಾಲ್ಲೂಕುಗಳಲ್ಲಿ ತಪಾಸಣೆಗೆ ಸಂಬಂಧಿಸಿದಂತೆ, ಕೆಎಂಇಆರ್‌ಸಿ ಅಡಿ ₹ 2.79 ಕೋಟಿ ಒದಗಿಸುವಂತೆ ತಿಳಿಸಲಾಗಿದೆ.
ನವಜಾತ ಶಿಶುಗಳ ತಪಾಸಣೆಯ ಅನುಷ್ಠಾನ, ಮೇಲ್ವಿಚಾರಣೆ ಮತ್ತು ಗುಣಮಟ್ಟಕ್ಕಾಗಿ ಪರಿಣಾಮಕಾರಿ ಕಾರ್ಯವಿಧಾನಗಳನ್ನು ಅನುಸರಿಸಲು, ರಾಷ್ಟ್ರೀಯ ಆರೋಗ್ಯ ಅಭಿಯಾನದ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ರಾಜ್ಯ ನವಜಾತ ಶಿಶು ಪರೀಕ್ಷಾ ಕೇಂದ್ರ (ಎಸ್‌ಎನ್‌ಎಸ್‌ಸಿ) ಸ್ಥಾಪಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.