ADVERTISEMENT

ಮಾಜಿ ದೇವದಾಸಿಯರ ಮರು ಸಮೀಕ್ಷೆ ಮುಂದುವರಿಸಿ: ಎನ್ಎಫ್‌ಐಡಬ್ಲ್ಯು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 16:23 IST
Last Updated 3 ಮಾರ್ಚ್ 2026, 16:23 IST
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ನ್ಯಾಷನಲ್ ಫೆಡರೇಷನ್ ಆಫ್ ಇಂಡಿಯನ್ ವುಮೆನ್ ರಾಜ್ಯ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.  – ಪ್ರಜಾವಾಣಿ ಚಿತ್ರ 
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ನ್ಯಾಷನಲ್ ಫೆಡರೇಷನ್ ಆಫ್ ಇಂಡಿಯನ್ ವುಮೆನ್ ರಾಜ್ಯ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.  – ಪ್ರಜಾವಾಣಿ ಚಿತ್ರ    

ಬೆಂಗಳೂರು: ಮಾಜಿ ದೇವದಾಸಿಯರ ಮರು ಸಮೀಕ್ಷೆ ಸಮರ್ಪಕವಾಗಿ ನಡೆದಿಲ್ಲ. ಇದರಿಂದಾಗಿ ಅರ್ಹ ಮತ್ತು ನೈಜ ಸಂತ್ರಸ್ತೆಯರು ಗಣತಿಯಿಂದ ಹೊರಗುಳಿದಿದ್ದಾರೆ ಎಂದು ಆರೋಪಿಸಿ ನ್ಯಾಷನಲ್ ಫೆಡರೇಷನ್ ಆಫ್ ಇಂಡಿಯನ್ ವುಮೆನ್ (ಎನ್‌ಎಫ್ಐಡಬ್ಲ್ಯು) ರಾಜ್ಯ ಸಮಿತಿ ನೇತೃತ್ವದಲ್ಲಿ ಮಂಗಳವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಯಿತು.

ರಾಜ್ಯ ಸರ್ಕಾರವು ಮಾಜಿ ದೇವದಾಸಿಯರ ಮರುಸಮೀಕ್ಷೆ ಮುಂದುವರಿಸಬೇಕು. ನೈಜ, ಅರ್ಹ ಸಂತ್ರಸ್ತೆಯರು ಮತ್ತು ಅವರ ಕುಟುಂಬದವರು ಸೇರ್ಪಡೆಯಾಗುವಂತೆ ಸಮಗ್ರವಾಗಿ, ನ್ಯಾಯಯುತವಾಗಿ, ಪಾರದರ್ಶಕವಾಗಿ ನಡೆಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಎನ್‌ಎಫ್‌ಐಡಬ್ಲ್ಯು ಅಧ್ಯಕ್ಷೆ ಎ.ಜ್ಯೋತಿ ಮಾತನಾಡಿ, ‘ಸರ್ಕಾರಕ್ಕೆ ಸಲ್ಲಿಸಿರುವ ಅಪೂರ್ಣ ವರದಿಯ ಆಧಾರದಲ್ಲಿ ಮಾಜಿ ದೇವದಾಸಿಯರ ಕುರಿತ ಯೋಜನೆಗಳಿಗೆ ಮತ್ತು ಕಾರ್ಯಕ್ರಮಗಳಿಗೆ ಫಲಾನುಭವಿಗಳನ್ನು ಗುರುತಿಸಬಾರದು. ಮರುಸಮೀಕ್ಷೆ ನಡೆಸಿ ಪಟ್ಟಿ ಅಂತಿಮಗೊಳಿಸುವಾಗ ಮಾಜಿ ದೇವದಾಸಿಯರಿಗೆ ವಯಸ್ಸಿನ ಮಾನದಂಡ ವಿಧಿಸಬಾರದು’ ಎಂದರು.

ADVERTISEMENT

ದೇವದಾಸಿ ಪದ್ಧತಿಗೆ ಬಲಿಯಾದ ಎಲ್ಲ ಕುಟುಂಬಗಳ ಸಮೀಕ್ಷೆ ನಡೆಸಿ ಅವರ ಮೂರು ತಲೆಮಾರುಗಳ ಎಲ್ಲರೂ ಪಟ್ಟಿಯಲ್ಲಿ ಸೇರುವಂತೆ ಕ್ರಮ ವಹಿಸಬೇಕು. ಸಮೀಕ್ಷೆಗೆ ಅಗತ್ಯವಾದ ಮಾಜಿ ದೇವದಾಸಿ ಮಹಿಳೆಯರ ಮತ್ತು ಅವರ ಕುಟುಂಬದವರ ದಾಖಲೆಗಳನ್ನು ಆದ್ಯತೆಯ ಮೇಲೆ ಒದಗಿಸುವಂತೆ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ನಿರ್ದೇಶನ ನೀಡಬೇಕು. ಮರುಸಮೀಕ್ಷೆಯ ಮಾಹಿತಿಯನ್ನು ಅಂಗನವಾಡಿ ಕೇಂದ್ರಗಳಲ್ಲಿ ಪ್ರದರ್ಶಿಸಬೇಕು ಎಂದು ಹೇಳಿದರು.

ದೇವದಾಸಿ ಪದ್ಧತಿಗೆ ಒಳಪಡದ ಮಹಿಳೆಯರನ್ನು ಸಮೀಕ್ಷಾ ಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಂಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ದಾಖಲೆಗಳನ್ನು ಒದಗಿಸಲು ಹೈರಾಣಾಗುತ್ತಿರುವ ಮಾಜಿ ದೇವದಾಸಿಯರಿಗೆ ಪರ್ಯಾಯ ದಾಖಲೆಗಳನ್ನು ಒದಗಿಸುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಿಪಿಐ ರಾಜ್ಯ ಮಂಡಳಿ ಕಾರ್ಯದರ್ಶಿ ಸಾತಿ ಸುಂದರೇಶ್, ಎನ್‌ಎಫ್‌ಐಡಬ್ಲ್ಯು ಕಾರ್ಯದರ್ಶಿ ಕೆ. ರೇಣುಕಾ, ರಾಜ್ಯ ಮಂಡಳಿ ಸದಸ್ಯರಾದ ಶೇಖಮ್ಮ, ದುರ್ಗಾ, ತಾಯಮ್ಮ, ಅಕ್ಕಮ್ಮ, ಮಾಲಾ, ಚಂದ್ರಕಲಾ, ಲಿಂಗತ್ವ ಅಲ್ಪಸಂಖ್ಯಾತರ ಸಂಘಟನೆಯ ಹೋರಾಟಗಾರರಾದ ಪ್ರಕಾಶ್ ರಾಜ್, ಮಲ್ಲು ಕುಂಬಾರ್, ಎನ್. ವೈಶಾಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.