
ಬೆಂಗಳೂರು: ಬೈಯಪ್ಪನಹಳ್ಳಿಯಲ್ಲಿ ಸರ್ಕಾರಿ ಸ್ವಾಮ್ಯದ ಎನ್‌ಜಿಇಎಫ್ ಕಾರ್ಖಾನೆಗೆ ಸೇರಿದ 105 ಎಕರೆ ಜಾಗದ ಪೈಕಿ 65 ಎಕರೆ ಜಾಗದಲ್ಲಿ ವೃಕ್ಷೋದ್ಯಾನ ಅಭಿವೃದ್ಧಿಪಡಿಸಿ, ಮಾರ್ಚ್‌ನಲ್ಲಿ ಮೊದಲ ಹಂತವನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.
ಎನ್‌ಜಿಇಎಫ್ ಆವರಣಕ್ಕೆ ಶನಿವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಜತೆ ಭೇಟಿ ನೀಡಿ, ವೃಕ್ಷೋದ್ಯಾನ ಕಾಮಗಾರಿಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.
ವೃಕ್ಷೋದ್ಯಾನವನ್ನು ಹಂತ 1, 1ಎ, 1ಬಿ ಮತ್ತು 2 ಹೀಗೆ ನಾಲ್ಕು ಹಂತಗಳಲ್ಲಿ, ₹37.75 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. 1ಎ ಹಂತದ ಕಾಮಗಾರಿ ಆರು ತಿಂಗಳಲ್ಲಿ ಮುಗಿಯಲಿದೆ. ಈ ಜಾಗದಲ್ಲಿ 8,500 ಬಗೆಬಗೆಯ ಮರಗಳಿವೆ. ಇವುಗಳ ವೈಜ್ಞಾನಿಕ ಹೆಸರನ್ನು ಈಗ ಪ್ರದರ್ಶಿಸಲಾಗಿದೆ. ಒಂದೇ ಒಂದು ಮರವನ್ನೂ ಕಡಿಯುವುದಿಲ್ಲ. ಆದರೆ, ಇಲ್ಲಿರುವ ನೀಲಗಿರಿ ಜಾತಿಯ ಮರಗಳನ್ನು ಏನು ಮಾಡಬೇಕೆಂದು ವೈಜ್ಞಾನಿಕವಾಗಿ ಪರಿಶೀಲಿಸಿ, ತೀರ್ಮಾನಿಸಲಾಗುವುದು. ಹಂತ-1ರ ಕಾಮಗಾರಿಗಳಿಗೆ ಅಗತ್ಯವಿದ್ದ ₹11.50 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಎನ್‌ಜಿಇಎಫ್ ಆಡಳಿತ ಕಚೇರಿ ಕಟ್ಟಡಗಳು, ಕೈಗಾರಿಕಾ ಕಟ್ಟಡಗಳಿಗೆ ಹೊಸ ರೂಪ ಕೊಡಲಾಗುತ್ತದೆ. ಸುಮಾರು ಏಳು ಸಾವಿರ ವಾಹನಗಳ ನಿಲುಗಡೆಗೆ ಬಹುಮಹಡಿ ಪಾರ್ಕಿಂಗ್ ಲಾಟ್ ನಿರ್ಮಿಸಲಾಗುವುದು. ಐಟಿ-ಬಿಟಿ ಇಲಾಖೆಯು ಇಲ್ಲಿ ₹100 ಕೋಟಿ ವೆಚ್ಚದಲ್ಲಿ `ಟೆಕ್ನಾಲಜಿ ಇನ್ನೋವೇಶನ್ ಮ್ಯೂಸಿಯಂ’ ಅಭಿವೃದ್ಧಿಪಡಿಸಲಿದೆ ಎಂದು ತಿಳಿಸಿದರು.
ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್ ನಿಯಮಿತ (ಬಿಎಂಆರ್‌ಸಿಎಲ್) ವ್ಯವಸ್ಥಾಪಕ ನಿರ್ದೇಶಕ ಜೆ. ರವಿಶಂಕರ್, ಎಂಎಸ್ಐಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ , ಮೂಲಸೌಕರ್ಯ ಇಲಾಖೆ ಕಾರ್ಯದರ್ಶಿ ವಿಶಾಲ್, ಐ.ಟಿ, ಬಿ.ಟಿ ಇಲಾಖೆ ಕಾರ್ಯದರ್ಶಿ ಡಾ.ಎನ್.ಮಂಜುಳಾ, ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.