ADVERTISEMENT

ಬೆಂಗಳೂರು ಕೆರೆಗಳ ನಿರ್ಲಕ್ಷ್ಯ: ಸರ್ಕಾರ, ಬಿಬಿಎಂಪಿಗೆ ದಂಡ ವಿಧಿಸಿ ಎನ್‌ಜಿಟಿ

ಸಿದ್ದಯ್ಯ ಹಿರೇಮಠ
Published 6 ಡಿಸೆಂಬರ್ 2018, 10:25 IST
Last Updated 6 ಡಿಸೆಂಬರ್ 2018, 10:25 IST
ಬೆಳ್ಳಂದೂರು ಕೆರೆ –ಪ್ರಜಾವಾಣಿ ಚಿತ್ರ
ಬೆಳ್ಳಂದೂರು ಕೆರೆ –ಪ್ರಜಾವಾಣಿ ಚಿತ್ರ   

ನವದೆಹಲಿ: ಬೆಂಗಳೂರಿನಲ್ಲಿರುವ ಬೆಳ್ಳಂದೂರು, ವರ್ತೂರು ಮತ್ತು ಅಗರ ಕೆರೆಗಳ ಮಾಲಿನ್ಯಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಗುರುವಾರ ಪೂರ್ಣಗೊಳಿಸಿ ಮಹತ್ವದ ತೀರ್ಪು ನೀಡಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ), ರಾಜ್ಯ ಸರ್ಕಾರಕ್ಕೆ ₹ 50ಕೋಟಿ ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ₹ 25 ಕೋಟಿ ದಂಡ ವಿಧಿಸಿ ಆದೇಶಿಸಿದೆ.

ಬೆಂಗಳೂರಿನ ಕೆರೆಗಳ ಪುನಶ್ಚೇತನ ಕಾರ್ಯಕ್ಕಾಗಿ ಸರ್ಕಾರ ₹500 ಕೋಟಿ ಮೀಸಲಿಡಬೇಕು. ದಂಡದ ಮೊತ್ತವನ್ನು ಕೇಂದ್ರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪಾವತಿಸಬೇಕು, ಕೆರೆಗಳ ಅಭಿವೃದ್ಧಿ ಕುರಿತ ಗ್ಯಾರಂಟಿ ಹಣವನ್ನಾಗಿ ₹ 100 ಕೋಟಿ ಪ್ರತ್ಯೇಕವಾಗಿ ಇರಿಸಬೇಕು ಎಂದು ನ್ಯಾಯಮೂರ್ತಿ ಆದರ್ಶಕುಮಾರ್ ಗೋಯಲ್ ನೇತೃತ್ವದ ಹಸಿರುಪೀಠ ತೀರ್ಪಿನಲ್ಲಿ ತಿಳಿಸಿದೆ.

ಕೆರೆಗಳ ಪುನಶ್ಚೇತನ ಕಾರ್ಯದ ಮೇಲ್ವಿಚಾರಣೆಗಾಗಿ ನಿವೃತ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ನೇತೃತ್ವದ ಸಮಿತಿಯನ್ನು ರಚಿಸುವಂತೆ ಸೂಚಿಸಿರುವ ಪೀಠ, ಕೆರೆ ಅಭಿವೃದ್ಧಿ ಮತ್ತು ಪುನಶ್ಚೇತನ ಯೋಜನೆಯ ಸಮರ್ಪಕ ಜಾರಿಯ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳ ಹಿರಿಯ ಅಧಿಕಾರಿಗಳನ್ನು ನಿಯೋಜಿಸಬೇಕು. ಅಭಿವೃದ್ಧಿ ಕಾರ್ಯಕ್ಕೆ ಅವರನ್ನೇ ಸಂಪೂರ್ಣ ವೈಯಕ್ತಿಕ ಜವಾಬ್ದಾರರನ್ನಾಗಿಸಬೇಕು. ಈ ವಿಷಯವನ್ನು ಆಯಾ ಅಧಿಕಾರಿಗಳ ಸೇವಾ ದಾಖಲೆಯಲ್ಲೂ ನಮೂದಿಸಬೇಕು ಎಂದು ಹೇಳಿದೆ.

ADVERTISEMENT
ಬೆಳ್ಳಂದೂರು ಕೆರೆ

ಈ ಮೂರೂ ಕೆರೆಗಳ ಸಂರಕ್ಷಣೆಯನ್ನು ರಾಜ್ಯ ಸರ್ಕಾರ, ಬಿಬಿಎಂಪಿಗಳು ತೀವ್ರವಾಗಿ ನಿರ್ಲಕ್ಷಿಸಿವೆ. ನೀರು ಹರಿದು ಬರುವ ರಾಜಕಾಲುವೆಗಳ ಅತಿಕ್ರಮಣ ತಡೆಯುವಲ್ಲಿ ವಿಫಲವಾಗಿವೆ. ಘನತ್ಯಾಜ್ಯ ನಿರ್ವಹಣೆ ಸ್ಥಳೀಯ ಆಡಳಿತದ ಕೆಲಸವಾದರೂ, ಕೆರೆಗಳಿಗೆ ತ್ಯಾಜ್ಯ ಹರಿಬಿಡುತ್ತಿರುವುದು ಗಂಭೀರ ಸ್ವರೂಪದ ಅಪರಾಧ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ನೇತೃತ್ವದ ಉನ್ನತ ಮಟ್ಟದ ಸಮಿತಿಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯ ಪ್ರೊ. ರಾಮಚಂದ್ರನ್ ಸಹ ಇರಲಿದ್ದಾರೆ. ಜೊತೆಗೆ ಈ ಸಮಿತಿಯೇ ತಜ್ಞರನ್ನು ನೇಮಕ ಮಾಡಿಕೊಂಡು ಕೆರೆಗಳ ಅಭಿವೃದ್ಧಿ ಕಾರ್ಯದ ಮೇಲ್ವಿಚಾರಣೆಯ ಹೊಣೆ ನಿಭಾಯಿಸಬೇಕು. ಇದಕ್ಕೆಲ್ಲ ರಾಜ್ಯ ಸರ್ಕಾರ ಸೂಕ್ತ ಸಹಕಾರ ನೀಡಬೇಕು. ಈ ಸಮಿತಿಯು ಕಾಲಕಾಲಕ್ಕೆ ನೀಡುವ ಶಿಫಾರಸುಗಳನ್ನು ಪಾಲಿಸಬೇಕು ಎಂಬುದು ನ್ಯಾಯಮೂರ್ತಿಗಳಾದ ಎಸ್‌.ಪಿ. ವಾಂಗ್ಡಿ, ರಾಮಕೃಷ್ಣ ಹಾಗೂ ತಜ್ಞ ಸದಸ್ಯ ನಾಗಿನ್‌ ನಂದಾ ಅವರಿದ್ದ ಪೀಠದ ತೀರ್ಪಿನಲ್ಲಿರುವ ಅಂಶವಾಗಿದೆ.

ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಬೇಕು. ಕೆರೆಗಳ ಸಂರಕ್ಷಣೆಗಾಗಿ ಸಾರ್ವಜನಿಕರೂ ಒಳಗೊಳ್ಳುವಂತೆ ಪ್ರೇರೇಪಿಸಬೇಕು. ಸಾರ್ವಜನಿಕರು ವೆಬ್‌ಸೈಟ್ ಮೂಲಕವೇ ದೂರು, ಸಲಹೆ ನೀಡಲು ಅವಕಾಶ ಒದಗಿಸಬೇಕು. ಇದಕ್ಕಾಗಿಯೇ ಪ್ರತ್ಯೇಕ ವೆಬ್‌ಸೈಟ್ ಆರಂಭಿಸಲು ಸಮಿತಿಗೆ ನಿರ್ದೇಶನ ನೀಡಲಾಗಿದೆ. ಕೆರೆಗಳ ಸದ್ಯದ ಸ್ಥಿತಿಗತಿ, ನೀರಿನ ಸಂಗ್ರಹ, ಜಲಾನಯನ ಪ್ರದೇಶ, ರಾಜ ಕಾಲುವೆಗಳ ಅಸ್ತಿತ್ವ, ಒತ್ತುವರಿ, ಸಂಗ್ರಹವಾಗಿರುವ ತ್ಯಾಜ್ಯ, ಹೂಳಿನ ಪ್ರಮಾಣ, ಮಾಲಿನ್ಯದ ಮೂಲ ಕಾರಣಗಳು, ಒಳಚರಂಡಿ ಮೂಲಕ ಕೆರೆಗೆ ಸೇರುತ್ತಿರುವ ಮಲಿನ ನೀರಿನ ಹರಿವು, ಬಫರ್‌ ವಲಯದ ಉಲ್ಲಂಘನೆ ಒಳಗೊಂಡಂತೆ ಎಲ್ಲ ಆಯಾಮಗಳ ಕುರಿತೂ ಸರ್ಕಾರ ಗಮನ ಹರಿಸುವ ಮೂಲಕ ಪುನಶ್ಚೇತನಗೊಳಿಸಬೇಕು ಎಂದು ತೀರ್ಪಿನಲ್ಲಿ ಸೂಚಿಸಲಾಗಿದೆ. ಕೆರೆಗಳ ಪುನಶ್ಚೇತನಕ್ಕಾಗಿ ಕನಿಷ್ಠ ₹ 800 ಕೋಟಿಯಿಂದ ₹ 1,000 ಕೋಟಿ ಮೀಸಲಿಡಲು ಸೂಚಿಸಬೇಕು ಎಂದು ಮೂಲ ಅರ್ಜಿದಾರರಾದ ಕುಪೇಂದ್ರ ರೆಡ್ಡಿ ಅವರ ಪರ ವಕೀಲ ಪಿ.ರಾಮಪ್ರಸಾದ್‌ ಪೀಠಕ್ಕೆ ಮನವಿ ಮಾಡಿದರು.

ನಮ್ಮ ಬೆಂಗಳೂರು ಪ್ರತಿಷ್ಠಾನದ ಪರ ವಕೀಲ ಸಜ್ಜನ್‌ ಪೂವಯ್ಯ ವಾದ ಮಂಡಿಸಿದರು. ರಾಜ್ಯ ಸರ್ಕಾರದ ಪರ ವಕೀಲ ಅಶೋಕ್‌ ದೇವರಾಜ್‌ ಕೆರೆಗಳ ಸಂರಕ್ಷಣೆಗೆ ಈಗಾಗಲೇ ಸರ್ಕಾರ ಕ್ರಮ ಕೈಗೊಂಡಿದೆ ಎಂದು ವಿವರಿಸಿದರು.

ಮುಖ್ಯಾಂಶಗಳು

* ಉದ್ಯಾನನಗರಿ ಈಗ ಪರಿಸರ ನಿರ್ಲಕ್ಷಿತ ನಗರ
* ವಾಯು ಮಾಲಿನ್ಯವೂ ಗಣನೀಯವಾಗಿ ಹೆಚ್ಚಳ
* ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ಪಾಲಿಸಲು ನಿರ್ದೇಶನ
* ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ನೇತೃತ್ವದ ಸಮಿತಿ ರಚನೆ
* ದೂರು ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ
* ಪ್ರತ್ಯೇಕ ವೆಬ್‌ಸೈಟ್ ಆರಂಭಿಸಲು ಸೂಚನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.