ADVERTISEMENT

ಬಹುಮಹಡಿ ಕಟ್ಟಡಗಳ ಬುಡ ಅಲುಗಾಡಿಸಿದ ಎನ್‌ಜಿಟಿ

ಕೆರೆ, ರಾಜಕಾಲುವೆ ಒತ್ತುವರಿ ವಿರುದ್ಧ ಕ್ರಮಕ್ಕೆ ಆದೇಶ

​ಪ್ರಜಾವಾಣಿ ವಾರ್ತೆ
Published 30 ಜುಲೈ 2021, 20:19 IST
Last Updated 30 ಜುಲೈ 2021, 20:19 IST
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ   

ಬೆಂಗಳೂರು: ಕೆರೆ ಸಂರಕ್ಷಣೆಗೆ ಸಂಬಂಧಿಸಿದ ಕಾನೂನುಗಳನ್ನು ಉಲ್ಲಂಘಿಸಿರುವ ಕಟ್ಟಡ ನೆಲಸಮಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನೀಡಿರುವ ಆದೇಶ, ಬೆಂಗಳೂರಿನಲ್ಲಿ ಕೆರೆ ಮತ್ತು ರಾಜಕಾಲುವೆಗಳ ಬದಿಯಲ್ಲಿ ನಿಯಮ ಉಲ್ಲಂಘಿಸಿ ನಿರ್ಮಾಣವಾಗಿರುವ ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ಬುಡ ಅಲುಗಾಡುವಂತೆ ಮಾಡಿದೆ.

‘₹310 ಕೋಟಿ ವೆಚ್ಚದಲ್ಲಿ ಗೋದ್ರೆಜ್‌ ಪ್ರಾಪರ್ಟಿಸ್‌ ಲಿಮಿಟೆಡ್ ಮತ್ತು ವಂಡರ್‌ ಪ್ರಾಜೆಕ್ಟ್ಸ್‌ ಡೆವಲಪ್‌ಮೆಂಟ್‌ ಪ್ರೈವೇಟ್ ಲಿಮಿಟೆಡ್ ನಿರ್ಮಿಸಿರುವ ಬಹುಮಹಡಿ ಕಟ್ಟಡಕ್ಕೆ ನೀಡಲಾಗಿದ್ದ ಪರಿಸರ ಅನುಮೋದನೆ ರದ್ದುಪಡಿಸಿರುವ ಎನ್‌ಜಿಟಿ, ಕಟ್ಟಡ ನೆಲಸಮಕ್ಕೆ ಆದೇಶಿಸಿದೆ. ಬೆಂಗಳೂರಿನ ಮಟ್ಟಿಗೆ ಇದೊಂದು ಐತಿಹಾಸಿಕ ಆದೇಶವಾಗಿದ್ದು, ಕೆರೆ ಮತ್ತು ರಾಜಕಾಲುವೆಗಳ ಸಂರಕ್ಷಣೆ ವಿಷಯದಲ್ಲಿ ಇದೊಂದು ಮೈಲುಗಲ್ಲು’ ಎಂದು ಪರಿಸರವಾದಿಗಳು ವಿಶ್ಲೇಷಿಸಿದ್ದಾರೆ.

‘ಕಟ್ಟಡ ನೆಲಸಮ ಮಾತ್ರವಲ್ಲದೇ ಯೋಜನಾ ವೆಚ್ಚ (ಸ್ವಾಧೀನಾನುಭವ ಪತ್ರ ಪಡೆಯಲು ಕಂಪನಿಯೇ ದಾಖಲಿಸಿರುವ ಮೊತ್ತ) ₹310 ಕೋಟಿಯಲ್ಲಿ ಶೇ 10ರಷ್ಟನ್ನು ಅಂದರೆ ₹31 ಕೋಟಿಯನ್ನು ಕಟ್ಟಡ ನೆಲಸಮ ಮಾಡಿದ ಬಳಿಕ ಆ ಜಾಗವನ್ನು ಅದೇ ಸ್ಥಿತಿಗೆ ಮರುಸ್ಥಾಪಿಸಲು ಕಂಪನಿಗಳೇ ದಂಡವಾಗಿ ನೀಡಬೇಕು ಎಂದು ಆದೇಶಿಸಿದೆ. ಗೋದ್ರೆಜ್ ಕಂಪನಿಯ ಕಟ್ಟಡವಲ್ಲದೇ ಇತರ ಎರಡು ಕಟ್ಟಡಗಳನ್ನೂ ಎನ್‌ಜಿಟಿ ಉಲ್ಲೇಖಿಸಿದೆ. ಆ ಕಟ್ಟಡಗಳ ಮೇಲೂ ಈ ಆದೇಶದ ಪರಿಣಾಮ ಬೀರಲಿದೆ. ಪರಿಹಾರ ಮೊತ್ತವನ್ನು ಲೆಕ್ಕಾಚಾರ ಮಾಡುವಂತೆ ತಿಳಿಸಿದೆ’ ಎಂದು ಅರ್ಜಿದಾರರ ಪರ ವಾದ ಮಂಡಿಸಿದ ಸುಪ್ರೀಂ ಕೋರ್ಟ್ ವಕೀಲ ರಾಮ್‌ ಪ್ರಸಾದ್ ತಿಳಿಸಿದರು.

ADVERTISEMENT

‘ಪರಿಸರ ಅನುಮೋದನೆ ನೀಡುವ ವಿಷಯದಲ್ಲಿ ಗೋದ್ರೆಜ್ ಕಂಪನಿ ಮಾತ್ರವಲ್ಲ. ಬಿಬಿಎಂಪಿ ಅಧಿಕಾರಿಗಳು ಒಟ್ಟುಗೂಡಿ ರಾಜಕಾಲುವೆಯ ದಿಕ್ಕು ಬದಲಿಸಿದ್ದಾರೆ ಎಂಬುದನ್ನು ಎನ್‌ಜಿಟಿ ಪರಿಗಣಿಸಿದೆ. ಒಟ್ಟು 230 ಪುಟಗಳ ಆದೇಶ ನೀಡಿದೆ’ ಎಂದು ವಿವರಿಸಿದರು.

‘ಪರಿಸರ ನಿಯಮಗಳ ಉಲ್ಲಂಘನೆ ಕಾರಣಕ್ಕೆ ಕಟ್ಟಡ ನೆಲಸಮಕ್ಕೆ ಆದೇಶ ನೀಡಿರುವ ಬೆಂಗಳೂರಿನ ಮೊದಲ ಪ್ರಕರಣ ಇದಾಗಿದೆ. ಮೂರು ದಿನಗಳಲ್ಲಿ 21 ಗಂಟೆಗಳ ಕಾಲ ವಾದ ಮಂಡಿಸಿ ಎನ್‌ಜಿಟಿಗೆ ಮನವರಿಕೆ ಮಾಡಿಸಲಾಯಿತು.ನಿರಂತರ ಹೋರಾಟಕ್ಕೆ ಜಯ ಸಿಕ್ಕಿದೆ. ಇದೇ ರೀತಿಯ ಉಲ್ಲಂಘನೆಗಳು ಕಸವನಹಳ್ಳಿ ಕೆರೆಯ ಸುತ್ತಲೂ ಆಗಿವೆ. ಇವುಗಳ ವಿರುದ್ಧವೂ ಕಾನೂನು ಹೋರಾಟ ಮುಂದುವರಿದಿದೆ’ ಎಂದರು.

‘ಆದೇಶವನ್ನು ಕೂಡಲೇ ಪಾಲನೆ ಮಾಡಬೇಕು’

‘ಕೆರೆಗಳು ಮತ್ತು ಮೀಸಲು ವಲಯ ಸಂರಕ್ಷಣೆ ವಿಷಯದಲ್ಲಿ ಎನ್‌ಜಿಟಿ ಒಳ್ಳೆಯ ಆದೇಶವೊಂದನ್ನು ನೀಡಿದೆ’ ಎಂದು ಜಲ ಸಂರಕ್ಷಣೆಗಾಗಿ ಒಕ್ಕೂಟದ ಸಂಚಾಲಕ ಸಂದೀಪ್ ಅನಿರುದ್ಧನ್ ಅಭಿಪ್ರಾಯಪಟ್ಟರು.

‘ಪುಣೆ ಮತ್ತು ಮುಂಬೈ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಪರಿಸರ ನಿಯಮಗಳನ್ನು ಉಲ್ಲಂಘಿಸಿ ಹೆಚ್ಚಿನ ಸಂಖ್ಯೆಯಲ್ಲಿ ಕಟ್ಟಡಗಳು ನಿರ್ಮಾಣವಾಗಿವೆ. ಈ ರೀತಿಯ ಆದೇಶಗಳು ರಿಯಲ್ ಎಸ್ಟೇಟ್ ಉದ್ಯಮದವರಿಗೆ ಮತ್ತು ಅದಕ್ಕೆ ಸಹಕಾರ ನೀಡುವ ಆಡಳಿತ ವರ್ಗಕ್ಕೆ ಭಯ ಹುಟ್ಟಲಿದೆ’ ಎಂದರು.

ಎನ್‌ಜಿಟಿ ಆದೇಶವನ್ನು ಕೂಡಲೇ ಪಾಲನೆ ಮಾಡಬೇಕು. ಬೇರೆ ಕೆರೆಗಳ ಬಳಿಯೂ ಆಗಿರುವ ಒತ್ತುವರಿ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.

‘ಎಲ್ಲರ ವಿರುದ್ಧವೂ ಕ್ರಮ ಆಗಬೇಕು’

‘ಪರಿಸರ ನಿಯಮಗಳ ಉಲ್ಲಂಘನೆಗೆ ಕಟ್ಟಡ ನಿರ್ಮಾಣ ಮಾಡಿರುವ ಕಂಪನಿಗಳು ಮಾತ್ರ ಕಾರಣರಲ್ಲ. ಬಿಬಿಎಂಪಿ ಮುಖ್ಯ ಎಂಜಿನಿಯರ್ ಆದಿಯಾಗಿ ಎಲ್ಲ ಅಧಿಕಾರಿಗಳ ಪಾಲೂ ಇದೆ’ ಎಂದು ಪರಿಸರವಾದಿ ಲಿಯೊ ಸಲ್ಡಾನ ಹೇಳಿದರು.

‘ತಹಶೀಲ್ದಾರ್, ಸರ್ವೆಯರ್‌ಗಳು ಮುಖ್ಯ ಪಾತ್ರ ವಹಿಸುತ್ತಾರೆ. ಅಂತವರ ವಿರುದ್ಧವೂ ಕ್ರಮಗಳು ಜರುಗಬೇಕು. ಆಗ ಮಾತ್ರ ಈ ರೀತಿಯ ಉಲ್ಲಂಘನೆಗಳನ್ನು ತಡೆಯಬಹುದು’ ಎಂದರು.

‘ಕೆರೆಗಳ ಒತ್ತುವರಿ ಕುರಿತು ಸರ್ವೆ ನಡೆಸಲು ಹೈಕೋರ್ಟ್ ಕೂಡ ಆದೇಶಿಸಿದೆ. ಎಲ್ಲ ಒತ್ತುವರಿಗಳನ್ನು ಮುಲಾಜಿಲ್ಲದೆ ತೆರವುಗೊಳಿಸಬೇಕು. ಬಡವರು ಮನೆ ಕಟ್ಟಿಕೊಂಡಿದ್ದರೆ ಸರ್ಕಾರ ಅವರಿಗೆ ಪುನರ್ವಸತಿ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ಹೊರವಲಯದಲ್ಲೇ ಹೆಚ್ಚು ಉಲ್ಲಂಘನೆ

ಈ ರೀತಿಯ ಉಲ್ಲಂಘನೆಗಳು ಬೆಂಗಳೂರಿನ ಹೊರ ವಲಯದಲ್ಲೇ ಹೆಚ್ಚು ಎಂದು ಪರಿಸರ ಹೋರಾಟಗಾರ ವಿಷ್ಣು ಪ್ರಸಾದ್ ಹೇಳಿದರು.

ಎನ್‌ಜಿಟಿ ನೀಡಿರುವ ಆದೇಶ ಬೆಂಗಳೂರಿಗೆ ದೊಡ್ಡ ಮೈಲಿಗಲ್ಲು. ಬಿಬಿಎಂಪಿ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಪ್ರಕರಣ ಬೆಂಗಳೂರಿಗೆ ಮಾದರಿಯಾಗುವಂತೆ ಮಾಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.