ಬೆಂಗಳೂರು: ನಗರದ ಹಲವು ಕಡೆ ಸ್ಫೋಟಕ್ಕೆ ಸಂಚು ರೂಪಿಸಿದ್ದ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳದ(ಎನ್‌ಐಎ) ತನಿಖಾಧಿಕಾರಿಗಳು, ಲಷ್ಕರ್ –ಇ–ತೊಯ್ಬಾ ಸಂಘಟನೆ ಜೊತೆ ನಂಟು ಹೊಂದಿದ್ದ ಶಂಕಿತ ಉಗ್ರ ವಿಕ್ರಂ ಕುಮಾರ್ ಅಲಿಯಾಸ್ ಚೋಟಾ ಉಸ್ಮಾನ್ ವಿರುದ್ಧ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಶುಕ್ರವಾರ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ವಿಕ್ರಂ ಒಂಬತನೇ ಆರೋಪಿ ಆಗಿದ್ದಾನೆ.
ಬಿಹಾರದ ಬೇಗುಸರೈ ಗ್ರಾಮದ ವಿಕ್ರಂ ವಿರುದ್ದ ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120ಬಿ, 17, 18, 20, 23 ಹಾಗೂ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ(ಯುಪಿಎ) ಹಾಗೂ ಸ್ಪೋಟ ವಸ್ತುಗಳ ಕಾಯ್ದೆಯ ಸೆಕ್ಷನ್ 6ರ ಅಡಿ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.
ಸಿಸಿಬಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವು 2023ರ ಅಕ್ಬೋಬರ್‌ನಲ್ಲಿ ಎನ್‌ಐಎಗೆ ವರ್ಗಾವಣೆಗೊಂಡಿತ್ತು. ನಗರದ ಮನೆಯೊಂದರಲ್ಲಿ ವಾಕಿಟಾಕಿ, ಮದ್ದುಗುಂಡು, ಶಸ್ತ್ರಾಸ್ತ್ರ ಹಾಗೂ ಡಿಜಿಟಲ್ ಉಪಕರಣಗಳನ್ನು ಎನ್‌ಐಎ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದರು. ತನಿಖೆ ಮುಂದುವರೆಸಿದಾಗ ಭಾರತದ ಏಕತೆ, ಸಮಗ್ರತೆ, ಭದ್ರತೆಗೆ ಧಕ್ಕೆ ತರುವ ಉದ್ದೇಶವನ್ನು ಬಂಧಿತ ಶಂಕಿತ ಉಗ್ರರು ಹೊಂದಿದ್ದರು ಎಂಬುದು ಗೊತ್ತಾಗಿತ್ತು ಎಂದು ಮೂಲಗಳು ತಿಳಿಸಿವೆ.
ಆರೋಪಿ ವಿಕ್ರಂ ಕುಮಾರ್ ಕೊಲೆ ಪ್ರಕರಣವೊಂದರಲ್ಲಿ 2018ರಲ್ಲಿ ಜೈಲು ಸೇರಿದ್ದ. ಭಯೋತ್ಪಾದನೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಟಿ.ನಾಸೀರ್ ಜತೆಗೆ ಸಂಪರ್ಕಕ್ಕೆ ಬಂದಿದ್ದ. ಆ ಸಂದರ್ಭದಲ್ಲಿ ವಿಕ್ರಂನನ್ನು ನಾಸೀರ್ ಉಗ್ರ ಚಟುವಟಿಕೆ ನಡೆಸುವಂತೆ ಮನಪರಿವರ್ತನೆ ಮಾಡಿದ್ದ. ಜೈಲಿನಿಂದ ವಿಕ್ರಂ ಬಿಡುಗಡೆಯಾದ ಮೇಲೂ ನಾಸೀರ್ ಹಾಗೂ ತಲೆಮರೆಸಿಕೊಂಡಿದ್ದ ಜುನೈದ್ ಆಹ್ಮದ್ ಸಂಪರ್ಕದಲ್ಲಿದ್ದ ಎಂದು ಮೂಲಗಳು ತಿಳಿಸಿವೆ.
2013ರ ಮೇನಲ್ಲಿ ಜುನೈದ್ ಸೂಚನೆ ಮೇರೆಗೆ ಹರಿಯಾಣದ ಅಂಬಾಲಾದಿಂದ ಗ್ರೆನೇಡ್, ವಾಕಿಟಾಕಿಗಳನ್ನು ಸಂಗ್ರಹಿಸಿಕೊಂಡು ಬಂದಿದ್ದ ವಿಕ್ರಂ, ಬೆಂಗಳೂರಿನಲ್ಲಿದ್ದ ನೆಲಸಿದ್ದ ಇತರೆ ಶಂಕಿತರಿಗೆ ಪೂರೈಸಿದ್ದ. ಅಲ್ಲದೇ ಭಾರತದಲ್ಲಿ ಎಲ್‌ಇಟಿ ಸಂಘಟನೆ ಬಲ ಪಡಿಸಲು ಜುನೈದ್ ಆಹ್ಮದ್‌ನಿಂದ ಹಣ ಪಡೆದುಕೊಳ್ಳುತ್ತಿದ್ದ. ಈ ಹಿಂದೆ ತಲೆಮರೆಸಿಕೊಂಡಿರುವ ಜುನೈದ್ ಆಹ್ಮದ್ ಸೇರಿದಂತೆ ಎಂಟು ಮಂದಿ ಶಂಕಿತರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಉಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಎನ್‌ಐಎ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.