ADVERTISEMENT

ನಿಮ್ಹಾನ್ಸ್‌ನಿಂದ ವೃದ್ಧರಿಗೆ ಮನೆ ಬಾಗಿಲಲ್ಲೇ ಮಾನಸಿಕ ಆರೋಗ್ಯ ಸೇವೆ

ವರುಣ ಹೆಗಡೆ
Published 5 ಅಕ್ಟೋಬರ್ 2025, 23:58 IST
Last Updated 5 ಅಕ್ಟೋಬರ್ 2025, 23:58 IST
.
.   

ಬೆಂಗಳೂರು: ಇಳಿ ವಯಸ್ಸಿನಲ್ಲಿ ಎದುರಾಗುವ ಮಾನಸಿಕ ಅನಾರೋಗ್ಯ ಸಮಸ್ಯೆಗಳ ನಿರ್ವಹಣೆ ಮತ್ತು ಆರೈಕೆಗೆ ಸಂಬಂಧಿಸಿದಂತೆ, ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಯು (ನಿಮ್ಹಾನ್ಸ್‌) ಮನೆ ಬಾಗಿಲಲ್ಲಿಯೇ ಮಾನಸಿಕ ಆರೋಗ್ಯ ಸೇವೆ ಪ್ರಾರಂಭಿಸಿದೆ. 

ಸಂಸ್ಥೆಯ ಮಾನಸಿಕ ಆರೋಗ್ಯ ವಿಭಾಗದ ವೃದ್ಧರ ಚಿಕಿತ್ಸಾ ಕೇಂದ್ರವು (ಜಿರಿಯಾಟ್ರಿಕ್ ಕ್ಲಿನಿಕ್) ಪ್ರಾಯೋಗಿಕವಾಗಿ ಬೆಂಗಳೂರು ದಕ್ಷಿಣದಲ್ಲಿ ‘ನಿಮ್ಹಾನ್ಸ್ ವಯೋಮಾನಸ ಸಂಜೀವಿನಿ ಗೃಹ’ ಯೋಜನೆಯನ್ನು ಅನುಷ್ಠಾನ ಮಾಡಿದೆ. ಈ ಯೋಜನೆಯಡಿ 65 ವರ್ಷ ಮೇಲ್ಪಟ್ಟ ವೃದ್ಧರಿಗೆ ಮನೆ ಬಾಗಿಲಲ್ಲಿಯೇ ವಿವಿಧ ಮಾನಸಿಕ ಸಮಸ್ಯೆಗಳಿಗೆ ಆರೈಕೆ ಒದಗಿಸುವ ಜತೆಗೆ, ಮಾನಸಿಕ ಸ್ವಾಸ್ಥ್ಯ ಕಾಯ್ದುಕೊಳ್ಳಲು ಅನುಸರಿಸಬಹುದಾದ ಕಾರ್ಯಚಟುವಟಿಕೆಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ಮೊದಲ ಹಂತದಲ್ಲಿ ವೃದ್ಧಾಶ್ರಮಗಳನ್ನು ಆಯ್ಕೆ ಮಾಡಿಕೊಂಡು, ಅಲ್ಲಿ ಮಾನಸಿಕ ಆರೋಗ್ಯ ಸೇವೆಗಳನ್ನು ಒದಗಿಸಲಾಗುತ್ತಿದೆ.

ಸಮುದಾಯದ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಕಾರ್ಯಗತ ಮಾಡಲಾಗುತ್ತಿದೆ. ‘ಅಲ್ಜಮೈರ್ಸ್‌’, ‘ಡಿಮೆನ್ಶಿಯಾ’ದಂತಹ (ಮರೆಗುಳಿತನ) ಕಾಯಿಲೆಗಳನ್ನು ಎದುರಿಸುತ್ತಿರುವ ವೃದ್ಧರಿಗೆ ನೆರವಾಗುವ ಜತೆಗೆ, 65 ವರ್ಷ ಮೇಲ್ಪಟ್ಟವರು ಸಂಧ್ಯಾಕಾಲದಲ್ಲಿ ಮಾನಸಿಕ ಸ್ವಾಸ್ಥ್ಯ ಕಾಯ್ದುಕೊಳ್ಳುವಂತೆ ಉತ್ತೇಜಿಸುವುದು ಯೋಜನೆಯ ಉದ್ದೇಶವಾಗಿದೆ. ಸಂಸ್ಥೆಯ ಮಾನಸಿಕ ಆರೋಗ್ಯ ವಿಭಾಗದ ವೃದ್ಧರ ಚಿಕಿತ್ಸಾ ಕೇಂದ್ರದ ವೈದ್ಯಕೀಯ ತಂಡವು ಈ ಸೇವೆಯನ್ನು ಉಚಿತವಾಗಿ ಒದಗಿಸುತ್ತಿದೆ. ಈ ಸಂಬಂಧ ವೃದ್ಧಾಶ್ರಮಗಳು, ಸರ್ಕಾರೇತರ ಸಂಸ್ಥೆಗಳು, ಸ್ಥಳೀಯರು, ವಿದ್ಯಾರ್ಥಿಗಳು ಹಾಗೂ ಸ್ವಯಂ ಸೇವಕರ ನೆರವು ಪಡೆಯಲಾಗುತ್ತಿದೆ.

ADVERTISEMENT

ಸ್ವಯಂ ಆರೈಕೆ: ವೃದ್ಧಾಶ್ರಮಗಳಲ್ಲಿ ಇರುವವರ ಜತೆಗೆ, 65 ವರ್ಷ ಮೇಲ್ಪಟ್ಟ ಬಡ–ಮಧ್ಯಮ ವರ್ಗದ ಕುಟುಂಬಗಳ ಸದಸ್ಯರೂ ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ವೃದ್ಧಾಶ್ರಮ ಹಾಗೂ ಮನೆಗಳಿಗೆ ಭೇಟಿ ನೀಡುವ ಸಂಸ್ಥೆಯಿಂದ ತರಬೇತಿ ಹೊಂದಿದ ಸ್ವಯಂಸೇವಕರ ತಂಡ, ವೃದ್ಧರಿಗೆ ಸ್ವಯಂ ಆರೈಕೆ ಬಗ್ಗೆ ಮಾಹಿತಿ ಹಾಗೂ ತರಬೇತಿ ಒದಗಿಸುತ್ತದೆ. ವೃದ್ಧಾಶ್ರಮಗಳಲ್ಲಿ ಎಲ್ಲರಿಗೂ ಈ ತರಬೇತಿ ನೀಡಲಾಗುತ್ತದೆ. ಹೆಚ್ಚಿನ ಆರೈಕೆ ಹಾಗೂ ಚಿಕಿತ್ಸೆ ಅಗತ್ಯವಿದ್ದಲ್ಲಿ ಅವರು ಇದ್ದ ಸ್ಥಳಕ್ಕೇ ಮನೋವೈದ್ಯರ ತಂಡವು ಭೇಟಿ ನೀಡಲಿದೆ. 

‘ಈ ಯೋಜನೆಯ ಅನುಷ್ಠಾನಕ್ಕೆ ನಿಮ್ಹಾನ್ಸ್‌ನ ನಿವೃತ್ತ ಮನೋವೈದ್ಯಕೀಯ ತಜ್ಞರಾದ ಡಾ.ಸಿ.ಆರ್. ಚಂದ್ರಶೇಖರ್ ಮತ್ತು ಡಾ. ಶ್ರೀಕಲಾ ಭರತ್ ಅವರು ತಲಾ ₹1.2 ಕೋಟಿ ದೇಣಿಗೆ ನೀಡಿದ್ದಾರೆ. ವೃದ್ಧರನ್ನು ಕಾಡುತ್ತಿರುವ ವಿವಿಧ ಮಾನಸಿಕ ಅನಾರೋಗ್ಯ ಸಮಸ್ಯೆಗಳ ನಿವಾರಣೆಗೆ ಹಾಗೂ ಆರೈಕೆಗೆ ಈ ಯೋಜನೆ ಸಹಕಾರಿಯಾಗಿದೆ. ಸರ್ಕಾರದ ನೆರವಿನ ಜತೆಗೆ ದಾನಿಗಳೂ ಮುಂದೆ ಬಂದಲ್ಲಿ ಯೋಜನೆಯ ಆಶಯ ಸಾಕಾರವಾಗಲಿದೆ’ ಎಂದು ಮಾನಸಿಕ ಆರೋಗ್ಯ ವಿಭಾಗದ ಪ್ರಾಧ್ಯಾಪಕ ಹಾಗೂ ಜಿರಿಯಾಟ್ರಿಕ್ ಸೈಕಿಯಾಟ್ರಿ ಯೂನಿಟ್‌ನ ಮುಖ್ಯಸ್ಥ ಡಾ.ಪಿ.ಟಿ. ಶಿವಕುಮಾರ್ ತಿಳಿಸಿದರು. 

ವೃದ್ಧರ ಮಾನಸಿಕ ಆರೋಗ್ಯ ಚಿಕಿತ್ಸೆಯಲ್ಲಿನ ಅಂತರ ಕಡಿಮೆ ಮಾಡಿ ನಿರಂತರ ಚಿಕಿತ್ಸೆ ಒದಗಿಸುವುದು ಯೋಜನೆಯ ಆಶಯ. ಸ್ವಯಂಸೇವಕರು ಹಾಗೂ ದಾನಿಗಳ ನೆರವು ಅಗತ್ಯ
ಡಾ.ಪಿ.ಟಿ. ಶಿವಕುಮಾರ್ ಜಿರಿಯಾಟ್ರಿಕ್ ಸೈಕಿಯಾಟ್ರಿ ಯೂನಿಟ್‌ನ ಮುಖ್ಯಸ್ಥ ನಿಮ್ಹಾನ್ಸ್

ಸ್ವಯಂಸೇವಕರಿಗೆ ತರಬೇತಿ

ಈ ಯೋಜನೆಯಡಿ ವೃದ್ಧರ ಮಾನಸಿಕ ಆರೋಗ್ಯ ನಿರ್ವಹಣೆಗೆ ಸ್ವಯಂ ಸೇವಕರನ್ನು ಬಳಸಿಕೊಳ್ಳಲಾಗುತ್ತಿದೆ. ಎಲ್ಲ ವಯೋಮಾನದವರು ಸ್ವಯಂ ಸೇವಕರಾಗಿ ಪಾಲ್ಗೊಳ್ಳಬಹುದಾಗಿದೆ. ಆಸಕ್ತಿ ಇರುವವರಿಗೆ ನಿಮ್ಹಾನ್ಸ್‌ನಲ್ಲಿ ಹಾಗೂ ಆನ್‌ಲೈನ್ ವೇದಿಕೆ ಮೂಲಕ ಅಗತ್ಯ ತರಬೇತಿ ಒದಗಿಸಲಾಗುತ್ತದೆ. 30 ಗಂಟೆಗಳ ತರಬೇತಿಯನ್ನು ಮೂರು ತಿಂಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ. ಈ ತರಬೇತಿ ಪಡೆದವರು ಮುಂದಿನ ಆರು ತಿಂಗಳು ವೃದ್ಧರಿಗೆ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಆರೈಕೆಯಂತಹ ಕಾರ್ಯಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು. ಬಳಿಕ ಅವರಿಗೆ ಪ್ರಮಾಣಪತ್ರವನ್ನೂ ವಿತರಿಸಲಾಗುತ್ತದೆ.  ಯೋಜನೆಯಡಿ ಮಾನಸಿಕ ಆರೋಗ್ಯ ಸೇವೆ ತರಬೇತಿಗೆ ಸಂಬಂಧಿಸಿದಂತೆ ಮೊ.ಸಂಖ್ಯೆ 9900418922 (ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ ಉಳಿದ ದಿನ ಬೆಳಿಗ್ಗೆ 9ರಿಂದ ಸಂಜೆ 4.30ರ ಅವಧಿಯಲ್ಲಿ) ಸಂಪರ್ಕಿಸಬಹುದಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.