ADVERTISEMENT

ಕಬ್ಬನ್‌ ಪಾರ್ಕ್‌ನಲ್ಲಿ ಹಾರ್ನ್‌ ಮಾಡೀರಿ... ಹುಷಾರ್

ಕಬ್ಬನ್‌ ಪಾರ್ಕ್‌ನಲ್ಲಿ ಇವೆ 16 ನಿಶ್ಶಬ್ದ ವಲಯ *ಒಂದು ತಿಂಗಳವರೆಗೆ ಜಾಗೃತಿ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2022, 19:30 IST
Last Updated 15 ನವೆಂಬರ್ 2022, 19:30 IST
ಕಬ್ಬನ್ ಉದ್ಯಾನದ ಆವರಣದಲ್ಲಿ ‘ನಿಶ್ಶಬ್ದ ವಲಯ’ ಎಂಬ ಫಲಕಗಳನ್ನು ಅಳವಡಿಸುತ್ತಿರುವ ತೋಟಗಾರಿಕೆ ಇಲಾಖೆ ಸಿಬ್ಬಂದಿ
ಕಬ್ಬನ್ ಉದ್ಯಾನದ ಆವರಣದಲ್ಲಿ ‘ನಿಶ್ಶಬ್ದ ವಲಯ’ ಎಂಬ ಫಲಕಗಳನ್ನು ಅಳವಡಿಸುತ್ತಿರುವ ತೋಟಗಾರಿಕೆ ಇಲಾಖೆ ಸಿಬ್ಬಂದಿ   

ಬೆಂಗಳೂರು: ಕಬ್ಬನ್ ಉದ್ಯಾನದ ಆವರಣದಲ್ಲಿ ಸಂಚರಿಸುವಾಗ ಹಾರ್ನ್‌ ಮಾಡದಿರಿ. ಇಲ್ಲದಿದ್ದರೆ ದಂಡ ತೆರಬೇಕಾದೀತು. ಉದ್ಯಾನವನ್ನು 2020ರಲ್ಲಿ ನಿಶ್ಶಬ್ದ ವಲಯವನ್ನಾಗಿ ಘೋಷಿಸಿಲಾಗಿತ್ತು. ಆದರೆ ಕೋವಿಡ್‌ ಕಾರಣದಿಂದ ಗಂಭೀರವಾಗಿ ಪರಿಗಣಿಸಿರಲಿಲ್ಲ. ತೋಟಗಾರಿಕೆ ಇಲಾಖೆ ಈಗ ಅನುಷ್ಠಾನಗೊಳಿಸುತ್ತಿದೆ.

‘ಕಬ್ಬನ್‌ ಉದ್ಯಾನದ ಎಂಟು ಪ್ರವೇಶ ದ್ವಾರಗಳು, ಗ್ರಂಥಾಲಯ ಸೇರಿ 16 ನಿಗದಿತ ಸ್ಥಳಗಳಲ್ಲಿ ನಿಶ್ಶಬ್ದ ವಲಯ ಎಂಬ ಫಲಕಗಳನ್ನು ಅಳವಡಿಸುವ ಕಾರ್ಯ ಭರದಿಂದ ಸಾಗಿದೆ. ಒಂದು ತಿಂಗಳವರೆಗೂ ಈ ಬಗ್ಗೆ ಜಾಗೃತಿ ಮೂಡಿಸಲಾಗುವುದು. ನಂತರ ವಾಹನ ಸವಾರರು ಈ ಸ್ಥಳಗಳಲ್ಲಿ ಹಾರ್ನ್‌ ಮಾಡಿ, ನಿಯಮ ಉಲ್ಲಂಘಿಸಿದರೆ ದಂಡ ಹಾಕಲಾಗುವುದು’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ (ಕಬ್ಬನ್‌ ಉದ್ಯಾನ) ಎಚ್.ಟಿ. ಬಾಲಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಬ್ಬನ್ ಉದ್ಯಾನಕ್ಕೆ ಬರುವ ವಾಯುವಿಹಾರಿಗಳು, ಪ್ರವಾಸಿಗರು, ಕುಟುಂಬ ಸಮೇತರಾಗಿ ಉದ್ಯಾನಕ್ಕೆ ಬರುವವರು ಮತ್ತು ವಿಶೇಷವಾಗಿ ಪಕ್ಷಿಗಳಿಗೆ ಹಾರ್ನ್‌ ಶಬ್ದದಿಂದ ಕಿರಿಕಿರಿ ಉಂಟಾಗುತ್ತಿತ್ತು. ಸಾರ್ವಜನಿಕರಿಂದಲೂ ಅನೇಕ ದೂರಗಳು ಬಂದಿದ್ದು, ನಗರ ಸಂಚಾರ ಪೊಲೀಸರೊಂದಿಗೆ ಸಭೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಉದ್ಯಾನ ಹಲವು ಬಗೆಯ ಪ್ರಾಣಿ–ಪಕ್ಷಿ ಸಂಕುಲಗಳ ಆಶ್ರಯ ತಾಣವಾಗಿದೆ. ವಾಹನಗಳ ಹಾರ್ನ್‌ನ ಕರ್ಕಶ ಶಬ್ದದಿಂದ ಪಕ್ಷಿಗಳು ಭಯಗೊಂಡು ಹಾರಿ ಹೋಗುತ್ತವೆ. ಆದ್ದರಿಂದ ಉದ್ಯಾನದ ಕೆಲ ಪ್ರದೇಶಗಳಲ್ಲಿ ನಿಶ್ಶಬ್ದ ವಾತಾವರಣ ನಿರ್ಮಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಉದ್ಯಾನದ 16 ಸ್ಥಳಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಸೂಚನಾ ಫಲಕಗಳನ್ನು ಅಳವಡಿಸುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.