ADVERTISEMENT

ಅಲೆಮಾರಿ ಮೀಸಲಾತಿಗೆ ಹೋರಾಟ ಸಮಿತಿ ಸಭೆ: ರಾಹುಲ್‌ ಗಾಂಧಿ ಭೇಟಿಗೆ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 16:17 IST
Last Updated 26 ಆಗಸ್ಟ್ 2025, 16:17 IST
<div class="paragraphs"><p>ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ ಶಾಸಕರ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ‘ಸಮಾಲೋಚನಾ ಸಭೆ’ಯಲ್ಲಿ ರಾಜಪ್ಪ ದಳವಾಯಿ ಮಾತನಾಡಿದರು  </p></div>

ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ ಶಾಸಕರ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ‘ಸಮಾಲೋಚನಾ ಸಭೆ’ಯಲ್ಲಿ ರಾಜಪ್ಪ ದಳವಾಯಿ ಮಾತನಾಡಿದರು

   

ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಅಲೆಮಾರಿ ಸಮುದಾಯಗಳಿಗೆ ಶೇಕಡ 1ರಷ್ಟು ಪ್ರತ್ಯೇಕ ಮೀಸಲು ಕೊಡಿಸಲು ಖುದ್ದು ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಡೋಣ. ಅಗತ್ಯ ಬಿದ್ದರೆ ಕಾನೂನು ಹೋರಾಟದ ಕುರಿತು ಪರಿಶೀಲನೆ ಮಾಡೋಣ’ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.

ADVERTISEMENT

ಶಾಸಕರ ಭವನದಲ್ಲಿ ಮಂಗಳವಾರ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ ಆಯೋಜಿಸಿದ್ದ ಸಭೆಯಲ್ಲಿ ವಿವಿಧ ಸಮುದಾಯಗಳ ಪ್ರಮುಖರು, ಸಾಹಿತಿಗಳು, ಹೋರಾಟಗಾರರು ಚರ್ಚಿಸಿದರು.

ನಾಗಮೋಹನದಾಸ್‌ ಆಯೋಗದ ವರದಿ ಅನುಸಾರ ಅಸ್ಪೃಶ್ಯ ಅಲೆಮಾರಿಗಳಿಗೆ ಶೇ 1ರಷ್ಟು ಪ್ರತ್ಯೇಕ ಮೀಸಲು ನೀಡಬೇಕು. ತೆಲಂಗಾಣ ಮಾದರಿ ಮೀಸಲು ಬಿಂದು ಅನುಸರಿಸಬೇಕು. ಅಲೆಮಾರಿ ಅಭಿವೃದ್ದಿ ನಿಗಮದಲ್ಲಿ 49 ಅತಿಸೂಕ್ಷ್ಮ ಸಮುದಾಯಗಳಿಗೆ ಮಾತ್ರ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸುವ ನಿರ್ಣಯ ಕೈಗೊಳ್ಳಲಾಯಿತು.

ಮೀಸಲು ಪ್ರಮಾಣವನ್ನು ಶೇ 5.5ರಂತೆ ಎರಡೂ ಕಡೆಯವರಿಗೆ ನೀಡಿ, ಉಳಿಕೆ ಶೇ 1ರಷ್ಟನ್ನು ಅಲೆಮಾರಿಗಳಿಗೆ, ಇನ್ನೂ ಶೇ 1ರಷ್ಟನ್ನು ಉಳಿದ 29 ಜಾತಿಗಳಿಗೆ ಹಂಚುವ ಸೂತ್ರವನ್ನು ರೂಪಿಸುವುದು ಒಳ್ಳೆಯದು ಎನ್ನುವ ಸಲಹೆಗೂ ಸಹಮತ ವ್ಯಕ್ತವಾಯಿತು.

‘ಮೂರು ದಶಕದ ನಿರಂತರ ಹೋರಾಟದ ನಂತರ ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ಜಾರಿ ಮಾಡಿದ್ದು ಸ್ವಾಗತಾರ್ಹ. ಆದರೆ, ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲು ಕೊಟ್ಟಿದ್ದರೆ ಎಲ್ಲರಿಗೂ ಸಮಾಧಾನವಾಗೋದು. ಸರ್ಕಾರದ ಸೌಲಭ್ಯದಿಂದ ವಂಚಿತ ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲು ಸಿಗದೇ ಇದ್ದರೆ ಈಗಿನ ಪ್ರಯತ್ನಕ್ಕೆ ಗೌರವ ಬರುವುದಿಲ್ಲ. ಪಕ್ಷಾತೀತವಾಗಿ ಹೋರಾಟ ರೂಪಿಸಿ ಅವರಿಗೂ ನ್ಯಾಯ ಕಲ್ಪಿಸೋಣ’ ಎಂದು ಹಲವರು ಸಲಹೆ ನೀಡಿದರು.

‘ಸದ್ಯವೇ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮತ್ತೊಮ್ಮೆ ಮನವಿ ಮಾಡೋಣ. ರಾಹುಲ್‌ ಗಾಂಧಿ ಅವರಿಗೂ ಪರಿಸ್ಥಿತಿ ಮನವರಿಕೆ ಮಾಡಿಕೊಡೋಣ. ಕಾನೂನು ಹೋರಾಟವನ್ನೂ ಮಾಡೋಣ. ಜನಾಭಿಪ್ರಾಯ ರೂಪಿಸುತ್ತಲೇ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನ ನಿಲ್ಲಿಸದಿರೋಣ’ ಎಂದು ಕೆಲವರು ಅಭಿಪ್ರಾಯ ಸೂಚಿಸಿದರು.

ಒಳ ಮೀಸಲು ಹೋರಾಟಗಾರ ಎಸ್‌.ಮಾರೆಪ್ಪ, ವಡ್ಡಗೆರೆ ನಾಗರಾಜಯ್ಯ, ಬಸವರಾಜ್‌ ಕೌತಾಳ್‌, ಎ.ಎಸ್‌.ಪ್ರಭಾಕರ್‌, ನಿರಂಜನಾರಾಧ್ಯ, ರಹಮತ್‌ ತರೀಕೆರೆ, ಹುಲಿಕುಂಟೆ ಮೂರ್ತಿ, ಕುರುವ ಬಸವರಾಜ್‌, ಮೈತ್ರೇಯಿ, ಕೆ.ಷರೀಫಾ, ಶ್ರೀಪಾದಭಟ್‌, ಲೋಕೇಶ್‌ ಸಹಿತ ಹಲವರು ಇದ್ದರು.

ಸಂಪುಟದ ತೀರ್ಮಾನವೇ ಅಂತಿಮವಲ್ಲ. ಈಗಲೇ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು ಮಾತುಕತೆ ಮೂಲಕ ಗೊಂದಲ ಬಗೆಹರಿಸಿಕೊಳ್ಳದಿದ್ದರೆ ಮತ್ತಷ್ಟು ಅನ್ಯಾಯಕ್ಕೆ ಒಳಗಾಗಬೇಕಾಗುತ್ತದೆ.
ರಾಜಪ್ಪ ದಳವಾಯಿ ಸಾಹಿತಿ
ಅಲೆಮಾರಿಗಳಿಗೆ ಸೌಲಭ್ಯ ಸಿಗುವವರೆಗೂ ಸಂಭ್ರಮ ಆಚರಿಸುವುದಿಲ್ಲ ಎನ್ನುವ ಮಾದಿಗ ಸಮುದಾಯದ ನಿಲುವು ಸ್ವಾಗತಾರ್ಹ. ಭಾವನಾತ್ಮಕ ಹೋರಾಟಕ್ಕಿಂತ ಹಕ್ಕಿನ ಭಾಷೆಯಲ್ಲಿಯೇ ಇದನ್ನು ಕೇಳಬೇಕು
ಡಾ.ಎಚ್‌.ವಿ.ವಾಸು ಚಿಂತಕ
ತಮಿಳುನಾಡು ಆಂಧ್ರಪ್ರದೇಶ ತೆಲಂಗಾಣದಲ್ಲಿ ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲು ನೀಡಿರುವಾಗ ಕರ್ನಾಟಕದಲ್ಲಿ ಇತರ ಸಮುದಾಯಗಳಲ್ಲಿಯೇ ಸೇರಿಸಬಾರದಿತ್ತು. ಮಾದಿಗ ಸಮುದಾಯ ಪಾಲು ಬಿಟ್ಟು ಕೊಡಲು ಸಿದ್ದವಿದ್ದು ಇತರರನ್ನು ಮನ ಒಲಿಸಲಿ.
ದಾಸನೂರು ಕೂಸಣ್ಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.