ADVERTISEMENT

ಕಾಂಗ್ರೆಸ್ ಪ್ರತಿಭಟನೆ; ಪ್ರಧಾನಿ ಅಣಕು ಶವಯಾತ್ರೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2018, 20:24 IST
Last Updated 8 ನವೆಂಬರ್ 2018, 20:24 IST
ನೋಟು ಅಮಾನ್ಯೀಕರಣದ ವಿರೋಧಿ ದಿನಾಚರಣೆ ಪ್ರಯುಕ್ತ ನಗರದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎದುರು ಗುರುವಾರ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ ಸಮಿತಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದರು  –ಪ್ರಜಾವಾಣಿ ಚಿತ್ರ
ನೋಟು ಅಮಾನ್ಯೀಕರಣದ ವಿರೋಧಿ ದಿನಾಚರಣೆ ಪ್ರಯುಕ್ತ ನಗರದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎದುರು ಗುರುವಾರ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ ಸಮಿತಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಹಳೇ ನೋಟು ರದ್ದು ಮಾಡಿ ಎರಡು ವರ್ಷವಾದ ದಿನವನ್ನು ಕರಾಳ ದಿನವನ್ನಾಗಿ ಗುರುವಾರ ಆಚರಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು, ಪ್ರಧಾನಿ ನರೇಂದ್ರ ಮೋದಿಯವರ ಅಣಕು ಶವಯಾತ್ರೆ ನಡೆಸಿ ಪ್ರತಿಭಟನೆ ನಡೆಸಿದರು.

ಯುವ ಕಾಂಗ್ರೆಸ್‍ ಅಧ್ಯಕ್ಷ ಬಸನಗೌಡ ಬಾದರ್ಲಿ ನೇತೃತ್ವದಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ನಗರದ ಕೆ.ಆರ್‌.ವೃತ್ತದಿಂದ ನೃಪತುಂಗ ರಸ್ತೆಯಲ್ಲಿರುವ ರಿಸರ್ವ್‌ ಬ್ಯಾಂಕ್ ಆಫ್ ಇಂಡಿಯಾ ಕಚೇರಿವರೆಗೆ ಅಣಕು ಶವದ ಮೆರವಣಿಗೆ ನಡೆಯಿತು. ಕಚೇರಿ ಎದುರೇ ಅಣಕು ಶವ ಸುಡಲು ಮುಂದಾದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು, ಸಂಜೆಯ ಬಿಡುಗಡೆ ಮಾಡಿದರು.

‘ಕೇಂದ್ರ ಸರ್ಕಾರವು ಹಳೇ ನೋಟು ರದ್ದು ಮಾಡಿದ್ದರಿಂದ ಬಡವರು ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ದೇಶದಾದ್ಯಂತ ನೂರಾರು ಮಂದಿ, ಹಣಕ್ಕಾಗಿ ಎಟಿಎಂ, ಬ್ಯಾಂಕ್‍ ಮುಂದೆ ನಿಂತು ಅಸ್ವಸ್ಥಗೊಂಡು ಸಾಯುವಂತಾಯಿತು. ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಕೇಂದ್ರ ಸರ್ಕಾರ ನೋಟು ರದ್ದು ಮಾಡಿದ್ದೇ ಇದಕ್ಕೆಲ್ಲ ಕಾರಣ’ ಎಂದು ಬಸನಗೌಡ ಬಾದರ್ಲಿ ತಿಳಿಸಿದರು.

ADVERTISEMENT

‘ಕಪ್ಪು ಹಣ ತರುವುದಾಗಿಲೋಕಸಭಾ ಚುನಾವಣೆಗೂ ಮುನ್ನ ನರೇಂದ್ರ ಮೋದಿ ಭರವಸೆ ನೀಡಿದ್ದರು. ಅದನ್ನು ಈಡೇರಿಸುವಲ್ಲಿ ಅವರು ಸೋತಿದ್ದಾರೆ. ಜೊತೆಗೆ, ಜಿಎಸ್‍ಟಿ ಹೆಸರಲ್ಲಿ ಜನರಿಗೆ ಭಾರವಾದ ತೆರಿಗೆ ಹೊರಿಸಲಾಗಿದೆ. ಜನ ಸಾಮಾನ್ಯರಿಗೆ ಮೇಲಿಂದ ಮೇಲೆ ತೊಂದರೆ ನೀಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.