ADVERTISEMENT

ಹಲ್ಲೆ ಆರೋಪ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 15:34 IST
Last Updated 16 ಜುಲೈ 2025, 15:34 IST
ಕೆ.ಎಂ. ಗಾಯಿತ್ರಿ
ಕೆ.ಎಂ. ಗಾಯಿತ್ರಿ   

ಬೆಂಗಳೂರು: ಕಲಾವಿದರ ಮೇಲೆ ಹಲ್ಲೆ ಮತ್ತು ಜಾತಿ ನಿಂದನೆ ಆರೋಪಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ. ಗಾಯಿತ್ರಿ ಅವರಿಗೆ ಇಲಾಖೆ ಕಾರ್ಯದರ್ಶಿ ವೆಂಕಟೇಶ್ ಎಂ.ವಿ. ನೋಟಿಸ್ ನೀಡಿದ್ದಾರೆ.

ಕಲಾವಿದರು ತಮ್ಮನ್ನು ಭೇಟಿ ಮಾಡುವ ಸಂದರ್ಭದಲ್ಲಿ ಜಾತಿ ನಿಂದನೆ ಮಾಡಿ, ಹಲ್ಲೆ ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಕಲಾವಿದ ಜೋಗಿಲ ಸಿದ್ಧರಾಜು ಅವರು ಎಸ್.ಜೆ. ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿರುವ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ತಿಳಿಸಿದ್ದಾರೆ.

ಪರಿಶಿಷ್ಟ ಜಾತಿ ಉಪಯೋಜನೆಯ ಲೆಕ್ಕ ಶೀರ್ಷಿಕೆಯಡಿ ಧನಸಹಾಯ ಯೋಜನೆ ಮತ್ತು ಪ್ರಾಯೋಜನೆಗೆ ಹಂಚಿಕೆ ಮಾಡಿ, ಲಭ್ಯವಿರುವ ₹1.59 ಕೋಟಿಯನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬ್ಯಾಂಕ್ ಖಾತೆಯಲ್ಲಿ ಕಾಯ್ದಿರಿಸಲಾಗಿದೆ. ಈ ಅನುದಾನವನ್ನು ಪ್ರಾಯೋಜನೆಗೆ ಬಳಸಲು ಅನುಮತಿ ನೀಡಲಾಗಿದ್ದರೂ ಬಳಕೆ ಮಾಡದಿರುವ ಬಗ್ಗೆ ಪಶ್ನಿಸಿದ್ದಾರೆ. 

ADVERTISEMENT

2025–26ನೇ ಸಾಲಿಗೆ ಇಲಾಖೆಯ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ₹ 2.50 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಅನುದಾನದಲ್ಲಿ ಅನುಷ್ಠಾನ ಮಾಡಲಾದ ಯೋಜನೆ ಮತ್ತು ಕಾರ್ಯಕ್ರಮಗಳ ವಿವರ ಸಲ್ಲಿಸುವಂತೆ ತಿಳಿಸಿದ್ದಾರೆ. 

ಅನುದಾನ ಬಿಡುಗಡೆ

 ಪರಿಶಿಷ್ಟ ಜಾತಿ ಉಪಯೋಜನೆಯಡಿ 2022–23 2023–24 ಹಾಗೂ 2024–25ನೇ ಸಾಲಿಗೆ ಕಲಾ ತಂಡಗಳಿಗೆ ಬಾಕಿ ಇರುವ ಗೌರವ ಸಂಭಾವನೆ ಪಾವತಿಗೆ ಸಂಬಂಧಿಸಿದಂತೆ ₹ 1.29 ಕೋಟಿ ಅನುದಾನವನ್ನು ಬಿಡುಗಡೆ ಮಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ. ಗಾಯಿತ್ರಿ ಆದೇಶ ಹೊರಡಿಸಿದ್ದಾರೆ. ಪರಿಶಿಷ್ಟ ಪಂಗಡ ಉಪಯೋಜನೆಯಡಿಯೂ ₹ 40.10 ಲಕ್ಷ ಅನುದಾನವನ್ನು ಬಿಡುಗಡೆಗೊಳಿಸಿ ಆದೇಶಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.