ADVERTISEMENT

ರಾಜಕಾಲುವೆ ಒತ್ತುವರಿ ತೆರವಿಗೆ ಸೂಚನೆ: ಕಾರ್ಯಾಚರಣೆಗೆ ತುಷಾರ್‌ ಗಿರಿನಾಥ್ ತಾಕೀತು

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2023, 15:55 IST
Last Updated 1 ಡಿಸೆಂಬರ್ 2023, 15:55 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕೂಡಲೇ ಆರಂಭಿಸಬೇಕು ಎಂದು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೂಚಿಸಿದರು.

ಒತ್ತುವರಿ ಮಾಡಿಕೊಂಡಿರುವ ಸ್ಥಳಗಳನ್ನು ಭೂಮಾಪಕರು ಗುರುತು ಮಾಡಿದ್ದು, ತಹಶೀಲ್ದಾರ್ ಅವರು ಜಾರಿ ಮಾಡಿರುವ ಆದೇಶದಂತೆ ಒತ್ತುವರಿಯನ್ನು ತ್ವರಿತಗತಿಯಲ್ಲಿ ತೆರವುಗೊಳಿಸಬೇಕು ಎಂದು ಶುಕ್ರವಾರ ನಡೆದ ಸಭೆಯಲ್ಲಿ ಬೃಹತ್‌ ನೀರುಗಾಲುವೆ ವಿಭಾಗದ ಮುಖ್ಯ ಎಂಜಿನಿಯರ್‌ ಆಗಿರುವ ಪ್ರಧಾನ ಎಂಜಿನಿಯರ್‌ ಬಿ.ಎಸ್‌. ಪ್ರಹ್ಲಾದ್‌ ಅವರಿಗೆ ಸೂಚಿಸಿದರು.

ADVERTISEMENT

ರಾಜಕಾಲುವೆ ಒತ್ತುವರಿ ಪ್ರಕರಣಗಳಲ್ಲಿ ತಹಶೀಲ್ದಾರ್ ಅವರು ಆದೇಶ ನೀಡದಿದ್ದರೆ ಅವುಗಳನ್ನು ಪರಿಶೀಲಿಸಿ ಆದೇಶ ನೀಡಬೇಕು ಎಂದು ತಹಶೀಲ್ದಾರರಿಗೆ ಸೂಚಿಸಿದರು.

ನಗರದ ಎಲ್ಲಾ ವಲಯಗಳಲ್ಲಿಯೂ ಒತ್ತುವರಿ ತೆರವು ಕಾಯಾಚರಣೆ ನಡೆಸಬೇಕು. ಈ ಸಂದರ್ಭದಲ್ಲಿ ಪೊಲೀಸ್‌ ಸಿಬ್ಬಂದಿಯ ನೆರವು ಪಡೆದುಕೊಳ್ಳಬೇಕು ಎಂದು ಹೇಳಿದರು.

ಗ್ರಾಮ ನಕ್ಷೆ ಮತ್ತು ಟಿಪ್ಪಣಿಗಳ ಅನ್ವಯ ಯಾವುದೇ ವ್ಯತ್ಯಾಸ ಮಾಡದೆ ಸಂಬಂಧಪಟ್ಟ ಭೂಮಾಪಕರು ನಕ್ಷೆಯನ್ನು ಸಿದ್ಧಪಡಿಸಬೇಕು. ತಹಶೀಲ್ದಾರ್ ಅದಕ್ಕೆ ಆದೇಶಗಳನ್ನು ಜಾರಿಮಾಡಬೇಕು. ಅಧಿಕಾರಿಗಳು ಒತ್ತುವರಿ ತೆರವುಗೊಳಿಸಿ ಸಮರ್ಪಕ ಕಾಲುವೆ ನಿರ್ಮಾಣ ಮಾಡಬೇಕು. ಜೊತೆಗೆ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ನಿಗದಿತ ಸಮಯದಲ್ಲಿ ಇತ್ಯರ್ಥಪಡಿಸಿಕೊಂಡು ಒತ್ತುವರಿ ತೆರವಿಗೆ ಸೂಚನೆ ನೀಡಿದರು.

ವರದಿಯಂತೆ ಕ್ರಮ: ನಗರದಲ್ಲಿ ರಾಜಕಾಲುವೆ ಹಾಗೂ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಹೈಕೋರ್ಟ್‌ಗೆ ವರದಿ ಸಲ್ಲಿಸಲಾಗಿದೆ. ಅದರಂತೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ನಗರದಲ್ಲಿ ಹೊಸ ಒತ್ತುವರಿಗಳು ಸೇರಿದಂತೆ 3,147 ಒತ್ತುವರಿಗಳನ್ನು ರಾಜಕಾಲುವೆಯಲ್ಲಿ ಗುರುತಿಸಲಾಗಿದ್ದು, 2247 ಸ್ಥಳಗಳನ್ನು ಇದುವರೆಗೆ ತೆರವುಗೊಳಿಸಲಾಗಿದೆ. ಇನ್ನು 900 ಒತ್ತುವರಿ ತೆರವುಗೊಳಿಸಬೇಕಾಗಿದೆ. ಈ ಪೈಕಿ 130 ಒತ್ತುವರಿ ಪ್ರಕರಣಗಳು ನ್ಯಾಯಾಲಯದಲ್ಲಿವೆ. 401 ಪ್ರಕರಣಗಳಲ್ಲಿ ಆದೇಶಗಳನ್ನು ಜಾರಿಗೊಳಿಸುವ ಹಂತದಲ್ಲಿದೆ. ಇನ್ನು 370 ಒತ್ತುವರಿಗಳಿಗೆ ತಹಶೀಲ್ದಾರ್‌ ಆದೇಶಗಳನ್ನು ಜಾರಿಗೊಳಿಸಲಾಗಿದ್ದು, ತೆರವು ಕಾರ್ಯಾಚರಣೆಯನ್ನು ನಡೆಸಬೇಕಿದೆ ಎಂದು ರಾಜಕಾಲುವೆ ವಿಭಾಗದ ಅಧಿಕಾರಿಗಳು ಸಭೆಯಲ್ಲಿ ಹೇಳಿದರು.

ರಸ್ತೆ ಗುಂಡಿ ಮುಚ್ಚಿ: ಮುಖ್ಯ ಹಾಗೂ ಉಪಮುಖ್ಯ ರಸ್ತೆಗಳಲ್ಲಿನ ಗುಂಡಿಗಳನ್ನು ತ್ವರಿತವಾಗಿ ಮುಚ್ಚಬೇಕು. ವಾರ್ಡ್‌ ವ್ಯಾಪ್ತಿಯ ರಸ್ತೆಗಳಲ್ಲೂ ಗುಂಡಿ ಮುಚ್ಚಬೇಕು ಎಂದು ವಲಯ ಎಂಜಿನಿಯರ್‌ಗಳಿಗೆ ಆದೇಶಿಸಿದರು.

ವಿಶೇಷ ಆಯುಕ್ತ ಡಾ. ಕೆ. ಹರೀಶ್ ಕುಮಾರ್, ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್, ವಲಯ ಆಯುಕ್ತರು, ವಕಯ ಜಂಟಿ ಆಯುಕ್ತರು, ಬೆಂಗಳೂರು ನಗರ ಜಿಲ್ಲೆಯ ತಹಶೀಲ್ದಾರ್‌ಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.