ADVERTISEMENT

‘ವಿದ್ಯಾರ್ಥಿಗಳಿಂದ 17ಕ್ಕೆ ರಾಜ್ಯಮಟ್ಟದ ಬಂದ್‌’

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 21:55 IST
Last Updated 5 ಡಿಸೆಂಬರ್ 2022, 21:55 IST

ಬೆಂಗಳೂರು: ‘ವಿದ್ಯಾರ್ಥಿ ವೇತನ, ಸಾರಿಗೆ ವ್ಯವಸ್ಥೆ, ಫಲಿತಾಂಶ ವಿಳಂಬ, ಉಚಿತ ಬಸ್ ಪಾಸ್ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇದೇ 17ರಂದು ವಿದ್ಯಾರ್ಥಿಗಳು ರಾಜ್ಯ ಮಟ್ಟದ ಬಂದ್‌ಗೆ ಕರೆ ನೀಡಿದ್ದು, ಈ ಹೋರಾಟದ ನೇತೃತ್ವವನ್ನು ಎನ್ಎಸ್‌ಯುಐ ವಹಿಸಲಿದೆ’ ಎಂದು ಎನ್ಎಸ್‌ಯುಐ ರಾಜ್ಯ ಘಟಕದ ಅಧ್ಯಕ್ಷ ಕೀರ್ತಿ ಗಣೇಶ್ ತಿಳಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಹಿಂದೆ ಎಲ್ಲ ಸರ್ಕಾರಗಳು ವಿದ್ಯಾರ್ಥಿ ವೇತನ, ಬ್ಯಾಂಕ್ ಸಾಲ, ಸಾರಿಗೆ ವ್ಯವಸ್ಥೆ, ಬಸ್ ಪಾಸ್ ನೀಡುತ್ತಿದ್ದವು. ಆದರೆ, ಈಗಿನ ಸರ್ಕಾರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡದಂತೆ ನೀತಿ ರೂಪಿಸುತ್ತಿದೆ’ ಎಂದು ದೂರಿದರು.

‘ಪರೀಕ್ಷೆ ನಡೆದು ಒಂದು ವರ್ಷವಾದರೂ ಫಲಿತಾಂಶ ನೀಡಲು ವಿಶ್ವವಿದ್ಯಾಲಯಗಳು ತಯಾರಿಲ್ಲ. ವಿದ್ಯಾರ್ಥಿ ವೇತನ ವಿಚಾರಕ್ಕೆ ಬಂದರೆ, ಕೋವಿಡ್ ನಂತರವೂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿಲ್ಲ. ಸುಮಾರು 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿಲ್ಲ. ಈ ಸಮಸ್ಯೆಯಿಂದ ವಿದ್ಯಾರ್ಥಿಗಳು ಶಿಕ್ಷಣ ನಿಲ್ಲಿಸಿ ಕೆಲಸಕ್ಕೆ ಹೋಗುತ್ತಿದ್ದಾರೆ’ ಎಂದು ಅವರು ಹೇಳಿದರು.

ADVERTISEMENT

‘ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಸರ್ಕಾರ, ವಿಶ್ವವಿದ್ಯಾಲಯಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಹೀಗಾಗಿ, ರಾಜ್ಯದ ಎಲ್ಲ ವಿದ್ಯಾರ್ಥಿಗಳ ಅಭಿಪ್ರಾಯ ಪಡೆದು ಬಂದ್‌ಗೆ ಕರೆ ನೀಡಲಾಗುತ್ತಿದೆ’ ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ಎನ್ಎಸ್‌ಯುಐ ಅಧ್ಯಕ್ಷ ಲಕ್ಷ್ಯರಾಜ್ ಮಾತನಾಡಿ, ‘ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು ಸಮಯಕ್ಕೆ ಸರಿಯಾಗಿ ಪರೀಕ್ಷೆ ಫಲಿತಾಂಶ ನೀಡಬೇಕು. ಸರ್ಕಾರಿ ಕಾಲೇಜುಗಳಲ್ಲಿ ಶುಲ್ಕ ಏರಿಕೆ ಮಾಡಲಾಗಿದ್ದು, ಅದನ್ನು ಸರಿಪಡಿಸಬೇಕು’ ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.