ಯಲಹಂಕ: ಗ್ರಾಮ ಸಭೆಗಳಿಗೆ ಬಹುತೇಕ ಇಲಾಖೆಗಳ ಹಿರಿಯ ಅಧಿಕಾರಿಗಳು ಗೈರಾಗಿ, ಕಿರಿಯ ಹಾಗೂ ಸಹಾಯಕ ಅಧಿಕಾರಿಗಳನ್ನು ಕಳುಹಿಸುವ ಪ್ರವೃತ್ತಿ ಹೆಚ್ಚಾಗಿದೆ. ಇದರಿಂದ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತಿಲ್ಲ ಎಂದು ಮಾರೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ರಾಹುಲ್ ಹೇಳಿದರು.
ಬ್ಯಾಟರಾಯನಪುರ ಕ್ಷೇತ್ರದ ಮಾರೇನಹಳ್ಳಿ ಗ್ರಾಮ ಪಂಚಾಯಿತಿ ಆಯೋಜಿಸಿದ್ದ 2025-26ನೇ ಸಾಲಿನ ಮೊದಲನೇ ಸುತ್ತಿನ ಗ್ರಾಮಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಗೈರಾಗುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರೂ ಗ್ರಾಮಸಭೆಯಲ್ಲಿ ಪಾಲ್ಗೊಳ್ಳುವುದರಿಂದ ಹಲವಾರು ಸಮಸ್ಯೆಗಳು ಸ್ಥಳದಲ್ಲಿಯೇ ಬಗೆಹರಿಸಿಕೊಳ್ಳಲು ಸಾಧ್ಯ. ಅಲ್ಲದೇ ಪಂಚಾಯಿತಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿಯೂ ದೊರೆಯಲಿದೆ ಎಂದರು.
ಸವಲತ್ತುಗಳ ವಿತರಣೆ: ಫಲಾನುಭವಿಗಳಿಗೆ ಹಕ್ಕುಪತ್ರ, ಭಾಗ್ಯಲಕ್ಷ್ಮಿ ಬಾಂಡ್ ಆದೇಶಪತ್ರ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸರ್ಕಾರಿ ಶಾಲೆಗಳಿಗೆ ರೌಂಡ್ ಟೇಬಲ್, ಗೋದ್ರೇಜ್ ಬೀರು, ಧ್ವನಿವರ್ಧಕ, ಅಂಗನವಾಡಿ ಕೇಂದ್ರಗಳಿಗೆ ಸ್ಮಾರ್ಟ್ ಟಿವಿ, ಕೇರಂ ಬೋರ್ಡ್ ಇನ್ನಿತರ ಪರಿಕರಗಳನ್ನು ವಿತರಿಸಲಾಯಿತು.
ಪಂಚಾಯಿತಿ ವತಿಯಿಂದ ನಿರ್ಮಿಸಲಾಗಿರುವ ಸಭಾಂಗಣವನ್ನು ಇದೇ ವೇಳೆ ಉದ್ಘಾಟಿಸಲಾಯಿತು.
ಪಂಚಾಯಿತಿ ಉಪಾಧ್ಯಕ್ಷೆ ಜ್ಯೋತಿ, ಮಾಜಿ ಅಧ್ಯಕ್ಷರಾದ ವಿ.ನಂಜೇಗೌಡ, ಪ್ರೇಮ, ಸದಸ್ಯರಾದ ನಾರಾಯಣಸ್ವಾಮಿ, ಕೃಷ್ಣಪ್ಪ, ಗೀತಾ ಆನಂದ ಕುಮಾರ್, ಪಿಡಿಒ ಸುಮಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.