ADVERTISEMENT

ಎರಡು ತಾಸು ನಿದ್ರೆ ಮಾಡಿದರೆ ಹೆಚ್ಚು! ಅಧಿಕಾರಿಗಳ ನಿದ್ದೆಗೆಡಿಸಿದ ಕೋವಿಡ್‌

ಅಧಿಕಾರಿಗಳ ನಿದ್ದೆಗೆಡಿಸಿದ ಕೋವಿಡ್‌ * ರಾತ್ರಿ ವೇಳೆಯೂ ಸತತ ಕರೆಗಳು

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 20:21 IST
Last Updated 21 ಏಪ್ರಿಲ್ 2021, 20:21 IST
   

ಬೆಂಗಳೂರು: ಕೋವಿಡ್‌ ಎರಡನೇ ಅಲೆ ಬಿಬಿಎಂಪಿ ಅಧಿಕಾರಿಗಳನ್ನು ಅಕ್ಷರಶಃ ನಿದ್ದೆಗೆಡಿಸಿದೆ. ಕೋವಿಡ್‌ ಪ್ರಕರಣಗಳ ಹೆಚ್ಚಳದಿಂದ ಆಸ್ಪತ್ರೆಗಳಲ್ಲಿ ಐಸಿಯು ಅಥವಾ ಆಮ್ಲಜನಕ ಪೂರಣದ ವ್ಯವಸ್ಥೆ ಇರುವ ಹಾಸಿಗೆಗಳನ್ನು ಒದಗಿಸುವಂತೆ ಕೋರಿ ಸೋಂಕಿತರ ಬಂಧುಗಳು, ಜನಪ್ರತಿನಿಧಿಗಳು, ಪಾಲಿಕೆಯ ಮಾಜಿ ಸದಸ್ಯರು ಹಾಗೂ ಇತರ ಕೆಲವು ಪ್ರಭಾವಿ ವ್ಯಕ್ತಿಗಳು ಹಗಲು ರಾತ್ರಿ ಎನ್ನದೇ ಅಧಿಕಾರಿಗಳಿಗೆ ಕರೆ ಮಾಡುತ್ತಿದ್ದಾರೆ.

‘ಕಳೆದ ಒಂದು ವಾರದಿಂದ ಪ್ರತಿ ರಾತ್ರಿ ಎರಡರಿಂದ ಮೂರು ಗಂಟೆಗಳಷ್ಟು ಕಾಲ ನಿದ್ರೆ ಮಾಡಿದರೆ ಹೆಚ್ಚು. ಹಗಲುರಾತ್ರಿ ಎನ್ನದೇ ಒಂದೇ ಸಮನೆ ದೂರವಾಣಿ ಕರೆಗಳು ಬರುತ್ತಲೇ ಇರುತ್ತವೆ. ಸಾಧ್ಯವಾದಷ್ಟು ಕರೆಗಳಿಗೆ ಉತ್ತರಿಸುತ್ತೇವೆ. ಸಮಸ್ಯೆ ಆಲಿಸಿ ಬಗೆಹರಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ಹೇಳಿದರು.

‘ಆಸ್ಪತ್ರೆಗಳಲ್ಲಿ ಹಾಸಿಗೆಗಳ ತೀವ್ರ ಅಭಾವ ಎದುರಾಗಿದೆ. ಬರುವ ಕರೆಗಳಲ್ಲಿ, ಐಸಿಯು ಹಾಸಿಗೆಗಳನ್ನು ಒದಗಿಸುವ ಬೇಡಿಕೆಗೆ ಸಂಬಂಧಿಸಿದವೇ ಜಾಸ್ತಿ. ಐಸಿಯು ಹಾಸಿಗೆಗಳ ತೀವ್ರ ಕೊರತೆ ಇದೆ. ನಾವು ಹೊಂದಿಸುವುದಾದರೂ ಹೇಗೆ’ ಎಂದರು.

ADVERTISEMENT

‘ಕೋವಿಡ್‌ ಎರಡನೇ ಅಲೆಯನ್ನು ಪರಿಣಾಮಕಾರಿಯಾಗಿ ಹತ್ತಿಕ್ಕಲು ಐಸಿಯು ಹಾಸಿಗೆಗಳನ್ನು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಸಜ್ಜುಗೊಳಿಸಬೇಕಿತ್ತು ನಿಜ. ಆದರೆ, ಅದು ನಮ್ಮ ಕೈಯಲ್ಲಿ ಇಲ್ಲ. ಎಷ್ಟೋ ಬಾರಿ ಕರೆ ಸ್ವೀಕರಿಸಿ ಜನರಿಂದ ಬೈಯಿಸಿಕೊಂಡಿದ್ದೇವೆ. ಆದರೂ ಸಮಚಿತ್ತದಿಂದ ಅವರ ಸಮಸ್ಯೆಗೆ ಸ್ಪಂದಿಸುತ್ತಿದೇವೆ’ ಎಂದು ಈ ಹಿಂದೆ ಎರಡು ಬಾರಿ ಸ್ವತಃ ಕೊರೊನಾ ಸೋಂಕಿಗೆ ಒಳಗಾಗಿದ್ದ ಹಿರಿಯ ಅಧಿಕಾರಿ ಪರಿಸ್ಥಿತಿಯ ಒತ್ತಡವನ್ನು ವಿವರಿಸಿದರು.

‘ಬೊಮ್ಮನಹಳ್ಳಿ ವಲಯದಲ್ಲಿ ಆರೋಗ್ಯ ಇಲಾಖೆಯ ಪ್ರಮುಖ ಅಧಿಕಾರಿಯೊಬ್ಬರ ಕುಟುಂಬದ ಮೂವರು ಸದಸ್ಯರು ಕೋವಿಡ್‌ಗೆ ತುತ್ತಾಗಿದ್ದಾರೆ. ಈ ನಡುವೆಯೂ ಈ ಅಧಿಕಾರಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಕೋವಿಡ್‌ ಹರಡುವುದಕ್ಕೆ ಅಧಿಕಾರಿಗಳೇ ಕಾರಣ ಎಂಬ ರೀತಿಯಲ್ಲಿ ಜನರು ಆಡಿಕೊಳ್ಳುವಾಗ ಕರ್ತವ್ಯ ನಿಷ್ಠೆಯಿಂದ ಕೆಲಸ ಮಾಡುವ ನಮ್ಮಂಥವರಿಗೆ ಖಂಡಿತಾ ನೋವಾಗುತ್ತದೆ’ ಎಂದು ಇನ್ನೊಬ್ಬ ಅಧಿಕಾರಿ ತಿಳಿಸಿದರು.

‘ಹಾಸಿಗೆ ವ್ಯವಸ್ಥೆ ಕಲ್ಪಿಸಿದ್ದೇವೆ’

’ಚಿಕಿತ್ಸೆಗೆ ಹಾಸಿಗೆ ಸಿಗದೇ ಸಮಸ್ಯೆ ಎದುರಿಸಿದ ಸರ್ವಜ್ಞನಗರ ಕ್ಷೇತ್ರದ ಶಾಮಣ್ಣ ಗಾರ್ಡನ್‌ ನಿವಾಸಿ ಕರುಣಾಮೂರ್ತಿ (54) ಅವರಿಗೆ ಮಂಗಳವಾರ ರಾತ್ರಿಯೇ ಆಸ್ಪತ್ರೆಯೊಂದರಲ್ಲಿ ಹಾಸಿಗೆ ವ್ಯವಸ್ಥೆ ಮಾಡಿದ್ದೇವೆ’ ಎಂದು ಪೂರ್ವ ವಲಯದ ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ಯು ಏ.21ರ ಸಂಚಿಕೆಯಲ್ಲಿ ‘ದಿನವಿಡೀ ಅಲೆದರೂ ಹಾಸಿಗೆ ಸಿಗಲಿಲ್ಲ’ ಎಂಬ ವರದಿಯನ್ನು ಪ್ರಕಟಿಸಿತ್ತು.

‘ಬಿಬಿಎಂಪಿ ಸಹಾಯವಾಣಿಗೆ ಬರುವ ಎಲ್ಲಾ ಕರೆಗಳಿಗೂ ಸ್ಪಂದಿಸುತ್ತಿದ್ದೇವೆ. ಒಬ್ಬರ ಜೊತೆ ಮಾತನಾಡುವಾಗ ಸಹಾಯವಾಣಿ ಸಂಪರ್ಕಕ್ಕೆ ಸಿಗುವುದಿಲ್ಲ. ದಿನಕ್ಕೆ 150ಕ್ಕೂ ಅಧಿಕ ಮಿಸ್ದ್‌ ಕಾಲ್‌ಗಳಿರುತ್ತಿದ್ದವು. ಹಾಗಾಗಿ ಸಮಸ್ಯೆ ಆಗುತ್ತಿತ್ತು. ಇದನ್ನು ಬಗೆಹರಿಸಲು ದೂರವಾಣಿ ಸಂಪರ್ಕವನ್ನು ಎರಡರಿಂದ ಆರಕ್ಕೆ ಹೆಚ್ಚಿಸಲು ಕ್ರಮ ಕೈಗೊಂಡಿದ್ದೇವೆ. ಸಹಾಯವಾಣಿ ಕೇಂದ್ರಕ್ಕೆ ಹೆಚ್ಚುವರಿ ಸಿಬ್ಬಂದಿಯನ್ನೂ ನಿಯೋಜಿಸಲಾಗುತ್ತಿದೆ’ ಎಂದು ಅವರು ಹೇಳಿದರು.

‘ಆಮ್ಲಜನಕ ಪೂರೈಕೆ ವ್ಯವಸ್ಥೆ ಇರುವ ಹಾಸಿಗೆಗಳ ಕೊರತೆ ಇದೆ. ಈ ಸಮಸ್ಯೆ ನೀಗಿಸಲು ಕೋವಿಡ್‌ ಆರೈಕೆ ಕೇಂದ್ರದಲ್ಲಿ ಆಮ್ಲಜನಕ ಪೂರಣ ವ್ಯವಸ್ಥೆ ಇರುವ ಹಾಸಿಗೆ ಸೌಕರ್ಯ ಕಲ್ಪಿಸಲು ಸಿದ್ಧತೆ ನಡೆದಿದೆ’ ಎಂದರು.

‘ಹೆಬ್ಬಾಳ ಪಶುವೈದ್ಯಕೀಯ ಕಾಲೇಜಿನ ಪ್ರಾಂಗಣದಲ್ಲಿ 60 ಹಾಸಿಗೆ ಸಾಮರ್ಥ್ಯದ ಕೋವಿಡ್‌ ಆರೈಕೆ ಕೇಂದ್ರ ಸಜ್ಜಾಗಿದೆ. ರೋಗ ಲಕ್ಷಣ ಇಲ್ಲದ ಕೋವಿಡ್‌ ರೋಗಿಗಳ ಆರೈಕೆಯನ್ನು ಗುರುವಾರದಿಂದಲೇ ಇಲ್ಲಿ ಆರಂಭಿಸುತ್ತೇವೆ’ ಎಂದು ಪೂರ್ವ ವಲಯದ ಜಂಟಿ ಆಯುಕ್ತರಾದ ಪಲ್ಲವಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.