ADVERTISEMENT

ಆ್ಯಪ್‌ ಆಧಾರಿತ ಆಟೊರಿಕ್ಷಾ ಸೇವೆ: ರಾಜ್ಯ ಸರ್ಕಾರದ ಮನವಿಗೆ ಹೈಕೋರ್ಟ್‌ ಮಾನ್ಯ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2022, 21:07 IST
Last Updated 7 ನವೆಂಬರ್ 2022, 21:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಆ್ಯಪ್ ಆಧಾರಿತ ಆಟೊರಿಕ್ಷಾ ಸೇವೆಗೆ ನ್ಯಾಯಯುತ ದರ ವಿಧಿಸಬೇಕು ಎಂಬ ಬೇಡಿಕೆಗೆ ಸಂಬಂಧಿಸಿದಂತೆ ಓಲಾ ಮತ್ತು ಉಬರ್‌ ಕಂಪನಿಗಳ ಜೊತೆ ಸಹಮತ ಸಾಧಿಸಲು ಇನ್ನಷ್ಟು ಕಾಲಾವಕಾಶ ಬೇಕು’ ಎಂಬ ರಾಜ್ಯ ಸರ್ಕಾರದ ಮನವಿಯನ್ನು ಹೈಕೋರ್ಟ್‌ ಮಾನ್ಯ ಮಾಡಿದೆ.

‘ಆ್ಯಪ್ ಆಧಾರಿತ ಓಲಾ ಮತ್ತು ಉಬರ್ ಆಟೊರಿಕ್ಷಾ ಸೇವೆ ಸ್ಥಗಿತಗೊಳಿಸಬೇಕು ಎಂದು ರಾಜ್ಯ ಸರ್ಕಾರದ ಆದೇಶ ರದ್ದುಪಡಿಸಬೇಕು’ ಎಂದು ಕೋರಿ ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಉಬರ್ ಇಂಡಿಯಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ‘ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಕ್ರಿಯೆ ಆರಂಭಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ರೊಂದಿಗೆ ಸಮಾಲೋಚನಾ ಸಭೆ ನಡೆಸಲಾಗಿದೆ. ಆದರೆ, ಒಮ್ಮತದ ನಿಲುವಿಗೆ ಬರಲಾಗಿಲ್ಲ. ಇದೇ 14 ಮತ್ತು 15ರಂದು ಸಂಚಾರಿ ಪೊಲೀಸರ ಜೊತೆ ಸಭೆ ನಡೆಸಲಾಗುತ್ತಿದೆ. ಇದಕ್ಕಾಗಿ 4 ವಾರ ಕಾಲಾ ವಕಾಶ ನೀಡಬೇಕು’ ಎಂದು ಕೋರಿದರು. ಏತನ್ಮಧ್ಯೆ, ಭಾರತ್ ಮೋಟಾರು ಸಾರಿಗೆ ಚಾಲಕರ ಸಂಘದ ಪರ ವಕೀಲ ಎನ್.ಪಿ. ಅಮೃತೇಶ್ ಹಾಜರಾಗಿ, ‘ಅರ್ಜಿ ಕುರಿತಂತೆ ನ್ಯಾಯಾಲಯ ನಿರ್ದೇಶನ ನೀಡಿತ್ತು. ಅದರಂತೆ ಸಾರಿಗೆ ಆಯುಕ್ತರು ಸಭೆ ಕರೆದಿದ್ದರು. ಆದರೆ, ಸಭೆಯಲ್ಲಿ ಓಲಾ, ಉಬರ್, ರೊಪ್ಪನ್ ಸರ್ವೀಸ್ ಸೇರಿದಂತೆ ಐವರು ಮಾತ್ರ ಭಾಗಿಯಾಗಿದ್ದರು. ಬೆಂಗಳೂರು ನಗರದಲ್ಲಿ 16 ಚಾಲಕ ಒಕ್ಕೂಟಗಳಿವೆ. ಸಮಾಲೋಚನಾ ಸಭೆಯಲ್ಲಿ ಸಾರ್ವಜನಿಕರನ್ನೂ ಭಾಗಿದಾರರನ್ನಾಗಿಸಬೇಕು. ಅದರಂತೆ ಅರ್ಜಿಯಲ್ಲಿ ತಮ್ಮ ಸಂಘವನ್ನು ಪ್ರತಿವಾದಿ ಮಾಡಬೇಕು’ ಎಂದು ಕೋರಿದರು.

ADVERTISEMENT

‘ವಿವಾದ ಇತ್ಯರ್ಥಪಡಿಸಲು ಓಲಾ ಮತ್ತು ಉಬರ್ ಕಂಪನಿಗಳೊಂದಿಗೆ ಸಭೆ ನಡೆಸಿ ಒಮ್ಮತ ಸಾಧಿಸಿ ನವೆಂಬರ್‌ 7ರೊಳಗೆ ವರದಿ ಸಲ್ಲಿಸಿ’ ಎಂದು ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಕಳೆದ ತಿಂಗಳ 13ರಂದು ನಿರ್ದೇಶಿಸಿತ್ತು.ವಿಚಾರಣೆಯನ್ನು ಇದೇ 16ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.