ADVERTISEMENT

ಓಲಾ, ಉಬರ್: ಸಹಮತದ ಪ್ರಸ್ತಾವ ಸಲ್ಲಿಕೆಗೆ ಸೂಚನೆ

ಓಲಾ, ಉಬರ್ ಜೊತೆ ಸಭೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2022, 19:14 IST
Last Updated 13 ಅಕ್ಟೋಬರ್ 2022, 19:14 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ‘ಆ್ಯಪ್ ಆಧಾರಿತ ಆಟೊರಿಕ್ಷಾ ಸೇವೆಗೆ ನ್ಯಾಯಯುತ ದರ ವಿಧಿಸುವುದಕ್ಕೆ ಸಂಬಂಧಿಸಿದಂತೆ ಓಲಾ ಮತ್ತು ಉಬರ್ ಕಂಪನಿಗಳ ಜೊತೆ ಸಭೆ ನಡೆಸಿ ಸಹಮತದ ಪ್ರಸ್ತಾವನೆಯೊಂದನ್ನು ಸಲ್ಲಿಸಿ’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

‘ಓಲಾ, ಉಬರ್ ಮತ್ತು ರ್‍ಯಾಪಿಡೊ ಕಂಪನಿಯವರು ಆ್ಯಪ್ ಆಧಾರಿತ ಆಟೊರಿಕ್ಷಾ ಪ್ರಯಾಣಿಕರ ಸೇವೆಗಳನ್ನು ತಕ್ಷಣದಿಂದ ಸ್ಥಗಿತಗೊಳಿಸುವಂತೆ ಸಾರಿಗೆ ಇಲಾಖೆ ಆಯುಕ್ತರು ಹೊರಡಿಸಿರುವ ಆದೇಶ ರದ್ದುಗೊಳಿಸಬೇಕು’ ಎಂದು ಕೋರಿ ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಉಬರ್ ಇಂಡಿಯಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಸಲ್ಲಿಸಿರುವ ಪ್ರತ್ಯೇಕ ರಿಟ್ ಅರ್ಜಿಗಳನ್ನು ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ, ‘ಆಟೊರಿಕ್ಷಾ ಸೇವೆಯು ಟ್ಯಾಕ್ಸಿ ಸೇವೆಯಡಿ ಬರುವುದಿಲ್ಲ. ಅರ್ಜಿದಾರರು ಕರ್ನಾಟಕ ರಾಜ್ಯ ಬೇಡಿಕೆಯಿರುವ ಆಧಾರಿತ ಸಾರಿಗೆ ತಂತ್ರಜ್ಞಾನ ಅಗ್ರಿಗೇಟರ್ಸ್ ನಿಯಮಗಳು-2016ರ ನಿಯಮ 4ರ ಅಡಿ ಪರವಾನಗಿ ಪಡೆದಿಲ್ಲ. ಉಳಿದಂತೆ ಆಟೊರಿಕ್ಷಾ ಸೇವೆಗೆ ರಾಜ್ಯ ಸರ್ಕಾರ ನಿರ್ದಿಷ್ಟ ದರ ನಿಗದಿಪಡಿಸಿದೆ. ಆದರೆ, ಅದನ್ನು ಅರ್ಜಿದಾರ ಕಂಪನಿಗಳು ಪಾಲನೆ ಮಾಡುತ್ತಿಲ್ಲ’ ಎಂದು ಆಕ್ಷೇಪಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಸೇವೆ ಸ್ಥಗಿತಗೊಳಿಸಿರುವುದರಿಂದ ಸಾರ್ವಜನಿಕರಿಗೆ ಅನಾನುಕೂಲವಾಗುತ್ತದೆ. ಹೆಚ್ಚಿನ ದರ ಸಂಗ್ರಹಿಸುತ್ತಿರುವ ಅಂಶವನ್ನು ನ್ಯಾಯಾಲಯ ವಿಚಾರಣೆಯಲ್ಲಿ ಪರಿಗಣಿಸಲಿದೆ. ಆದ್ದರಿಂದ, ದರ ವಿಧಿಸುವ ವಿಚಾರದಲ್ಲಿ ಒಮ್ಮತದ ಅಭಿಪ್ರಾಯಕ್ಕೆ ಬರಬೇಕು’ ಎಂದು ಮೌಖಿಕ ಸಲಹೆ ನೀಡಿತು.

‘ಪ್ರಕರಣದಲ್ಲಿ ಅಂತಿಮ ನಿರ್ಧಾರಕ್ಕೆ ಬರುವ ಮುನ್ನ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುವುದು ಅನಿವಾರ್ಯವಿದೆ. ಹಾಗಾಗಿ, ರಾಜ್ಯ ಸರ್ಕಾರ ಮತ್ತು ಅರ್ಜಿದಾರರು ಸಭೆ ನಡೆಸಿ ಒಮ್ಮತ ಸಾಧಿಸಬೇಕು’ ಎಂದು ಸೂಚಿಸಿ ವಿಚಾರಣೆಯನ್ನು ಇದೇ 14ಕ್ಕೆ ಮುಂದೂಡಿತು. ‘ಸೇವೆ ಸ್ಥಗಿತಗೊಳಿಸುವುದಕ್ಕೆ ಸರ್ಕಾರ ಸಕಾರಣ ನೀಡಿಲ್ಲ. ಆಯುಕ್ತರ ಆದೇಶ ಏಕಪಕ್ಷೀಯವಾಗಿದೆ’ ಎಂಬುದು ಅರ್ಜಿದಾರ ಕಂಪನಿಗಳ ಪ್ರತಿಪಾದನೆ.

ಮುಂದುವರಿದ ಹಗ್ಗ ಜಗ್ಗಾಟ

ಓಲಾ, ಉಬರ್ ಮತ್ತು ರ್‍ಯಾಪಿಡೊ ಆ್ಯಪ್‌ನಲ್ಲಿ ಆಟೊರಿಕ್ಷಾ ಸೇವೆ ಮುಂದುವರಿದ್ದು, ಈ ಆ್ಯಪ್‌ಗಳನ್ನು ನಿರ್ವಹಿಸುವ ಅಗ್ರಿಗೇಟರ್ ಕಂಪನಿಗಳು ಮತ್ತು ಸಾರಿಗೆ ಇಲಾಖೆ ನಡುವೆ ಹಗ್ಗ ಜಗ್ಗಾಟವೂ ಮುಂದುವರಿದಿದೆ. ಈ ನಡುವೆ ಅಟೊ ಸೇವೆಗೆ ಅನುಕೂಲ ಮಾಡಿಕೊಡುವ ಬಗ್ಗೆಯೂ ಸಾರಿಗೆ ಇಲಾಖೆ ಚಿಂತನೆ ನಡೆಸಿದೆ.

ಆ್ಯಪ್‌ ಆಧಾರಿತ ಸೇವೆಗೆ ಜನರೂ ಒಗ್ಗಿಕೊಂಡಿದ್ದು, ಆಟೊ ಚಾಲಕರು ಕೂಡ ಇವುಗಳನ್ನೇ ಆಧರಿಸಿಕೊಂಡಿದ್ದಾರೆ. ಆದರೆ, ಬೇಕಾಬಿಟ್ಟಿ ದರ ವಿಧಿಸುತ್ತಿರುವುದುರಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದ್ದು, ಇದಕ್ಕೆ ಕಡಿವಾಣ ಹಾಕಿ ಆಟೊ ಸೇವೆ ಮುಂದುವರಿಸುವ ಬಗ್ಗೆ ಆಲೋಚನೆ ನಡೆಸಲಾಗಿದೆ ಎಂದು ಸಾರಿಗೆ ಇಲಾಖೆ ಮೂಲಗಳು ಹೇಳಿವೆ.

ಜಿಲ್ಲಾಡಳಿತ ನಿಗದಿ ಮಾಡಿರುವ ದರ ಪಟ್ಟಿ ಪ್ರಕಾರ ಮೊದಲ 2 ಕಿಲೋ ಮೀಟರ್‌ಗೆ ₹30 ಮತ್ತು ನಂತರ ಪ್ರತಿ ಕಿಲೋ ಮೀಟರ್‌ಗೆ ₹15ರಂತೆ ದರ ಇದೆ. ಆ್ಯಪ್ ಆಧಾರಿತ ಸೇವೆಯಲ್ಲಿ ಹೆಚ್ಚು ಕಡಿಮೆ ಇದೇ ದರ ನಿಗದಿ ಮಾಡುವ ಸಾಧ್ಯತೆ ಇದೆ. ಆದರೆ, ಇದರ ಜತೆಗೆ ಜಿಎಸ್‌ಟಿ ಮತ್ತು ಕನ್ವಿನಿಯನ್ಸ್‌ ಶುಲ್ಕವನ್ನೂ ಸೇರಿಸಲು ಅಗ್ರಿಗೇಟರ್‌ ಕಂಪನಿಗಳು ಪ್ರಸ್ತಾಪಿಸಿದ್ದವು. ಈ ವಿಷಯದಲ್ಲಿ ಸಾರಿಗೆ ಇಲಾಖೆ ಮತ್ತು ಕಂಪನಿಗಳ ನಡುವೆಹಗ್ಗ ಜಗ್ಗಾಟ ಮುಂದುವರಿದಿದೆ. ಈ ವಿಷಯವನ್ನು ನ್ಯಾಯಾಲಯದ ಗಮನಕ್ಕೂ ತರಲು ಸಾರಿಗೆ ಇಲಾಖೆ ನಿರ್ಧರಿಸಿದೆ ಎಂದೂ ಮೂಲಗಳು ತಿಳಿಸಿವೆ.

ಅಗ್ರಿಗೇಟರ್ ಕಂಪನಿಗಳ ಜತೆ ಸಾರಿಗೆ ಇಲಾಖೆ ಕಾರ್ಯದರ್ಶಿ ಸಭೆ ನಡೆಸಿದರು. ಆ್ಯಪ್ ಆಧಾರಿತ ಸೇವೆ ಒದಗಿಸುತ್ತಿರುವ ಆಟೊರಿಕ್ಷಾಗಳ ಸಂಖ್ಯೆ ಎಷ್ಟು, ಸೇವೆಗೆ ವಿಧಿಸುತ್ತಿರುವ ದರದ ವಿವರಗಳನ್ನು ಒದಗಿಸುವಂತೆ ಕಂಪನಿಗಳನ್ನು ಸಾರಿಗೆ ಇಲಾಖೆ ಕೇಳಿದೆ. ಈ ಮಾಹಿತಿ ಆಧರಿಸಿ ದರ ನಿಗದಿ ಮತ್ತು ತಾತ್ಕಾಲಿಕ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.