
ಪೀಣ್ಯ ದಾಸರಹಳ್ಳಿ: ‘ಕ್ರೀಡೆಯಲ್ಲೂ ಭಾರತ ಅತ್ಯುನ್ನತ ಸ್ಥಾನ ಪಡೆಯಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪವಾಗಿದೆ. 2036ರಲ್ಲಿ ಭಾರತದಲ್ಲಿ ನಡೆಯುವ ಒಲಿಂಪಿಕ್ಸ್ ವೇಳೆಗೆ ಉತ್ತಮ ಕ್ರೀಡಾಪಟುಗಳನ್ನು ಬೆಳೆಸಲು ಪ್ರೋತ್ಸಾಹ ನೀಡಲಾಗುತ್ತಿದೆ' ಎಂದು ಕೇಂದ್ರ ಎಂಎಸ್‌ಎಂಇ, ಉದ್ಯೋಗ ಹಾಗೂ ಕಾರ್ಮಿಕ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಬಾಗಲಗುಂಟೆಯ ಎಂಇಐ ಆಟದ ಮೈದಾನದಲ್ಲಿ ಆಯೋಜಿಸಿದ್ದ ‘ಸಂಸದ್ ಕ್ರೀಡಾ ಮಹೋತ್ಸವ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಮುಂದಿನ 10 ವರ್ಷಗಳಲ್ಲಿ ಯುವ ಪೀಳಿಗೆ ಓದಿನ ಜೊತೆಗೆ ಕ್ರೀಡಾಭ್ಯಾಸ ಮಾಡಿ ಉತ್ತಮ ಕ್ರೀಡಾಪಟುಗಳಾಗಲಿ ಎಂದು ಕೇಂದ್ರ ಸರ್ಕಾರ ಈ ಯೋಜನೆ ರೂಪಿಸಿದೆ. ಯುವ ಪೀಳಿಗೆ ವಿಶ್ವದಲ್ಲೇ ಉತ್ತಮ ಕ್ರೀಡಾಪಟುಗಳಾಗಿ ಬೆಳೆದು ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಗುರಿ ಹೊಂದಬೇಕು’ಎಂದರು.
ಈಗಾಗಲೇ ಆರು ವಿಧಾನಸಭಾ ಕ್ಷೇತ್ರದಲ್ಲಿ ಕ್ರೀಡಾ ಸ್ಪರ್ಧೆಗಳು ನಡೆದಿವೆ. ನ.23ರಂದು ಜಿಕೆವಿಕೆಯ ಸಭಾಂಗಣದಲ್ಲಿ ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಶಾಸಕ ಎಸ್. ಮುನಿರಾಜು ಮಾತನಾಡಿ, ‘ದಾಸರಹಳ್ಳಿ ಕ್ಷೇತ್ರದಲ್ಲೂ ಕೂಡ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳು ಇದ್ದಾರೆ. 2036ರ ಒಲಿಂಪಿಕ್ಸ್‌ಗೆ ಉತ್ತಮ ಕ್ರೀಡಾಪಟುಗಳು ಹೊರಹೊಮ್ಮಬೇಕು’ ಎಂದರು.
ಇದೇ ವೇಳೆ ಹಗ್ಗ ಜಗ್ಗಾಟ, ಬುಗುರಿ, ಗೋಣಿಚೀಲ ಜಿಗಿತ, ಲಗೋರಿ, ಮ್ಯೂಸಿಕಲ್ ಚೇರ್, ಥ್ರೋ ಬಾಲ್, ವಾಲಿಬಾಲ್ ಮುಂತಾದ ಕ್ರೀಡೆಗಳು ನಡೆದವು. ರಾಷ್ಟ್ರಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ಚಿನ್ನ ಮತ್ತು ಕಂಚಿನ ಪದಕ ಪಡೆದ ವಿಜೇತರನ್ನು ಅಭಿನಂದಿಸಲಾಯಿತು.
ನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಹರೀಶ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಂಗಸ್ವಾಮಿ, ಪಾಲಿಕೆ ಮಾಜಿ ಸದಸ್ಯೆ ಉಮಾದೇವಿ ನಾಗರಾಜು, ಸೂರಜ್ ಫೌಂಡೇಷನ್ ಅಧ್ಯಕ್ಷೆ ಸುಜಾತಾ ಮುನಿರಾಜು, ಮಂಡಲ ಅಧ್ಯಕ್ಷ ಸೋಮಶೇಖರ್, ಬಿಜೆಪಿ ಮುಖಂಡರಾದ ಲಕ್ಷ್ಮೀ ವೆಂಕಟೇಶ್, ಭರತ್ ಸೌಂದರ್ಯ, ವಿನೋದ್ ಗೌಡ, ಬಿ.ಎಂ. ಚಿಕ್ಕಣ್ಣ, ಗುರುಪ್ರಸಾದ್, ಕವಿತಾ, ಬಿ.ಎಂ ನಾರಾಯಣ, ನಿಸರ್ಗ ಕೆಂಪರಾಜು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.