'ಒಂದು ರಾಷ್ಟ್ರ ಒಂದು ಚುನಾವಣೆ’ ವಿಷಯ ಕುರಿತು ಯುವ ಸಂವಾದ ಕಾರ್ಯಕ್ರಮದಲ್ಲಿ ಕೆ.ಅಣ್ಣಾಮಲೈ ಮತ್ತು ತೇಜಸ್ವಿನಿ ಅನಂತ ಕುಮಾರ್ ಪರಸ್ಪರ ಚರ್ಚಿಸಿದರು.
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಒಂದು ದೇಶ ಒಂದು ಚುನಾವಣೆ’ ಪರಿಕಲ್ಪನೆಯ ಅನುಷ್ಠಾನದಿಂದ ದೇಶವು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಅಭಿವೃದ್ಧಿಯಾಗಲಿದೆ’ ಎಂದು ಬಿಜೆಪಿಯ ತಮಿಳುನಾಡು ಘಟಕದ ಮಾಜಿ ಅಧ್ಯಕ್ಷ ಕೆ.ಅಣ್ಣಾಮಲೈ ಅಭಿಪ್ರಾಯಪಟ್ಟರು.
ಅಭ್ಯುದಯ ಫೌಂಡೇಷನ್ ಶುಕ್ರವಾರ ‘ಒಂದು ರಾಷ್ಟ್ರ ಒಂದು ಚುನಾವಣೆ’ ವಿಷಯ ಕುರಿತು ಆಯೋಜಿಸಿದ್ದ ಯುವ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶವು ವೇಗವಾಗಿ ಬೆಳವಣಿಗೆ ಸಾಧಿಸಬೇಕಿದೆ. ಇದಕ್ಕಾಗಿ ಚುನಾವಣಾ ವ್ಯವಸ್ಥೆಯಲ್ಲೂ ಸುಧಾರಣೆ ಅಗತ್ಯವಿದೆ. ದೇಶದಾದ್ಯಂತ ಒಂದೇ ಚುನಾವಣೆ ಮಾಡುವುದರಿಂದ ಹಣ ಉಳಿತಾಯವಾಗಲಿದೆ. ಒಂದೇ ಚುನಾವಣೆಯಿಂದ ಆಗುವ ಉಳಿತಾಯದಿಂದ ದೇಶದ ಜಿಡಿಪಿಗೆ ₹4.5 ಲಕ್ಷ ಕೋಟಿ ಹಣ ಲಭಿಸಬಹುದು. ಇದರಿಂದ ಅಭಿವೃದ್ಧಿಗೆ ಹೆಚ್ಚು ಹಣ ದೊರೆಯಲಿದೆ’ ಎಂದು ವಿವರಿಸಿದರು.
‘ದೇಶದಲ್ಲಿ 28 ರಾಜ್ಯಗಳಿದ್ದು, ಒಂದಲ್ಲ ಒಂದು ಚುನಾವಣೆ ನಿರಂತರವಾಗಿರುತ್ತದೆ. ಇದರಿಂದ ಪದೇ ಪದೇ 45 ದಿನಗಳ ನೀತಿಸಂಹಿತೆ ಜಾರಿಯಾಗಿ, ದೇಶದ ಅಭಿವೃದ್ಧಿ ಪ್ರಕ್ರಿಯೆಗೆ ತೊಡಕಾಗುತ್ತದೆ’ ಎಂದು ಅವರು ವಿಶ್ಲೇಷಿಸಿದರು.
‘ಒಂದು ದೇಶ ಒಂದೇ ಚುನಾವಣೆಯಿಂದ ಪ್ರಾದೇಶಿಕ ಪಕ್ಷವು ರಾಷ್ಟ್ರಹಿತದೊಂದಿಗೆ ಹಾಗೂ ರಾಷ್ಟ್ರೀಯ ಪಕ್ಷವು ಪ್ರಾದೇಶಿಕ ಹಿತೈಷಿಯಾಗಿ ಚಿಂತಿಸುವಂತೆ ಆಗಲಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ 2034ರಲ್ಲಿ ಒಂದೇ ಚುನಾವಣೆ ಜಾರಿ ಆಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಅದಮ್ಯ ಚೇತನ ಪ್ರತಿಷ್ಠಾನದ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಮಾತನಾಡಿದರು. ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್. ದತ್ತಾತ್ರಿ, ಹಾಲು ಉತ್ಪಾದಕರ ಪ್ರಕೋಷ್ಠದ ಸಂಚಾಲಕ ಬೇಳೂರು ರಾಘವೇಂದ್ರ ಶೆಟ್ಟಿ, ಅಭ್ಯುದಯ ಪ್ರತಿಷ್ಠಾನದ ಅಕ್ಷಯ ಜೋಗಿಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.
'ಇವಿಎಂ ಯಂತ್ರಕ್ಕೆ ಬ್ಲೂಟೂತ್ ವೈಫೈ ಇಲ್ಲ. ಈ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ನಡೆಯುತ್ತಿದೆ. ಕೆಲವು ರಾಜಕೀಯ ಪಕ್ಷಗಳು ಈ ಸಂಬಂಧ ಕೋರ್ಟ್ ಮೊರೆ ಹೋಗಿವೆ’ ಎಂದು ಅಣ್ಣಾಮಲೈ ಅವರು ಸಂವಾದದಲ್ಲಿ ಇವಿಎಂ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ‘ಮಹಾರಾಷ್ಟ್ರ ಚುನಾವಣೆ ಸಂದರ್ಭದಲ್ಲೂ ಹೀಗೆ ಹೇಳಲಾಗಿದೆ. ಸೋತ ಪಕ್ಷ ಕಾರಣ ಹೇಳುವುದು ಸಹಜ. ಇದು ಹೇಗಿದೆಯೆಂದರೆ ‘ಜಿಮ್’ಗೆ ಹೋದವರು ‘ಬಾಡಿ’ ಬರ್ತಾ ಇಲ್ಲ ಉಪಕರಣ ಸರಿ ಇಲ್ಲ’ ಎಂದ ಹಾಗಾಗಿದೆ’ ಎಂದು ವಿಶ್ಲೇಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.