ADVERTISEMENT

ತಗ್ಗಿದ ಈರುಳ್ಳಿ ದರ ಗ್ರಾಹಕರಿಗೆ ಸಿಗದ ಲಾಭ!

​ಪ್ರಜಾವಾಣಿ ವಾರ್ತೆ
Published 2 ಜನವರಿ 2020, 23:33 IST
Last Updated 2 ಜನವರಿ 2020, 23:33 IST
   

ಬೆಂಗಳೂರು: ಗ್ರಾಹಕರ ಕಣ್ಣಲ್ಲಿ ನೀರು ತರಿಸಿದ್ದ ಈರುಳ್ಳಿ ದರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗಿದ್ದರೂ ಅದರ ಲಾಭ ಮಾತ್ರ ಗ್ರಾಹಕರಿಗೆ ಇನ್ನೂ ತಲುಪಿಲ್ಲ.

ಕಳೆದ ನವೆಂಬರ್‌ನಲ್ಲಿ ಕ್ವಿಂಟಲ್‌ಗೆ ₹ 20 ಸಾವಿರ ಮುಟ್ಟಿದ್ದ ಅತ್ಯುತ್ತಮ ಗುಣಮಟ್ಟದ ಈರುಳ್ಳಿ ದರ ಈಗ ₹4,500ರಿಂದ ₹5,200ಕ್ಕೆ ಇಳಿದಿದೆ. ಆದರೂ ಸಣ್ಣ ವ್ಯಾಪಾರಿಗಳು ಸಾಧಾರಣ ಗುಣಮಟ್ಟದ ಈರುಳ್ಳಿಯನ್ನು ಕೆ.ಜಿಗೆ ₹100ರಿಂದ ₹ 120ಕ್ಕೆ ಮಾರುತ್ತಿದ್ದಾರೆ.

ಮಹಾರಾಷ್ಟ್ರ ಹಾಗೂ ಕರ್ನಾಟಕದ ವಿವಿಧ ಭಾಗಗಳಿಂದ ಹೊಸ ಈರುಳ್ಳಿ ಮಾರುಕಟ್ಟೆಗೆ ಬರುತ್ತಿರುವುದರಿಂದ ದರ ಕಡಿಮೆ ಆಗಿದೆ. ಈ ತಿಂಗಳ ಕೊನೆ ವೇಳೆಗೆ ಈರುಳ್ಳಿ ಆವಕ ಹೆಚ್ಚಲಿರುವುದರಿಂದ ಬೆಲೆ ಇನ್ನಷ್ಟು ಕುಸಿಯುವ ಸಾಧ್ಯತೆಯಿದೆ ಎಂದು ಎಪಿಎಂಸಿ ಈರುಳ್ಳಿ ಮತ್ತು ಆಲೂಗೆಡ್ಡೆ ವರ್ತಕರ ಸಂಘದ ಮೂಲಗಳು ತಿಳಿಸಿವೆ.

ADVERTISEMENT

ಬೆಲೆ ನಿಯಂತ್ರಿಸುವ ಉದ್ದೇಶದಿಂದ ಈಜಿ‍ಪ್ಟ್‌ ಹಾಗೂ ಟರ್ಕಿಗಳಿಂದ ಆಮದು ಮಾಡಿಕೊಂಡಿರುವ ಈರುಳ್ಳಿಗೆ ಬೇಡಿಕೆ ಇಲ್ಲ. ಸ್ಥಳೀಯ ಈರುಳ್ಳಿಗಿಂತಲೂ ಇವು ಕಡಿಮೆ ರುಚಿ ಇರುವುದರಿಂದ ಗ್ರಾಹಕರು ಇಷ್ಟಪಡುತ್ತಿಲ್ಲ ಎಂದು ಮೂಲಗಳು ಹೇಳಿವೆ.

ಆದರೆ, ಬೆಲೆ ಕಡಿಮೆ ಮತ್ತು ಗಾತ್ರ ದೊಡ್ಡದು ಎನ್ನುವ ಕಾರಣಕ್ಕೆ ಹೋಟೆಲ್‌ಗಳವರು, ಪಾನಿಪುರಿ ವರ್ತಕರು ವಿದೇಶಿ ಈರುಳ್ಳಿ ಖರೀದಿಸುತ್ತಿದ್ದಾರೆ. ಇದರಿಂದಾಗಿ ಸ್ಪಲ್ಪ ಮಟ್ಟಿಗೆ ಸ್ಥಳೀಯ ಈರುಳ್ಳಿ ಮಾರಾಟವೂ ಮಂದಗತಿಯಲ್ಲಿ ಸಾಗಿದೆ ಎಂದು ಮೂಲಗಳು ತಿಳಿಸಿವೆ.

ಯಶವಂತಪುರ ಮಾರುಕಟ್ಟೆಗೆಗುರುವಾರ 170 ಟ್ರಕ್‌ ಹೊಸ ಈರುಳ್ಳಿ ಬಂದಿದೆ. 10 ಟ್ರಕ್‌ ಈಜಿಪ್ಟ್‌ ಹಾಗೂ ಟರ್ಕಿಯ ಈರುಳ್ಳಿ ಬಂದಿದೆ. ಮುಕ್ಕಲ್‌ ಕ್ವಿಂಟಲ್‌ಗೆ ₹4,000– 4,500, ಮಧ್ಯಮ ಗಾತ್ರಕ್ಕೆ ₹ 3,500– 4,000, ಗೋಲ್ಟಾಗೆ ₹ 2,500– 3,000, ಗೋಲ್ಟಿಗೆ ₹ 1,500– 2,000, ಚಿಂಗ್ಲಿಗೆ ₹ 600– 1,300ಕ್ಕೆ ಮಾರಾಟವಾಗಿದೆ.

ಈಜಿಪ್ಟ್‌ ಹಾಗೂ ಟರ್ಕಿ ಈರುಳ್ಳಿ ಹೆಚ್ಚುಕಡಿಮೆ ₹ 2000– 3200ಕ್ಕೆ ಹರಾಜಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.