ADVERTISEMENT

ಆನ್‌ಲೈನ್‌ ತರಗತಿಗೆ ಕೊಡಿಸಿದ್ದ ಮೊಬೈಲ್‌ನಲ್ಲಿ ನೃತ್ಯ: ಬ್ಲ್ಯಾಕ್‌ಮೇಲ್

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2020, 18:52 IST
Last Updated 2 ನವೆಂಬರ್ 2020, 18:52 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಆನ್‌ಲೈನ್‌ ತರಗತಿಗಾಗಿ ಪೋಷಕರು ಕೊಡಿಸಿದ್ದ ಮೊಬೈಲ್‌ನಲ್ಲಿ ಶಾಲಾ ಬಾಲಕಿಯೊಬ್ಬಳು ಚಿತ್ರೀಕರಿಸಿದ ವಿಡಿಯೊ ಇಟ್ಟುಕೊಂಡು, ಯುವಕರ ಗುಂಪೊಂದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಪ್ರಕರಣ ಸಂಜಯ್‌ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬ್ಲ್ಯಾಕ್‌ಮೇಲ್ ಸಂಬಂಧ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೂವರು ಯುವಕರನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಅವರು ಹಾಗೂ ಅವರ ಪೋಷಕರಿಂದ ಮುಚ್ಚಳಿಕೆ ಬರೆಸಿಕೊಂಡು ಬಿಟ್ಟು ಕಳುಹಿಸಿದ್ದಾರೆ.

‘ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಗೆ ಆನ್‌ಲೈನ್ ಪಾಠ ಕೇಳಲು ಅನುಕೂಲವಾಗಲೆಂದು ಪೋಷಕರು ಮೊಬೈಲ್ ಕೊಡಿಸಿ
ದ್ದರು. ತರಗತಿ ಇಲ್ಲದ ವೇಳೆಯಲ್ಲಿ ನೃತ್ಯ ಮಾಡುತ್ತಿದ್ದ ಬಾಲಕಿ, ಅದನ್ನೇ ಮೊಬೈಲ್‌ನಲ್ಲಿ ಚಿತ್ರೀಕರಿಸಿ ಇನ್‌ಸ್ಟಾಗ್ರಾಮ್‌ ಸಾಮಾಜಿಕ ಜಾಲತಾಣ
ದಲ್ಲಿ ಅಪ್‌ಲೋಡ್ ಮಾಡಿದ್ದಳು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

‘ವಿಡಿಯೊ ಡೌನ್‌ಲೋಡ್ ಮಾಡಿ
ಕೊಂಡಿದ್ದ ಮೂವರು ಯುವಕರು, ಬಾಲಕಿಯನ್ನು ಬ್ಲ್ಯಾಕ್‌ಮೇಲ್ ಮಾಡಲಾರಂಭಿಸಿದ್ದರು. ತಾವು ಹೇಳಿದಂತೆ ಕೇಳದಿದ್ದರೆ, ವಿಡಿಯೊವನ್ನು ಅಶ್ಲೀಲವಾಗಿ ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುವುದಾಗಿ ಬೆದರಿಸಲಾರಂಭಿಸಿದ್ದರು. ಅದಕ್ಕೆ ಹೆದರಿದ ಯುವತಿ, ಪೋಷಕರಿಗೆ ವಿಷಯ ತಿಳಿಸಿದ್ದರು.’

‘ಅ. 30ರಂದು ಯುವಕ ಗುಂಪು ಮನೆ ಬಳಿ ಬಂದು ಬಾಲಕಿಗೆ ಕರೆ ಮಾಡಿತ್ತು. ಅದು ತಿಳಿಯುತ್ತಿದ್ದಂತೆ ಪೋಷಕರು ಹಾಗೂ ಸ್ಥಳೀಯರು, ಯುವಕರನ್ನು ಬೆನ್ನಟ್ಟಿದ್ದರು. ಒಬ್ಬನನ್ನು ಹಿಡಿದು ಠಾಣೆಗೆ ಒಪ್ಪಿಸಿದ್ದರು’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

‘ಪ್ರಕರಣ ಸಂಬಂಧ ಎರಡೂ ಕಡೆಯವರು ಸಂಧಾನ ಮಾಡಿಕೊಂಡಿದ್ದಾರೆ. ಹೀಗಾಗಿ, ಆರೋಪಿತ ಯುವಕರಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.