ADVERTISEMENT

ಆನ್‌ಲೈನ್ ಜೂಜು ನಿಷೇಧ ಪ್ರಶ್ನಿಸಿ ಅರ್ಜಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2021, 21:52 IST
Last Updated 27 ಅಕ್ಟೋಬರ್ 2021, 21:52 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಪಣಕ್ಕಾಗಿ ಆಡುವ ಆನ್‌ಲೈನ್ ಜೂಜು ನಿಷೇಧಿಸುವ ಕರ್ನಾಟಕ ಪೊಲೀಸ್ ಕಾಯ್ದೆಯ ತಿದ್ದುಪಡಿ ಪ್ರಶ್ನಿಸಿ ಸಲ್ಲಿಕೆ ಆಗಿರುವ ಅರ್ಜಿಗಳನ್ನು ಹೈಕೋರ್ಟ್ ಬುಧವಾರ ವಿಚಾರಣೆ ನಡೆಸಿತು.

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ, ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು. ಮಧ್ಯಂತರ ಪರಿಹಾರದ ಬದಲಿಗೆ ವಿಷಯವನ್ನು ಪೂರ್ಣ ಪ್ರಮಾಣದಲ್ಲಿ ಆಲಿಸುವುದು ಸೂಕ್ತ ಎಂದು ಆರಂಭದಲ್ಲಿ ಪೀಠ ಅಭಿಪ್ರಾಯಪಟ್ಟಿತು. ‘ತಿದ್ದಪಡಿ ಮಾಡಲಾದ ಕಾಯ್ದೆಯಡಿ ಪೊಲೀಸರು ಎಫ್‌ಐಆರ್ ದಾಖಲಿಸಿ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳದಿರಲು ಸಿದ್ಧರಿದ್ದಾರೆಯೇ’ ಎಂದು ಕೇಳಿತು.

‘ಮಧ್ಯಂತರ ತಡೆ ನೀಡಿದರೆ ಕ್ರಿಕೆಟ್ ಪಂದ್ಯಗಳ ಬೆಟ್ಟಿಂಗ್ ಪ್ರಕರಣಗಳನ್ನು ದಾಖಲಿಸಿಕೊಳ್ಳಲು ಅಡ್ಡಿಯಾಗಬಹುದು’ ಎಂದು ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವಡಗಿ ವಿವರಿಸಿದರು.

ADVERTISEMENT

ಕರ್ನಾಟಕ ಪೊಲೀಸ್ ಕಾಯ್ದೆ –1963ಕ್ಕೆ ತಿದ್ದುಪಡಿ ತಂದಿರುವ ರಾಜ್ಯ ಸರ್ಕಾರ, ಹಣ ಕಳೆದುಕೊಳ್ಳಬಹುದಾದ ಆನ್‌ಲೈನ್ ಆಟಗಳನ್ನು ನಿಷೇಧಿಸಿದೆ. ಇದನ್ನು ಪ್ರಶ್ನಿಸಿ ಅಖಿಲ ಭಾರತ ಗೇಮಿಂಗ್ ಫೆಡರೇಷನ್ ಮತ್ತು ಇತರರು ಅರ್ಜಿ ಸಲ್ಲಿಸಿದ್ದಾರೆ. ‘ಪೋಕರ್, ಚೆಸ್, ರಮ್ಮಿ, ಫ್ಯಾಂಟಸಿ ಇವು ಕೌಶಲದ ಆಟಗಳು. ವಿವಿಧ ನ್ಯಾಯಾಲಯಗಳ ಆದೇಶಗಳು ಇವುಗಳನ್ನು ಕೌಶಲದ ಆಟದ ಪಟ್ಟಿಗೆ ಸೇರಿಸಿವೆ’ ಎಂದು ವಿವರಿಸಿದ್ದಾರೆ.

ತಿದ್ದುಪಡಿ ಕಾಯ್ದೆಯನ್ನು 2021ರ ಸೆ.21ರಂದು ವಿಧಾನಸಭೆ ಅಂಗೀಕರಿಸಿತ್ತು. ಅ.4ರಂದು ರಾಜ್ಯಪಾಲರು ಒಪ್ಪಿಗೆ ನೀಡಿದ್ದು, ಅ.5ರಂದು ಅಧಿಸೂಚನೆ ಹೊರ ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.