ADVERTISEMENT

ನೀರು ಬೇಡಿಕೆ ಸಲ್ಲಿಕೆಗೆ ಆನ್‌ಲೈನ್ ವ್ಯವಸ್ಥೆ | ಮನೆ ಬಾಗಿಲಿಗೆ ‘ಸಂಚಾರಿ ಕಾವೇರಿ’

ಗಾಣಧಾಳು ಶ್ರೀಕಂಠ
Published 21 ಏಪ್ರಿಲ್ 2025, 23:30 IST
Last Updated 21 ಏಪ್ರಿಲ್ 2025, 23:30 IST
’ಸಂಚಾರಿ ಕಾವೇರಿ’ ಟ್ಯಾಂಕರ್‌ಗಳನ್ನು ಪರಿಶೀಲಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್. ಈ ಸಂದರ್ಭದಲ್ಲಿ ಜಲಮಂಡಳಿ ಅಧ್ಯಕ್ಷ ರಾಮ್‌ಪ್ರಸಾತ್ ಮನೋಹರ್ ಹಾಜರಿದ್ದರು
’ಸಂಚಾರಿ ಕಾವೇರಿ’ ಟ್ಯಾಂಕರ್‌ಗಳನ್ನು ಪರಿಶೀಲಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್. ಈ ಸಂದರ್ಭದಲ್ಲಿ ಜಲಮಂಡಳಿ ಅಧ್ಯಕ್ಷ ರಾಮ್‌ಪ್ರಸಾತ್ ಮನೋಹರ್ ಹಾಜರಿದ್ದರು   

ಬೆಂಗಳೂರು: ನಗರದಲ್ಲಿ ನೀರಿನ ಕೊರತೆಯನ್ನೇ ಬಂಡವಾಳ ಮಾಡಿಕೊಂಡು ಜನರನ್ನು ಸುಲಿಗೆ ಮಾಡುವ ಟ್ಯಾಂಕರ್‌ ಮಾಫಿಯಾ ನಿಯಂತ್ರಣಕ್ಕೆ ಬೆಂಗಳೂರು ಜಲಮಂಡಳಿಯ ‘ಸಂಚಾರಿ ಕಾವೇರಿ’ (ಕಾವೇರಿ ಆನ್‌ ವೀಲ್ಸ್‌) ಕೆಲವೇ ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ. ಇನ್ನು ನಗರದ ನಾಗರಿಕರು ಕೊಳವೆಬಾವಿಗಳ ನೀರಿಗೆ ದುಬಾರಿ ದರ ತೆರುವ ಬದಲಿಗೆ ನೇರವಾಗಿ ಕಾವೇರಿ ನೀರನ್ನೇ ತರಿಸಿಕೊಳ್ಳಬಹುದು.

ಯೋಜನೆ ಅನುಷ್ಠಾನಕ್ಕೆ ಪೂರಕವಾಗಿ ಕ್ಯೂಆರ್‌ ಕೋಡ್‌ ಆಧಾರದಲ್ಲಿ ನೀರಿಗೆ ಬೇಡಿಕೆ ಸಲ್ಲಿಸುವ ವ್ಯವಸ್ಥೆ, ನೀರು ಪೂರೈಕೆಗೆ ಬೇಕಾದ ಟ್ಯಾಂಕರ್‌ ಎಲ್ಲವೂ ಸಿದ್ಧವಾಗಿವೆ. ಕಾವೇರಿ ಸಂಚಾರಿ ಯೋಜನೆಗಾಗಿ ನೋಂದಣಿಯಾಗಿರುವ ನೀರಿನ ಟ್ಯಾಂಕರ್‌ಗಳನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶನಿವಾರ ಪರಿಶೀಲಿಸಿದ್ದಾರೆ.

‘ದೇಶದಲ್ಲೇ ಮೊದಲ ಬಾರಿಗೆ ಆನ್‌ಲೈನ್ ಮೂಲಕ ನಾಗರಿಕರು ತಮಗೆ ಅಗತ್ಯವಿರುವಷ್ಟು ಶುದ್ಧ ಕುಡಿಯುವ ನೀರಿಗೆ (ಟ್ಯಾಂಕರ್ ನೀರು) ಬೇಡಿಕೆ ಸಲ್ಲಿಸುವಂತಹ ಹೊಸ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ‘ ಎಂದು ಹೇಳಿದ್ದಾರೆ.

ADVERTISEMENT

ಬೇಸಿಗೆಯಲ್ಲಿ ನೀರಿನ ಕೊರತೆ ಹೆಚ್ಚುತ್ತದೆ. ಇದರ ಲಾಭ ಪಡೆಯಲು ಖಾಸಗಿ ಟ್ಯಾಂಕರ್‌ಗಳ ಮಾಲೀಕರು ನೀರಿನ ದರ ಹೆಚ್ಚಿಸಿ, ಜನರಿಂದ ದುಬಾರಿ ದರ ವಸೂಲಿ ಮಾಡುತ್ತಾರೆ. ಇದಕ್ಕೆ ಕಡಿವಾಣ ಹಾಕುವುದಕ್ಕಾಗಿ ಈ ಯೋಜನೆಯನ್ನು ಜಲಮಂಡಳಿ ಅನುಷ್ಠಾನಗೊಳಿಸುತ್ತಿದೆ.

‘ಸಂಚಾರಿ ಕಾವೇರಿ’ ಯೋಜನೆಗಾಗಿ ಈಗಾಗಲೇ ಸುಮಾರು 160 ಟ್ಯಾಂಕರ್‌ಗಳ ಮಾಲೀಕರು ಜಲಮಂಡಳಿಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಜಲಮಂಡಳಿಯ ಬಳಿ 80 ಟ್ಯಾಂಕರ್‌ಗಳಿವೆ. ಆಸಕ್ತರು ನೋಂದಣಿ ಮಾಡಿಕೊಳ್ಳುವಂತೆ ಜಲಮಂಡಳಿ ಪ್ರಕಟಣೆಯನ್ನೂ ನೀಡಿದೆ.

ಆ್ಯಪ್‌–ಆನ್‌ಲೈನ್‌ ವೇದಿಕೆ ಸಿದ್ಧ 

ಗ್ರಾಹಕರು, ಜಲಮಂಡಳಿ ಅಭಿವೃದ್ಧಿಪಡಿಸಿರುವ ಮೊಬೈಲ್ ಅಪ್ಲಿಕೇಷನ್ (ಆ್ಯಪ್) ಮತ್ತು ಮಂಡಳಿಯ ಜಾಲತಾಣದಲ್ಲಿರುವ ಆನ್‌ಲೈನ್‌ ಪ್ಲಾಟ್‌ಫಾರ್ಮ್‌ ಮೂಲಕ ನೀರಿನ ಬೇಡಿಕೆಯನ್ನು ಸಲ್ಲಿಸಬಹುದು. ಹಾಗೆಯೇ ಹಣವನ್ನು ಆನ್‌ಲೈನ್‌ ಮೂಲಕ ಪಾವತಿಸಬೇಕು. ಪಾರದರ್ಶಕತೆ ದೃಷ್ಟಿಯಿಂದ ಎಲ್ಲ ಪ್ರಕ್ರಿಯೆಯೂ ಆನ್‌ಲೈನ್ ಮೂಲಕವೇ ನಡೆಯುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟ್ಯಾಂಕರ್‌ ನೀರಿಗೆ ಬೇಡಿಕೆ ಸಲ್ಲಿಸುವ ಆ್ಯಪ್ ಹಾಗೂ ಆನ್‌ಲೈನ್ ವೇದಿಕೆ ಎರಡರ ಪರೀಕ್ಷಾರ್ಥ ಪ್ರಯೋಗಗಳು ಯಶಸ್ವಿಯಾಗಿವೆ. ಯೋಜನೆ ಆರಂಭವಾಗುತ್ತಿದ್ದಂತೆ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುತ್ತದೆ ಎಂದು ಜಲಮಂಡಳಿ ಮೂಲಗಳು ತಿಳಿಸಿವೆ.

ಕಾರ್ಯನಿರ್ವಹಣೆ ಹೇಗೆ ?

ಆ್ಯಪ್ ಆಧಾರಿತ ವ್ಯವಸ್ಥೆಯಲ್ಲಿ ಎಲ್ಲವನ್ನೂ ತಂತ್ರಾಂಶದ ಜೊತೆ ಸಂಯೋಜಿಸಲಾಗಿದೆ. ಅಲ್ಲಿ ಬೇಡಿಕೆ ಸಲ್ಲಿಕೆ ಮತ್ತು ಪಾವತಿಗಳನ್ನು ಡಿಜಿಟಲ್ ರೂಪದಲ್ಲಿ ಮಾಡಲಾಗುತ್ತದೆ.

ಜಲಮಂಡಳಿಗೆ ನೋಂದಣಿ ಮಾಡಿಕೊಂಡಿರುವ ಎಲ್ಲ ಟ್ಯಾಂಕರ್‌ಗಳಿಗೆ ಜಿಪಿಎಸ್ ಅಳವಡಿಸಲಾಗುತ್ತದೆ. ಜೊತೆಗೆ ಆಟೊಮ್ಯಾಟಿಕ್ ಎನೇಬಲ್ಡ್ ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ (ಆರ್‌ಎಫ್‌ಐಡಿ) ವ್ಯವಸ್ಥೆಯೂ ಇರುತ್ತದೆ.

ನೀರಿಗೆ ಬೇಡಿಕೆ ಸಲ್ಲಿಸಿದ ಗ್ರಾಹಕರು, ‘ನಾವು ಬುಕ್‌ ಮಾಡಿದ ಟ್ಯಾಂಕರ್‌ ಎಲ್ಲಿಂದ ಹೊರಟಿದೆ? ಎಲ್ಲಿ, ಎಷ್ಟು ನೀರು ತುಂಬಿಸಿಕೊಂಡಿದೆ? ಇನ್ನೂ ಎಷ್ಟು ದೂರದಲ್ಲಿದೆ ಎಂಬುದನ್ನು ಕುಳಿತಲ್ಲಿಂದಲೇ ಅರಿಯಬಹುದು. ನಂತರ ಗ್ರಾಹಕರ ನೋಂದಾಯಿತ ಮೊಬೈಲ್‌ ಸಂಖ್ಯೆಯ ಒಟಿಪಿ(ಒನ್ ಟೈಮ್ ಪಾಸ್‌ವರ್ಡ್‌) ಕಳುಹಿಸಲಾಗುತ್ತದೆ. ಈ ಒಟಿಪಿಯನ್ನು ಟ್ಯಾಂಕರ್ ಸಿಬ್ಬಂದಿಯೊಂದಿಗೆ ಹಂಚಿಕೊಂಡ ನಂತರವೇ ಅವರಿಗೆ ನೀರು ಸರಬರಾಜು ಮಾಡಲಾಗುತ್ತದೆ’ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

‘ಸಂಚಾರಿ ಕಾವೇರಿ’ ಯೋಜನೆಯ ಆ್ಯಪ್‌ ಮತ್ತು ಆನ್‌ಲೈನ್ ವೇದಿಕೆ ಸಿದ್ಧವಾಗಿದೆ. ಈ ತಿಂಗಳ ಅಂತ್ಯಕ್ಕೆ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ.
– ರಾಮ್‌ಪ್ರಸಾತ್‌ ಮನೋಹರ್ ಅಧ್ಯಕ್ಷ ಜಲಮಂಡಳಿ

ಬೆಂಗಳೂರಿನ ಜನತೆಗೆ ನಿಗದಿತ ದರದಲ್ಲಿ ನೀರು ಪೂರೈಸಲು ಸೂಚಿಸಿದ್ದೆ. ಹೀಗಾಗಿ ಜಲಮಂಡಳಿಯವರು 'ಸಂಚಾರಿ ಕಾವೇರಿ' ಎಂಬ ವಿನೂತನ ಯೋಜನೆ ಪರಿಚಯಿಸುತ್ತಿದ್ದಾರೆ. ಈ ಯೋಜನೆ ದೇಶದಲ್ಲೇ ಮೊದಲು.  ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿ

ನೀರು ಪೂರೈಕೆ ಪ್ರಕ್ರಿಯೆ

* ಗ್ರಾಹಕರು ಆ್ಯಪ್‌ನಲ್ಲಿ ನೀರಿನ ಬೇಡಿಕೆಗೆ ನೋಂದಾಯಿಸಬೇಕು

* ಅದು ಜಲಮಂಡಳಿಯ ‘ಕೇಂದ್ರ’ಕ್ಕೆ ತಲುಪಿ ಅಲ್ಲಿಂದ ಗ್ರಾಹಕರಿಗೆ ಹತ್ತಿರುವಿರುವ ಟ್ಯಾಂಕರ್‌ಗೆ ಮಾಹಿತಿ ರವಾನೆಯಾಗುತ್ತದೆ

* ಟ್ಯಾಂಕರ್‌ನವರು ‘ಕಾವೇರಿ ಸಂಪರ್ಕ ಕೇಂದ್ರ’ಕ್ಕೆ ತೆರಳುತ್ತಾರೆ

* ಟ್ಯಾಂಕರ್‌ನಲ್ಲಿರುವ ಆರ್‌ಎಫ್‌ಐಡಿ ಟ್ಯಾಗ್‌(ಫಾಸ್ಟ್‌ ಟ್ಯಾಗ್ ರೀತಿ) ಸ್ಕ್ಯಾನ್ ಆಗುತ್ತದೆ

* ಕೇಂದ್ರದಲ್ಲಿ ಟ್ಯಾಂಕರ್‌ಗೆ ನೀರು ತುಂಬಿಸಿಕೊಂಡು ಗ್ರಾಹಕರ ವಿಳಾಸದತ್ತ ಹೊರಡುತ್ತದೆ

* ಆ್ಯಪ್‌ನಲ್ಲಿ ಆಟೊ ಟ್ಯಾಕ್ಸಿ ಬುಕ್ ಮಾಡಿ ಟ್ರ್ಯಾಕ್ ಮಾಡುವ ಪರಿಕಲ್ಪನೆಯಲ್ಲೇ ಈ ವ್ಯವಸ್ಥೆಯೂ ನಡೆಯುತ್ತದೆ.

* ‘ಆರ್‌ಎಫ್‌ಐಡಿ’ಯಿಂದ ಗ್ರಾಹಕರಿಗೆ ಮತ್ತು ಜಲಮಂಡಳಿಗೆ ನೀರು ಪೂರೈಕೆಯ ಅಷ್ಟೂ ಮಾಹಿತಿ ಸಿಗುತ್ತದೆ 

‘ಟ್ಯಾಂಕರ್’ ಅವಲಂಬಿತರಿಗಾಗಿ.. ‘110 ಹಳ್ಳಿಗಳ ವ್ಯಾಪ್ತಿಯೂ ಒಳಗೊಂಡಂತೆ ನಗರದಲ್ಲಿ ಟ್ಯಾಂಕರ್‌ಗಳ ಮೇಲೆ ಅವಲಂಬಿತರಾಗಿರುವ ಜನರಿಗೆ ಉತ್ತಮ ನೀರನ್ನು ಒದಗಿಸುವುದು ನಮ್ಮ ಮುಖ್ಯ ಗುರಿಯಾಗಿದೆ. ಆ ಕಾರಣಕ್ಕಾಗಿ ಸಂಚಾರಿ ಕಾವೇರಿ ಯೋಜನೆ ಆರಂಭಿಸುತ್ತಿದ್ದೇವೆ’ ಎಂದು ಜಲಮಂಡಳಿ ಅಧ್ಯಕ್ಷ ರಾಮ್‌ಪ್ರಸಾತ್ ಮನೋಹರ್ ತಿಳಿಸಿದರು. ಸದ್ಯ 6000 ಲೀಟರ್‌ ಮತ್ತು 12000 ಲೀಟರ್‌ ಸಾಮರ್ಥ್ಯದ ಟ್ಯಾಂಕರ್‌ಗಳಿವೆ. ಗ್ರಾಹಕರ ಬೇಡಿಕೆ ಆಧರಿಸಿ ನೀರು ಪೂರೈಕೆದಾರರನ್ನು ಸಂಪರ್ಕಿಸಿ ಬೇರೆ ಬೇರೆ ಸಾಮರ್ಥ್ಯದ ಟ್ಯಾಂಕರ್‌ಗಳನ್ನು ನಿಯೋಜಿಸಲಾಗುತ್ತದೆ ಎಂದರು.

ಟ್ಯಾಂಕರ್‌ ನೀರಿನ ದರ (2 ಕಿ.ಮೀವರೆಗೆ) ಲೀಟರ್‌;ಟ್ಯಾಂಕರ್ ವೆಚ್ಚ; ನೀರಿನ ವೆಚ್ಚ; ಒಟ್ಟು ವೆಚ್ಚ  4000;₹490;₹170;₹660 5000;₹490;₹210;₹700 *2 ಕಿ.ಮೀ ನಂತರದ ಪ್ರತಿ ಒಂದು ಕಿ.ಮೀಗೆ ₹50 (ಟ್ಯಾಂಕರ್‌ ವೆಚ್ಚ) 6000;₹490;250;₹740 12000;₹800;490;₹1290 *2 ಕಿ.ಮೀ ನಂತರದ ಪ್ರತಿ ಒಂದು ಕಿ.ಮೀಗೆ ₹70 (ಟ್ಯಾಂಕರ್‌ ವೆಚ್ಚ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.